ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಪ್ರವಾಸಿಗರ ಆಕರ್ಷಿಸುತ್ತಿರುವ ಜೋಡಿ ಜಲಧಾರೆ

Published 9 ಜೂನ್ 2024, 5:26 IST
Last Updated 9 ಜೂನ್ 2024, 5:26 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣದ ಪೂರ್ವ ದಿಕ್ಕಿನ ಬೆಟ್ಟದಲ್ಲಿ ಜೋಡಿ ಜಲಧಾರೆಗಳು, ಬೆಟ್ಟದ ಗರ್ಭದಿಂದ ಪುಟಿದೇಳುವ ಕಾರಂಜಿಯ ಪ್ರವಾಹ, ಮತ್ತು ಹುಲಿಗೆಮ್ಮನ ಕೊಳ್ಳದ ಜಲಧಾರೆಗಳು ಸದ್ಯ ಸ್ಥಳೀಯರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ಉತ್ತರ ಕರ್ನಾಟಕದ ಬರದ ನಾಡಿನಲ್ಲಿ ಮಳೆಯಾದಾಗ ಮಾತ್ರ ಬೆಟ್ಟದ ಸುತ್ತ ಕೆಲವು ಜಲಧಾರೆಗಳು ಮೈದುಂಬಿಕೊಂಡು, ನಿಸರ್ಗ ಪ್ರಿಯರಿಗೆ ಖುಷಿ ಕೊಡುತ್ತವೆ.

ಬೆಟ್ಟದ ಸುತ್ತ ಸುರಿದ ಭಾರಿ ಮಳೆಯಿಂದ ಬೆಟ್ಟದ ನೀರು ಸಂಗ್ರಹವಾಗಿ ಹರಿಯುತ್ತ ಬೀಳುವಾಗ ಎರಡು ಭಾಗವಾಗಿ ಬೀಳುತ್ತವೆ. ಇದಕ್ಕೆ ಅಕ್ಕ-ತಂಗಿಯರ ದಿಡುಗು ಎಂದು ಕೆರೆಯುವರು. ದಿಡುಗಿನ ನೀರು ಬೆಟ್ಟದಲ್ಲಿ ಬಿದ್ದು ಒಂದಾಗಿ ಅಗಸ್ತ್ಯತೀರ್ಥ ಹೊಂಡವನ್ನು ಸೇರುವುದು.

ಬಾದಾಮಿಯಿಂದ ಮಹಾಕೂ ಟೇಶ್ವರ ಗುಡಿಗೆ ಬೆಟ್ಟದ ಮಾರ್ಗದ ಶಿವಬಾರ ಮೂಲಕ ಗುಡ್ಡದಲ್ಲಿ ಹರಿದು ತಟಕೋಟೆ ಗ್ರಾಮದ ಸಮೀಪ ಗುಡ್ಡದ ಗರ್ಭದಿಂದ ಹಾಲಿನ ನೊರೆಯಂತೆ ನೀರು ಪುಟಿಯುತ್ತ ಹರಿದು, ಇದೂ ಅಗಸ್ತ್ಯತೀರ್ಥ ಹೊಂಡಕ್ಕೆ ಸೇರುತ್ತದೆ.

ಜೋಡಿ ಜಲಧಾರೆಗಳು  ಸೌಂದರ್ಯವನ್ನು ಮಳೆ ಬಂದಾಗ ಮಾತ್ರ ಸವಿಯಬಹುದು. ಆದರೆ ಕಾರಂಜಿ ನೀರು ಮಳೆಯಾದ ಎಂಟು ದಿನಗಳವರೆಗೆ ನೀರು ಹರಿದು ಅಗಸ್ತ್ಯತೀರ್ಥ ಹೊಂಡಕ್ಕೆ ಸೇರುತ್ತದೆ.

ಚಾಲುಕ್ಯ ಅರಸರು ಬೆಟ್ಟದ ಮೇಲೆ ಅನೇಕ ಗೋಡೆಗಳನ್ನು ನಿರ್ಮಿಸಿ ಅಗಸ್ತ್ಯತೀರ್ಥ ಹೊಂಡಕ್ಕೆ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಮೂರು ದಿಕ್ಕುಗಳ ಬೆಟ್ಟಗಳ ಮಧ್ಯದಲ್ಲಿ ಕೆರೆ ನಿರ್ಮಿಸಿ ಜಲಮೂಲದ ಸೌಲಭ್ಯ ಮಾಡಿದ್ದು, ಚಾಲುಕ್ಯರ ತಾಂತ್ರಿಕ ಜ್ಞಾನ ಮೆಚ್ಚುವಂತದ್ದಾಗಿದೆ.

‘ಹೋದ ವರ್ಷ ಮಳಿ ಆಗಲಾರದಕ ಹೊಂಡದಾಗಿನ ನೀರು ಕಡಿಮಿ ಆಗಿ ಬತ್ತಾಕತ್ತಿತ್ತು. ನಿನ್ನೆ ಮಳಿ ಆಗಿ ಚೊಲೊ  ಆತರಿ ಒಂದ ಮಳಿಗೆ ಎರಡ ಮೆಟ್ಟಲಾ ನೀರ ಬಂದೈತ್ರಿ. ಹಿಂಗ ಮೂರು ನಾಲ್ಕ ಸಲ ಮಳಿ ಆದರ ಹೊಂಡ ಭರ್ತಿ ಆಗತೈತಿ. ಬೋರನ್ಯಾಗ ನೀರು ಹೆಚ್ಚಾಗತಾವ’ ಎಂದು ತಟಕೋಟೆ ಗ್ರಾಮದ ವೀರಪ್ಪ ಗೊನ್ನನಾಯ್ಕರ ಹೇಳಿದರು.

ಮಳೆಯಿಂದ ಬಿ.ಎನ್.ಜಾಲಿಹಾಳ ಗ್ರಾಮದ ಸಮೀಪದ ಹುಲಿಗೆಮ್ಮನಕೊಳ್ಳದ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆ ಸಹ ಸ್ಥಳೀಯರು ಮತ್ತು ಪ್ರವಾಸಿಗರನ್ನು ಆಕರ್ಷಿಸಿದೆ.

‘ ಹುಲಿಗೆಮ್ಮನಕೊಳ್ಳವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಅನೇಕ ಬಾರಿ ಸರ್ಕಾರಕ್ಕೆ ಒತ್ತಾಯಿಸಿದರೂ ಯಾವುದೇ ಅಭಿವೃದ್ಧಿ ಆಗಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT