ಸೋಮವಾರ, ಡಿಸೆಂಬರ್ 9, 2019
24 °C
ನೆರೆ ಹಾನಿಯ ಕಾರಣ ಈ ತೀರ್ಮಾನ: ಕುಲಪತಿ ಇಂದಿರೇಶ

ತೋಟಗಾರಿಕೆ ಮೇಳ ಬದಲಿಗೆ ಕ್ಷೇತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿರುವ ಹಾನಿಯಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ತುತ್ತಾಗಿದೆ. ಹೀಗಾಗಿ ಈ ಬಾರಿ ತೋಟಗಾರಿಕೆ ಮೇಳ ಆಯೋಜಿಸುತ್ತಿಲ್ಲ. ಬದಲಿಗೆ ಎರಡು ದಿನಗಳ ಕ್ಷೇತ್ರೋತ್ಸವ  ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಕೆ.ಎಂ.ಇಂದಿರೇಶ ತಿಳಿಸಿದರು. 

ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಡಿಸೆಂಬರ್‌ನಲ್ಲಿ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗುತ್ತಿತ್ತು. ಅದರ ಬದಲಿಗೆ ಈ ಬಾರಿ ಜನವರಿಯಲ್ಲಿ ಸರಳವಾಗಿ ಕ್ಷೇತ್ರೋತ್ಸವ ಆಯೋಜಿಸಿ ರೈತರಿಗೆ ನೆರವಾಗುವುದಾಗಿ ಹೇಳಿದರು. ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ವಿಶ್ವವಿದ್ಯಾಲಯದ ಸಿಬ್ಬಂದಿ ತಮ್ಮ ಒಂದು ದಿನದ ವೇತನ ನೀಡಿದ್ದಾರೆ’ ಎಂದರು.

‘ಭಾರತೀಯ ಕೃಷಿ ಅನುಸಂಧಾನ ಪರಿಷತ್‌ (ಐಸಿಎಆರ್) ನೀಡುವ ರ‍್ಯಾಂಕಿಂಗ್‌ನಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 43ನೇ ಸ್ಥಾನ ಪಡೆದಿದೆ. ವಿಮರ್ಶಾ ಸಮಿತಿ ವಿಶ್ವವಿದ್ಯಾಲಯದ ಐದು ವರ್ಷಗಳ ಪ್ರಗತಿ ಗಮನಿಸಿ ’4 ಸ್ಟಾರ್‘ ರೇಟಿಂಗ್ ನೀಡಿದೆ. ಐಸಿಎಆರ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯದ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದರು. 

ಡಿಸೆಂಬರ್ 12ಕ್ಕೆ ರಾಷ್ಟ್ರೀಯ ಮಾನ್ಯತಾ ಸಮಿತಿ: ‘ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಿಗೆ ರಾಷ್ಟ್ರೀಯ ಮಾನ್ಯತಾ ಸಮಿತಿ (ನ್ಯಾಕ್) ಡಿಸೆಂಬರ್ 12ರಿಂದ ಭೇಟಿ ನೀಡಲಿದೆ. ಮೂಲ ಸೌಕರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಈ ಸಮಿತಿಯಿಂದ ವಿಶ್ವ ವಿದ್ಯಾಲಯಕ್ಕೆ ಉತ್ತಮ ರೇಟಿಂಗ್ ದೊರಕಿದರೆ ಇನ್ನಷ್ಟು ಪ್ರಗತಿಯತ್ತ ಸಾಗಲಿದ್ದೇವೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಬಿ.ಫಕೀರುದ್ದೀನ್, ಡಾ.ವಿಷ್ಣುವರ್ಧನ ಅವರಿಗೆ ಉತ್ತಮ ಸಂಶೋಧಕ ಪ್ರಶಸ್ತಿ ನೀಡಲಾಯಿತು. ಜೊತೆಗೆ ರಾಮನಗೌಡ ಪಾಟೀಲ, ಮಂಜುನಾಥ ನಿಡಗುಂದಿ, ಮಂಜಪ್ಪ ಅವರಿಗೆ ಅತ್ಯುತ್ತಮ ಬೋಧಕೇತರ ಸಿಬ್ಬಂದಿ ಪ್ರಶಸ್ತಿ ನೀಡಲಾಯಿತು. ಉಪಕುಲಸಚಿವ ಎಲ್.ಟಿ.ಲಮಾಣಿ, ಎಚ್.ವಿ.ಸುಬ್ಬರಾವ್, ಎಂ.ವಿ.ಕುರ್ಶಿ, ಬಸವರಾಜ ಲಿಂಗನಗೌಡ, ಎಚ್.ಎಂ.ಶೆಲ್ಲಿಕೇರಿ, ಫಕೀರವ್ವ  ನಿವೃತ್ತಿಯಾಗಿದ್ದು, ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ವಿಸ್ತರಣಾ ನಿರ್ದೇಶಕರಾಗಿ ಡಾ. ಎನ್.ಜಗದೀಶ್ ಅವರಿಗೆ ಸತ್ಕಾರ ನೀಡುವ ಜೊತೆಗೆ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಶಿಷ್ಯ ವೇತನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ವಿಶ್ವ ವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪಂಗಡ ಘಟಕದ ಡಾ. ಕೆ.ಹೊನ್ನಬೈರಯ್ಯ ಮಾತನಾಡಿದರು. ಕುಲಸಚಿವ ಡಾ. ಟಿ.ಬಿ.ಅಳ್ಳೊಳ್ಳಿ, ವಿಸ್ತರಣಾ ನಿರ್ದೇಶಕ ಡಾ. ವೈ.ಕೆ.ಕೋಟಿಕಲ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ.ಎಸ್.ಕುಲಕರ್ಣಿ, ಸಂಶೋಧನಾ ನಿರ್ದೇಶಕ ಡಾ. ಎನ್.ಬಸವರಾಜ, ಆಡಳಿತಾಧಿಕಾರಿ ಎಸ್.ಐ.ಅಥಣಿ ಇದ್ದರು. 

ಪ್ರತಿಕ್ರಿಯಿಸಿ (+)