ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಎಂದರೆ ಲೂಟಿಕೋರರ ಪಕ್ಷ: ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ

Last Updated 20 ನವೆಂಬರ್ 2022, 8:44 IST
ಅಕ್ಷರ ಗಾತ್ರ

ಬಳ್ಳಾರಿ:ಕಾಂಗ್ರೆಸ್ ಎಂದರೆ ಲೂಟಿಕೋರರಪಕ್ಷವಾಗಿದೆ ಎಂದು ಮಾಜಿ ಸಿಎಂ, ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ನಡೆಯುತ್ತಿರುವಪರಿಶಿಷ್ಟ ಪಂಗಡದ (ಎಸ್‌.ಟಿ) ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಡೀ ಸಮುದಾಯಕ್ಕೆ ನಾನು ಒಂದೇ ಒಂದು ಮನವಿ ಮಾಡಿಕೊಳ್ಳುತ್ತೇನೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ಕ್ಷೇತ್ರಗಳಿವೆ. ಆದರೆ ನಾವು ಗೆದ್ದಿದ್ದು ಕೇವಲ ಐದು ಸ್ಥಾನ. ಆದರೆ ಬರುವ ಚುನಾವಣೆಯಲ್ಲಿ ಹತ್ತಕ್ಕೆ ಹತ್ತೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು’ ಎಂದರು.

ಎಸ್‌.ಟಿ ಸಮುದಾಯದ ಅನೇಕ ವರ್ಷಗಳ ಹೋರಾಟ, ಬೇಡಿಕೆಯಾಗಿದ್ದ‌ ಮೀಸಲಾತಿ ಹೆಚ್ಚಿಸಿದ್ದು ಮಾತ್ರ ಬಿಜೆಪಿ ಸರ್ಕಾರ. ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ, ಜಯಂತಿ, ಜಯಂತಿಗಾಗಿ ರಜೆ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ಸಣ್ಣ ಕೈಗಾರಿಕೆಗಳಿಗೆ ಶೇ. 50ರಷ್ಟು ಸಬ್ಸಿಡಿ ಸಿಗುತ್ತಿದೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಅವರು ಕೇಳಿದ ಪ್ರತಿಯೊಂದು ಕೆಲಸವನ್ನೂ ಮಾಡಿದ್ದೇನೆ. ಅದು ನಿಮಗೆಲ್ಲ ತಿಳಿದಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು ಎಂದು ತಿಳಿಸಿದರು.

ಈ ಸಮಾವೇಶ ನೋಡಿ ಕಾಂಗ್ರೆಸ್ ನವರಿಗೆ ಆಘಾತವಾಗಿದೆ ಎನ್ನಬಹುದು. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಬರೀ ಲೂಟಿ ಮಾಡಿದರು. ಇದನ್ನೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೂರು ತಲೆಮಾರಿಗಾಗುಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ಅಂದರೆ ಅಭಿವೃದ್ಧಿ ಪರ ಪಕ್ಷ.ಕಾಂಗ್ರೆಸ್ ಎಂದರೆ ಲೂಟಿಕೋರರಪಕ್ಷವಾಗಿದೆ ಎಂದರು.

ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡಿ, ‘ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯಕ್ಕಾಗಿ ಹಾಗೂ ಎಸ್‌ಸಿ ಸಮುದಾಯಗಳಿಗೆ ರಾಜ್ಯದ ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದ್ದಾರೆ. ಅವರಿಗೆ ನಮ್ಮ ಸಮುದಾಯಗಳು ಋಣಿಯಾಗಿರಬೇಕು. ಮೋದಿ ಹಾಗೂ ಬೊಮ್ಮಾಯಿ ಅವರ ನೃತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ‌ ಕಾರ್ಯ‌ ಮಾಡುತ್ತಿವೆ. ರಾಮುಲು ಅವರು ಹೇಳಿದ ಎಲ್ಲಾ ಮಾತುಗಳನ್ನು ನಾನು ಒಪ್ಪಿ ಅವರಿಗೆ ಬೆಂಬಲಿಸುತ್ತೇನೆ. ಭಗವಾನ್ ಬಿರಸಾ ಮುಂಡಾ ಅವರ ಜಯಂತಿಯ ಸುಸಂದರ್ಭದಲ್ಲಿ ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಇದುವರೆಗೂ‌ ಮೋಸ ಮಾಡುತ್ತಾ ಬಂದಿದೆ. ಹೀಗಾಗಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ರಾಹುಲ್ ಗಾಂಧಿ ಜೋಡೊ ಯಾತ್ರೆ ಹೊರಟಿದ್ದಾರೆ. ಸ್ವಾತಂತ್ರ್ಯ ನಂತರ ದೇಶವನ್ನು ತೋಡೊ ಮಾಡಿತ್ತು. ಆದರೆ ಈಗ ಜೋಡೊ ಯಾತ್ರೆ ಮಾಡುವ ಮೂಲಕ ನಾಟಕ ಮಾಡುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅರುಣಾಚಲದಿಂದ ಗುಜರಾತ್‌ವರೆಗೆ ಮೋದಿ ಸರ್ಕಾರ ಜೋಡಿಸುವ ಕೆಲಸ ಮಾಡುತ್ತಾ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡ ಎಲ್ಲಾ ಜಾತಿ, ಜನಾಂಗಗಳಿಗೆ ಅನೇಕ ಸೌಲಭ್ಯ ಹಾಗೂ ಯೋಜನೆಗಳನ್ನು ನೀಡುವ ಮೂಲಕ ದಲಿತರನ್ನು ಮೇಲೆತ್ತುವ ಕಾರ್ಯ ಮಾಡುತ್ತಿದೆ. ಬಳ್ಳಾರಿಯಲ್ಲಿ ಏಕಲವ್ಯ ಮಾದರಿ ಶಾಲೆಯನ್ನು ಆರಂಭಿಸಲು ಮುಂದಾಗುತ್ತೇವೆ. ತಳವಾರ ಮತ್ತು ಪರಿವಾರ‌ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ನಮ್ಮ ಕೇಂದ್ರ ಸರ್ಕಾರ ಶ್ರಮಿಸಿದೆ. ಕಾಡುಕುರುಬ, ಬೆಟ್ಟಕುರುಬರ ಸಮಸ್ಯೆ ಪರಿಹರಿಸಲಾಗುವುದು. ಸಿದ್ದರಾಮಯ್ಯ ಕೇವಲ ಮಾತುಗಾರ ಆದರೆ ಶ್ರೀರಾಮುಲು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT