ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ನನ್ನ ನಂಬುತ್ತಾರೆ, ವಿರೋಧಿಗಳನ್ನಲ್ಲ: ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ

Last Updated 30 ಏಪ್ರಿಲ್ 2019, 14:27 IST
ಅಕ್ಷರ ಗಾತ್ರ

ಬಾಗಲಕೋಟೆ: ಪರ್ವತಗೌಡ ಚಂದನಗೌಡ ಗದ್ದಿಗೌಡರ (ಪಿ.ಸಿ.ಗದ್ದಿಗೌಡರ) ಕಳೆದ ಮೂರು ಅವಧಿಯಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿ ಕೆಲಸ ಮಾಡಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿಯೇ ಗುರುತಿಸಿಕೊಂಡಿರುವ ಗದ್ದಿಗೌಡರ, ಜನತಾ ಪರಿವಾರದ ಮೂಲಕ ಸಾರ್ವಜನಿಕ ಜೀವನದ ಮುನ್ನೆಲೆಗೆ ಬಂದಿದ್ದಾರೆ.

ಗದ್ದಿಗೌಡರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಡುವಿಲ್ಲದ ಪ್ರಚಾರ ಕಾರ್ಯದ ನಡುವೆಯೇ ಗೌಡರು ಹುನಗುಂದ ತಾಲ್ಲೂಕಿನ ಅಮೀನಗಡದಲ್ಲಿ ಮಂಗಳವಾರ ರಾತ್ರಿ ‘ಪ್ರಜಾವಾಣಿ’ಯೊಂದಿಗೆ ಮುಖಾಮುಖಿಯಾದರು.

* ಚುನಾವಣೆಗೆ ಸಿದ್ಧತೆ ಹೇಗಿದೆ?

ಸಾರ್ವಜನಿಕ ರ್‍ಯಾಲಿ, ರೋಡ್‌ ಶೋ, ಮನೆ ಮನೆ ಭೇಟಿಯ ಮೂಲಕ ಮತದಾರರ ಮನೆ–ಮನ ತಲುಪುತ್ತಿದ್ದೇವೆ. ಲೋಕಸಭಾ ಕ್ಷೇತ್ರದ ಆರು ಕಡೆ ಬಿಜೆಪಿ ಶಾಸಕರೇ ಇದ್ದಾರೆ. ಜೊತೆಗೆ ಎಲ್ಲ ಕಡೆ ಪಕ್ಷದ ಕಾರ್ಯಕರ್ತರ ಪಡೆಯೇ ಇದೆ. ನನ್ನ ಅವಧಿಯ ಕೆಲಸ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಆಡಳಿತ ವಿರೋಧಿ ಭಾವ ಎಲ್ಲಿಯೂ ಕಾಣುತ್ತಿಲ್ಲ. ಇದು ಗೆಲುವಿಗೆ ನೆರವಾಗಲಿದ್ದೇನೆ.

* ನಿಮ್ಮ ಅವಧಿಯ ಸಾಧನೆ ಶೂನ್ಯ ಹಾಗಾಗಿ ಮೋದಿ ಸಾಧನೆ ಹೇಳಿಕೊಂಡು ತಿರುಗುತ್ತಿದ್ದೀರಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ?

ಅದೆಲ್ಲಾ ಕಾಂಗ್ರೆಸ್‌ನವರ ಅಪಪ್ರಚಾರ. ನಮ್ಮ ಜನ ನನ್ನ ಮಾತು ನಂಬುತ್ತಾರೆ ಹೊರತು ಅವರದ್ದಲ್ಲ. ನಾನು ಮೊದಲಿನಿಂದಲೂ ಪ್ರಚಾರದಿಂದ ದೂರವಿದ್ದೇನೆ. ಕೆಲಸ ಮಾಡಿ ಅದನ್ನು ಹೇಳಿಕೊಂಡು ತಿರುಗುವ ಜಾಯಮಾನ ನನ್ನದಲ್ಲ. ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನ ಬಳಕೆ ಮಾಡಿದ ಸಂಸದರಲ್ಲಿ ರಾಜ್ಯದಲ್ಲಿ ನನಗೆ ಐದನೇ ಸ್ಥಾನ ದೊರೆತಿದೆ. ರೈಲ್ವೆ ಜೋಡು ಮಾರ್ಗ ಕಾಮಗಾರಿ ನಡೆಯುತ್ತಿದೆ. ₹10 ಕೋಟಿ ವೆಚ್ಚದಲ್ಲಿ ಬಾಗಲಕೋಟೆ ರೈಲು ನಿಲ್ದಾಣದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಭಾರತ್ ಮಾಲಾ ಯೋಜನೆಯಡಿ ಗೋವಾ–ಹೈದರಾಬಾದ್‌ ನಡುವೆ ಚತುಷ್ಪಥ ಹೆದ್ದಾರಿ, ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವ ಗದ್ದನಕೇರಿ–ಬಾಣಾಪುರ ಹೆದ್ದಾರಿ ನಿರ್ಮಾಣ ಕಾರ್ಯ ನಡೆದಿದೆ.

* ಉದ್ಯೋಗ ಸೃಷ್ಟಿಗೆ ನೀವು ಏನೂ ಮಾಡಲಿಲ್ಲ, ಜಿಲ್ಲೆಯ ಜನರ ಗುಳೇ ತಪ್ಪಿಲ್ಲ?

ಕೌಶಲ್ಯ ತರಬೇತಿ ಯೋಜನೆಯಡಿ ನಿರುದ್ಯೋಗಿಗಳಿಗೆ ತರಬೇತಿ ಕೊಟ್ಟಿದ್ದೇವೆ. ಮುದ್ರಾ ಯೋಜನೆಯಡಿ ಸ್ವ–ಉದ್ಯೋಗ ಕೈಗೊಳ್ಳಲು ಸಾಲ ಕೊಡಲಾಗಿದೆ. ಹೆಚ್ಚಿನ ಪಗಾರ ಅರಸಿ ಗೋವಾ, ಬೆಂಗಳೂರು, ಮಂಗಳೂರಿಗೆ ಗುಳೇ ಹೋಗುತ್ತಿದ್ದಾರೆಯೇ ಹೊರತು ಇಲ್ಲಿ ಕೆಲಸ ಇಲ್ಲ ಎಂದು ಅಲ್ಲ. ಇಲ್ಲಿನ ಕೆಲಸಗಳನ್ನು ಮಾಡಲು ಜನ ಸಿಗುತ್ತಿಲ್ಲ.

* ವೀಣಾ ಸ್ಪರ್ಧೆಯಿಂದ ಲಿಂಗಾಯತ ಮತಬ್ಯಾಂಕ್ ವಿಭಜನೆ ನಿಮ್ಮ ಗೆಲುವಿಗೆ ಅಡ್ಡಿಯೇ?

ಹಾಗೇನು ಇಲ್ಲ. ನನಗೆ ಜಾತಿಯ ಹೆಸರಿನಲ್ಲಿ ಮತ ಕೇಳುವುದರಲ್ಲಿ ನಂಬಿಕೆ ಇಲ್ಲ. ಎಲ್ಲ ಜಾತಿ–ಸಮಾಜದವರೂ ನನಗೆ ಬಂಧುಗಳು, ಹಿತೈಷಿಗಳು ಇದ್ದಾರೆ. ಬಿಜೆಪಿ ಹಿಂದುತ್ವದ ನೆಲೆಯಲ್ಲಿ ಸಮಾಜವನ್ನು ಪರಿಗಣಿಸಿದೆ. ಹಾಗಾಗಿ ಇಡೀ ಲಿಂಗಾಯತ ಸಮುದಾಯ ಇಡಿಯಾಗಿ ನನ್ನ ಬೆನ್ನಿಗೆ ನಿಲ್ಲಲಿದೆ.

* ಗೆದ್ದರೆ ಕ್ಷೇತ್ರದಲ್ಲಿ ನಿಮ್ಮ ಆದ್ಯತೆಗಳೇನು?

ಇಲ್ಲೊಂದು ಪುಟ್ಟ ವಿಮಾನ ನಿಲ್ದಾಣ, ಎಫ್‌ಎಂ ರೇಡಿಯೊ ತರುವೆ. ಈಗ ಅರ್ಧಕ್ಕೆ ನಿಂತಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತು ನೀಡುವೆ. ಉದ್ಯೋಗ ಆಧಾರಿತ ಉದ್ದಿಮೆಗಳನ್ನು ಜಿಲ್ಲೆಗೆ ತರುವೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ತರುವೆ. ವೈಯಕ್ತಿಕ ಕಾರಣದಿಂದ ಈ ಬಾರಿ ಟಿಕೆಟ್ ಬೇಡವೆಂದಿದ್ದೆ. ಆದರೂ ಪಕ್ಷ ತನ್ನ ಪ್ರಾಮಾಣಿಕತೆ, ಜನಬೆಂಬಲ ಗಮನಿಸಿ ಹೆಚ್ಚಿನ ಒತ್ತಾಸೆಯಿಂದ ಟಿಕೆಟ್ ನೀಡಿದೆ. ಹಾಗಾಗಿ ಈ ಬಾರಿ ಗೆದ್ದಲ್ಲಿ ಕ್ಷೇತ್ರದ ಜನರು, ಪಕ್ಷದ ನಿರೀಕ್ಷೆಗಳನ್ನು ಉಳಿಸಿಕೊಳ್ಳುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT