ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಖಂಡ ಬಾಲಕೃಷ್ಣ ಬೆಂಬಲಿಗನ ಮೇಲೆ ಹಲ್ಲೆ: ಎಸ್ಪಿಗೆ ಬಾಲಕೃಷ್ಣ ದೂರು

ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ: ಎಚ್ಚರಿಕೆ
Last Updated 22 ಅಕ್ಟೋಬರ್ 2018, 14:37 IST
ಅಕ್ಷರ ಗಾತ್ರ

ರಾಮನಗರ: ‘ಬಿಡದಿ ನಿವಾಸಿ ಮನು ಎಂಬುವರ ಮೇಲೆ ಅಲ್ಲಿನ ಠಾಣೆಯ ಎಸ್‌ಐ ಹರೀಶ್ ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಅಂತಹ ಅಧಿಕಾರಿಯನ್ನು ಸೇವೆಯಿಂದ ಅಮಾನತು ಇಲ್ಲವೇ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡ ಎಚ್.ಸಿ. ಬಾಲಕೃಷ್ಣ ಸೋಮವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್ ಅವರಿಗೆ ದೂರು ಸಲ್ಲಿಸಿದರು.

ಈ ಸಂದರ್ಭ ಪತ್ರಕರ್ತರ ಮಾತನಾಡಿದ ಅವರು ‘ವಾಲಿಬಾಲ್‌ ಆಡುವ ವಿಚಾರಕ್ಕೆ ನಡೆದ ಸಣ್ಣ ಗಲಾಟೆ ಇದಾಗಿದೆ. ಅದನ್ನೇ ನೆಪವಾಗಿಸಿಕೊಂಡು ಎಸ್‌ಐ ಹರೀಶ್‌ ಮನು ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ರಾಜಕೀಯವಾಗಿಯೂ ಮಾತುಗಳನ್ನಾಡಿದ್ದಾರೆ. ಇದೆಲ್ಲದರ ಧ್ವನಿಮುದ್ರಿಕೆಯೂ ಇದೆ. ಇದನ್ನು ಎಸ್ಪಿ ಅವರ ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.

‘ಬಿಡದಿಯ ಸಬ್‌ ಇನ್‌ಸ್ಪೆಕ್ಟರ್ ವಿರುದ್ಧ ನಾನು ನೀಡುತ್ತಿರುವ ಮೂರನೇ ದೂರು ಇದಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖಂಡರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಜ್ಞಾನವೂ ಅವರಿಗೆ ಇಲ್ಲ. ನಮ್ಮ ಕಾರ್ಯಕರ್ತರಿಗೆ ಅನಾವಶ್ಯಕವಾಗಿ ಥಳಿಸಿ ಹಿಂಸಿಸಿದ್ದಾರೆ. ಇಷ್ಟಕ್ಕೂ ಮನು ಮಾಡಿದ್ದು ದೊಡ್ಡ ಅಪರಾಧವಲ್ಲ. ದೂರು ಕೊಟ್ಟವರು ವಾಪಸ್ ತೆಗೆದುಕೊಂಡಿದ್ದಾರೆ.ಪೊಲೀಸರು ರೌಡಿಗಳನ್ನು ನಿಯಂತ್ರಿಸಬೇಕೆ ಹೊರತು ಅಮಾಯಕರನ್ನು ಹಿಂಸಿಸಬಾರದು’ ಎಂದು ಹೇಳಿದರು.

‘ನಾವೂ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದೇವೆ. ಸದ್ಯ ಇಲ್ಲಿ ಚುನಾವಣೆ ನಡೆಯುತ್ತಿದೆ. ಈ ಸಂದರ್ಭ ಇಂತಹ ಘಟನೆಗಳು ನಡೆಯಬಾರದು. ಇಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಮೂರ್ನಾಲ್ಕು ದಿನದಲ್ಲಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಕ್ರಮ ಜರುಗಿಸದೇ ಹೋದಲ್ಲಿ ನಾವು ಬೀದಿಗೆ ಇಳಿಯಬೇಕಾಗುತ್ತದೆ. ಈ ವಿಚಾರವನ್ನು ಸಂಸದರ ಗಮನಕ್ಕೆ ತಂದಿದ್ದೇನೆ. ಇದಕ್ಕೊಂದು ತಾರ್ಕಿಕ ಅಂತ್ಯ ತರಬೇಕಿದೆ’ ಎಂದರು.

ಖಾಕಿ ಬಟ್ಟೆ ಕಳಚಿ: ‘ಕೆಲವು ಅಧಿಕಾರಿಗಳು ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡುವುದು ಏಕೆ? ರಾಜಕಾರಣ ಮಾಡುವುದೇ ಆದರೆ ಅವರು ಪೊಲೀಸ್ ಬಟ್ಟೆ ಕಳಚಿ ಬರಲಿ. ಎದುರಾಳಿಗಳೂ ಅಷ್ಟೇ ಪೊಲೀಸರನ್ನು ಬಳಸಿಕೊಂಡು ರಾಜಕಾರಣ ಮಾಡುವುದನ್ನು ಬಿಡಲಿ’ ಎಂದು ಸವಾಲು ಹಾಕಿದರು.

ಶಕ್ತಿ ಇದೆ: ‘ಕಾರ್ಯಕರ್ತರಿಗೆ ತೊಂದರೆ ಆದರೆ ಅವರನ್ನು ರಕ್ಷಿಸುವ ಶಕ್ತಿ ನನಗೆ ಇದೆ. ಹಿಂದಿನಿಂದಲೂ ನಾನು ಅದನ್ನೇ ಮಾಡಿಕೊಂಡು ಬಂದಿದ್ದೇನೆ. ಕುಮಾರಸ್ವಾಮಿ ಏನೂ ನನ್ನ ಬೆನ್ನಿಗೆ ನಿಂತು ಕಾರ್ಯಕರ್ತರನ್ನು ರಕ್ಷಣೆ ಮಾಡಿಲ್ಲ’ ಎಂದರು.

***
ಕಾರ್ಯಕರ್ತರಿಗೆ ತೊಂದರೆ ಆದರೆ ಅವರನ್ನು ರಕ್ಷಿಸುವ ಶಕ್ತಿ ನನಗೆ ಇದೆ. ದಳದಲ್ಲಿ ಇದ್ದಾಗಿನಿಂದಲೂ ನಾನು ಅದನ್ನೇ ಮಾಡಿಕೊಂಡು ಬಂದಿದ್ದೇನೆ

ಎಚ್‌.ಸಿ. ಬಾಲಕೃಷ್ಣ,ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT