ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಕಾಯಕಲ್ಪಕ್ಕೆ ಕಾದಿವೆ ಪ್ರವಾಸಿ ತಾಣಗಳು

Published 20 ನವೆಂಬರ್ 2023, 5:46 IST
Last Updated 20 ನವೆಂಬರ್ 2023, 5:46 IST
ಅಕ್ಷರ ಗಾತ್ರ

ಬಾದಾಮಿ: ಚಾಲುಕ್ಯ ದೊರೆಗಳು 250 ವರ್ಷಗಳ ಕಾಲ ವೈಭವದಿಂದ ಸಾಮ್ರಾಜ್ಯವನ್ನಾಳಿ ಅನೇಕ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ದೇಶದ ಸಾಂಸ್ಕೃತಿಕ ಗತವೈಭವದ ಇತಿಹಾಸದ ಸಾಕ್ಷಿಗಳನ್ನು ಸ್ಮಾರಕಗಳಲ್ಲಿ ವೀಕ್ಷಿಸಬಹುದಾಗಿದೆ. ಆದರೆ, ಸ್ಮಾರಕಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.

ಚಾಲುಕ್ಯರು ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾಲು ಬೆಟ್ಟಗಳ ಪರಿಸರದಲ್ಲಿ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಹುಲಿಗೆಮ್ಮನಕೊಳ್ಳ, ನಾಗನಾಥಕೊಳ್ಳ, ಬಾಚಿನಗುಡ್ಡ ಬೆಟ್ಟಗಳಲ್ಲಿ ಗುಹಾಂತರ ಮತ್ತು ರಾಚನಿಕ ದೇವಾಲಯಗಳನ್ನು ನಿರ್ಮಿಸಿದರು.

ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಚಾಲುಕ್ಯರ ಸ್ಮಾರಕಗಳನ್ನು ವೀಕ್ಷಿಸಿಲು ಬರುವರು. ಆದರೆ, ಇಲ್ಲಿ ಪ್ರವಾಸಿಗರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಸ್ಮಾರಕಗಳಿಗೆ ರಸ್ತೆ ಸಂಪರ್ಕ, ಶೌಚಾಲಯ, ವಸತಿ ಸೌಕರ್ಯ, ಉತ್ತಮ ಹೋಟೆಲ್, ಸಾರಿಗೆ ಸಂಪರ್ಕ ಹಾಗೂ ಪಾರ್ಕಿಂಗ್ ಮತ್ತಿತರ ಮೂಲ ಸೌಲಭ್ಯಗಳು ಇಲ್ಲದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ.

ಬಾದಾಮಿ ಅಗಸ್ತ್ಯತೀರ್ಥ ದಂಡೆಯ 95 ಮನೆಗಳ ತೆರವು ಕಾರ್ಯಾಚರಣೆ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದೆ. ವಸ್ತು ಸಂಗ್ರಹಾಲಯಕ್ಕೆ ಹೋಗಲು ಸರಿಯಾದ ರಸ್ತೆ, ಮೇಣ ಬಸದಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.

ಪ್ರವಾಸಿಗರ ವಾಹನಗಳ ಪಾರ್ಕಿಂಗ್‌ ಮಾಡಲು ಪಾರ್ಕಿಂಗ್ ಪ್ಲಾಜಾ ನಿರ್ಮಾಣಕ್ಕಾಗಿ ಎಪಿಎಂಸಿಯು 9 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ಕೊಟ್ಟಿದೆ. ನಿವೇಶನ ಇನ್ನೂ ಹಸ್ತಾಂತರವಾಗಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸೌಲಭ್ಯ ಕಲ್ಪಿಸಲು ಹಿನ್ನಡೆಯಾಗಿದೆ.

ಪಟ್ಟದಕಲ್ಲಿನಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಪ್ರವಾಸೋದ್ಯಮ ಇಲಾಖೆ ಎರಡು ಎಕರೆ ಜಮೀನು ಖರೀದಿಸಿ ಅನೇಕ ವರ್ಷಗಳು ಗತಿಸಿವೆ. ವಾಹನ ಚಾಲಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ.

₹28 ಕೋಟಿ ವೆಚ್ಚದಲ್ಲಿ ಪಟ್ಟದಕಲ್ಲಿನಲ್ಲಿ ಟೂರಿಸಂ ಪ್ಲಾಜಾ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಟ್ಟಡವನ್ನು ಪೂರ್ಣಗೊಳಿಸಬೇಕಿದೆ ಎಂದು ಗ್ರಾಮದ ಸಿದ್ದಪ್ಪ ಮಾದರ ಒತ್ತಾಯಿಸುತ್ತಾರೆ.

‘ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಬಾಗಲಕೋಟೆಯಲ್ಲಿದೆ. ಬಾದಾಮಿಯಲ್ಲಿ ಆರಂಭಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಸಾ.ರಾ. ಮಹೇಶ ಮತ್ತು ಈಗ ಮುಖ್ಯಮಮತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಸೋಮವಾರ ಬಾದಾಮಿಗೆ ಬರಲಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎನ್ನುತ್ತಾರೆ ವಾಸನ.

ಬಾದಾಮಿ ಸಮೀಪದ ಪಟ್ಟದಕಲ್ಲು ಸ್ಮಾರಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಯ ಪಕ್ಕದಲ್ಲಿ ನಿಲುಗಡೆಯಾದ ವಾಹನಗಳು
ಬಾದಾಮಿ ಸಮೀಪದ ಪಟ್ಟದಕಲ್ಲು ಸ್ಮಾರಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಯ ಪಕ್ಕದಲ್ಲಿ ನಿಲುಗಡೆಯಾದ ವಾಹನಗಳು
ಮಲಪ್ರಭಾ ನದಿ ಪ್ರವಾಹದಿಂದಾಗಿ 2019ರಲ್ಲಿ ಪಟ್ಟದಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಸ್ಥಳಾಂತರಗೊಂಡ ಜನರು ತಗಡಿನ ಶೆಡ್ಡಿನಲ್ಲಿ ವಾಸಿಸುತ್ತಿದ್ದಾರೆ
ಮಲಪ್ರಭಾ ನದಿ ಪ್ರವಾಹದಿಂದಾಗಿ 2019ರಲ್ಲಿ ಪಟ್ಟದಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಸ್ಥಳಾಂತರಗೊಂಡ ಜನರು ತಗಡಿನ ಶೆಡ್ಡಿನಲ್ಲಿ ವಾಸಿಸುತ್ತಿದ್ದಾರೆ
ಐಹೊಳೆ ಸ್ಮಾರಕಗಳ ಸುತ್ತ ಮನೆಗಳು ಜಾನುವಾರು ಮತ್ತು ಚಕ್ಕಡಿಗಳು
ಐಹೊಳೆ ಸ್ಮಾರಕಗಳ ಸುತ್ತ ಮನೆಗಳು ಜಾನುವಾರು ಮತ್ತು ಚಕ್ಕಡಿಗಳು
ಬಾದಾಮಿ ಸಮೀಪದ ವಿಶ್ವಪರಂಪರೆ ತಾಣವಾದ ಪಟ್ಟದಕಲ್ಲಿನಲ್ಲಿ ಟೂರಿಸಂ ಪ್ಲಾಜಾ ಹೋಟೆಲ್ ಕಾಮಗಾರಿ ಸ್ಥಗಿತಗೊಂಡಿದೆ
ಬಾದಾಮಿ ಸಮೀಪದ ವಿಶ್ವಪರಂಪರೆ ತಾಣವಾದ ಪಟ್ಟದಕಲ್ಲಿನಲ್ಲಿ ಟೂರಿಸಂ ಪ್ಲಾಜಾ ಹೋಟೆಲ್ ಕಾಮಗಾರಿ ಸ್ಥಗಿತಗೊಂಡಿದೆ
ಪಟ್ಟದಕಲ್ಲಿನಲ್ಲಿ ಹೌಸಿಂಗ್ ಬೋರ್ಡ್ ಮೂಲಕ ಟೂರಿಸಂ ಪ್ಲಾಜಾ ಹೋಟೆಲ್ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು
ಮಲ್ಲಿಕಾರ್ಜುನ ಭಜಂತ್ರಿ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಐಹೊಳೆ ಸ್ಥಳಾಂತರ ನನೆಗುದಿಗೆ
ಬಾದಾಮಿ: ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲಾದ ಐಹೊಳೆಯಲ್ಲಿ 150 ಕ್ಕೂ ಅಧಿಕ ಸ್ಮಾರಕಗಳನ್ನು ವೀಕ್ಷಿಸಬಹುದು. ಇಲ್ಲಿನ ಕೆಲವೊಂದು ಸ್ಮಾರಕಗಳು ಮನೆಯ ಸಂದಿ ಗೊಂದಿಯಲ್ಲಿ ಸಿಕ್ಕು ಶಿಥಿಲಾವಸ್ಥೆಯಲ್ಲಿವೆ. ಗುಡಿಗಳ ಆವರಣದಲ್ಲಿ ಜಾನುವಾರುಗಳನ್ನು ಕಟ್ಟಿರುವುದರಿಂದ ಪ್ರವಾಸಿಗರು ಹೋಗದಂತಾಗಿದೆ. ರಾವಳ ಫಡಿ ಮತ್ತು ಮೇಗುತಿ ದೇವಾಲಯದ ರಸ್ತೆಯಲ್ಲಿ ತಿಪ್ಪೆಯ ಗುಂಡಿಗಳನ್ನು ದಾಟಿಕೊಂಡು ಪ್ರವಾಸಿಗರು ಹೋಗಬೇಕಾಗಿದೆ. 2013 ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಐಹೊಳೆ ಸ್ಮಾರಕಗಳ ರಕ್ಷಣೆಗೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. 2018ರಲ್ಲಿ ಬಿಜೆಪಿ ಸರ್ಕಾರ ಬಂದು ಅವರೇ ಸಚಿವರಾದರೂ ಐಹೊಳೆ ಸ್ಥಳಾಂತರದ ಬಗ್ಗೆ ಮಾತನಾಡಲಿಲ್ಲ ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. 2009 ಮತ್ತು 2019 ರಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಪಟ್ಟದಕಲ್ಲು ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿ ಬಂದಿದ್ದ ಸಿದ್ದರಾಮಯ್ಯ ಅವರನ್ನು ಪಟ್ಟದಕಲ್ಲು ಗ್ರಾಮ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ‘ನಮ್ಮ ಸರ್ಕಾರ ಬಂದಮೇಲೆ ಸ್ಥಳಾಂತರ ಮಾಡುವುದಾಗಿ’ ಆಗಿ ಭರವಸೆ ನೀಡಿದ್ದರು. ಈಗ ಅವರೇ ರಾಜ್ಯ ಮುಖ್ಯಮಂತ್ರಿಯಾಗಿದ್ದಾರೆ. ಪಟ್ಟದಕಲ್ಲು ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು ಎಂದು ಗ್ರಾಮದ ಮುತ್ತಣ್ಣ ತೋಟಗೇರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT