ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಲೋಕಸಭಾ ಚುನಾವಣೆ: ‘ಉಡುಗೊರೆ’ ಕೊಟ್ಟ ‘ಅಜ್ಞಾತವಾಸ’!

ಶ್ರೀರಾಮುಲು ರಾಜಕೀಯ ಪುನರ್ಜನ್ಮದ ಆಸೆಗೆ ತಣ್ಣೀರೆರಚಿದ ಕಾಂಗ್ರೆಸ್‌
Published 5 ಜೂನ್ 2024, 6:37 IST
Last Updated 5 ಜೂನ್ 2024, 6:37 IST
ಅಕ್ಷರ ಗಾತ್ರ

ಬಳ್ಳಾರಿ: ಈ ಲೋಕಸಭಾ ಚುನಾವಣೆಯ ಪ್ರಚಾರದುದ್ದಕ್ಕೂ ಕ್ಷೇತ್ರದ ಸಮಸ್ಯೆಗಿಂತಲೂ ಹೆಚ್ಚಾಗಿ ಚರ್ಚೆಯಾಗಿದ್ದು, ‘ಉಡುಗೊರೆ’, ‘ರಾಜಕೀಯ ಪುನರ್ಜನ್ಮ’ದ ವಿಚಾರಗಳು ಮಾತ್ರ.

‘ಬಳ್ಳಾರಿಯನ್ನು ಗೆದ್ದು ಸೋನಿಯಾ ಗಾಂಧಿ ಅವರಿಗೆ ಉಡುಗೊರೆ ನೀಡುತ್ತೇವೆ’ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರೆ, ‘ವಿಧಾನಸಭಾ ಚುನಾವಣೆ ಸೋಲಿನಿಂದಾಗಿ ಅನುಭವಿಸುತ್ತಿರುವ ಅಜ್ಞಾತ ವಾಸಕ್ಕೆ ಲೋಕಸಭಾ ಚುನಾವಣೆಯಲ್ಲಿ ಮುಕ್ತಿ ನೀಡಿ, ರಾಜಕೀಯ ಪುನರ್ಜನ್ಮ ಕೊಡಬೇಕು‘ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳುತ್ತಾ ಬಂದಿದ್ದರು.

ಆದರೆ, ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿರುವ ಕಾಂಗ್ರೆಸ್‌ನ ಸ್ಥಳೀಯ ನಾಯಕರು, ಇದನ್ನು ವರಿಷ್ಠರಿಗೆ ಉಡುಗೊರೆಯಾಗಿ ಸಮರ್ಪಿಸಿದ್ದಾರೆ. ಕಾಂಗ್ರೆಸ್ಸಿಗರ ಈ ಉಡುಗೊರೆ ಶ್ರೀರಾಮುಲು ಅವರನ್ನು ಮತ್ತೊಂದು ಅವಧಿಯ ಅಜ್ಞಾತ ವಾಸಕ್ಕೆ ದೂಡಿದೆ.

ಬಳ್ಳಾರಿ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, 2004ರ ಬಳಿಕ ಬಿಜೆಪಿ ಕಡೆಗೆ ವಾಲಿತ್ತು. ಅಲ್ಲಿಂದ ಇಲ್ಲಿಯ ವರೆಗೆ, ಈ ಎರಡು ದಶಕಗಳಲ್ಲಿ ಕಾಂಗ್ರೆಸ್‌ ಪಕ್ಷ ಒಂದು ಬಾರಿ ಉಪ ಚುನಾವಣೆಯಲ್ಲಿ ಗೆದ್ದಿದ್ದು ಬಿಟ್ಟರೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಈವರೆಗೆ ಗೆದ್ದಿರಲಿಲ್ಲ. ಆದರೆ, ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬೀಗಿದೆ. ಕಾಂಗ್ರೆಸ್‌ಗೂ ಮೊದಲೇ ಅಭ್ಯರ್ಥಿಯನ್ನು ಪ್ರಕಟಿಸಿ ಗೆಲುವಿನ ಉಮೇದಿನಲ್ಲಿದ್ದ ಬಿಜೆಪಿ ಸೋತು ಸೊರಗಿದೆ.

ಹಲವು ಕಾರಣಗಳಿಂದಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಕ್ಷೇತ್ರ ವ್ಯಾಪ್ತಿಯಲ್ಲಿ ಆರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್‌, ತನ್ನ ಪ್ರಾಬಲ್ಯ ಸಾಬೀತುಪಡಿಸಬೇಕಿತ್ತು. ಇತ್ತ ಬಿಜೆಪಿಗೂ ಅಂಥದ್ದೇ ಅನಿವಾರ್ಯತೆ ಇತ್ತು. ವಾಲ್ಮೀಕಿ ಸಮುದಾಯದ ತನ್ನ ಪ್ರಬಲ ನಾಯಕ ಶ್ರೀರಾಮುಲು ಅವರನ್ನು ಗೆಲ್ಲಿಸಿಕೊಂಡು, ಆ ಮೂಲಕ ಅವರಿಗೆ ರಾಜಕೀಯ ಪುನರ್ವಸತಿ ಕಲ್ಪಿಸಿಕೊಡುವ ಸಂದಿಗ್ಧತೆ ಅದಕ್ಕೆ ಎದುರಾಗಿತ್ತು.

ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿ ಚುನಾವಣಾ ತಾಲೀಮು ಶುರು ಮಾಡಿದ್ದ ಬಿಜೆಪಿ, ಆರಂಭದಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗಿತ್ತು. ಇತ್ತ ಕಾಂಗ್ರೆಸ್‌ ಚುನಾವಣಾ ದಿನಾಂಕ ಘೋಷಣೆಯಾದರೂ, ಅಭ್ಯರ್ಥಿಯನ್ನು ಆಯ್ಕೆ ಮಾಡದೇ ಎಂದಿನಂತೆ ತನ್ನ ವಿಳಂಬ ಧೋರಣೆ ಪ್ರದರ್ಶನ ಮಾಡಿತ್ತು. ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್‌ ಗೊಂದಲ ಮಾಡಿಕೊಂಡಿತ್ತಾದರೂ, ಅಂತಿಮವಾಗಿ ಸಂಡೂರಿನ ಶಾಸಕ ಇ. ತುಕಾರಾಂ ಅವರನ್ನು ಕಣಕ್ಕಿಳಿಸುವ ಮೂಲಕ ಚಾಣಾಕ್ಷ ಆಟ ಪ್ರದರ್ಶಿಸಿತ್ತು.

ಗೆಲುವಿಗಾಗಿ ಬಿಜೆಪಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ತನ್ನೊಳಗೆ ವಿಲೀನ ಮಾಡಿಕೊಂಡು,  ಜನಾರ್ದನ ರೆಡ್ಡಿ ಅವರನ್ನು ತನ್ನ ತೆಕ್ಕೆಗೆ ಪಡೆಯಿತು. ಸ್ವತಃ ಮೋದಿಯವರನ್ನೇ ಕರೆಸಿ ಬೃಹತ್‌ ಪ್ರಚಾರ ಸಭೆ ಆಯೋಜಿಸಿತು. ಆದರೂ ಗೆಲುವು ಪಡೆಯುವಲ್ಲಿ ವಿಫಲವಾಗಿದೆ.  ಕಾಂಗ್ರೆಸ್‌ ಎಂದರೇ ಒಳಜಗಳ ಎಂಬ ಮಾತುಗಳನ್ನು ಮೆಟ್ಟಿ ನಿಂತ ಕೈ ಪಾಳಯ, ಈ ಬಾರಿ ಸಾಂಘಿಕ ಹೋರಾಟ ಪ್ರದರ್ಶಿಸುವ ಮೂಲಕ ಗೆಲುವು ಪಡೆದು ಅಚ್ಚರಿ ಮೂಡಿಸಿದೆ. ಶ್ರೀರಾಮುಲು ಅವರ ರಾಜಕೀಯ ಪುನರ್ಜನ್ಮದ ನಿರೀಕ್ಷೆಗೆ ತಣ್ಣೀರೆರಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT