ಬಳ್ಳಾರಿ: ಇಲ್ಲಿನ ಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆಯು) ಆವರಣದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ಯೋಗ ಬಂದಿದ್ದು, ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ.
ವಿವಿ ಕುಲಪತಿ ಪ್ರೊ.ಸಿದ್ದು ಪಿ. ಅಲಗೂರ ಅವರ ಅಧಿಕಾರಾವಧಿ ನಾಳೆ (ಮಂಗಳವಾರ) ಕೊನೆಗೊಳ್ಳಲಿದ್ದು ಇನ್ನೂ ಪೂರ್ಣಗೊಳ್ಳದ ಈ ಕಟ್ಟಡವನ್ನು ತರಾತುರಿಯಲ್ಲಿ ಉದ್ಘಾಟಿಸಲು ಮಹೂರ್ತ ಬೆಳಿಗ್ಗೆ 11ಗಂಟೆಗೆ ನಿಗದಿಯಾಗಿದೆ.
ಕಟ್ಟಡ ಉದ್ಘಾಟಿಸುವ ಅವಸರದಲ್ಲಿ ಶಿಷ್ಟಾಚಾರ ನಿಯಮಗಳನ್ನು ವಿವಿ ಮರೆತಂತಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿಲ್ಲ. ಅವರಿಗೆ ಆಮಂತ್ರಣವನ್ನೂ ನೀಡಿಲ್ಲ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಸಿದ್ದು ಅಲಗೂರ ಅವರೇ ಕಟ್ಟಡ ಉದ್ಘಾಟಿಸಲಿದ್ದು, ಸಿಂಡಿಕೇಟ್ ಸದಸ್ಯರಾದ ರಮೇಶ್ ಭೂಪಾಲ್ ಸವದಿ, ಸುರೇಶ್ ಆರ್. ಸಜ್ಜನ್, ಕುಲಸಚಿವ ಪ್ರೊ. ಎಸ್.ಸಿ. ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಾಣಿಜ್ತ ಮತ್ತು ನಿರ್ವಹಣಾ ಶಾಸ್ತ್ರ ಕಟ್ಟಡವನ್ನು ₹ 5.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯ, ಇಲ್ಲಿ ಬುನಾದಿ ಮೇಲೆ ಪಿಲ್ಲರ್‌ಗಳು, ಗೋಡೆಗಳು ಎದ್ದಿವೆ. ರೂಫ್ ಪೂರ್ಣಗೊಂಡಿದೆ. ಕನಿಷ್ಠ ಪಕ್ಷ ಶೇ 50 ಭಾಗ ಕಾಮಗಾರಿ ಉಳಿದಿದೆ. ಗೋಡೆ ಪ್ಲಾಸ್ಟರಿಂಗ್ ಆಗಿಲ್ಲ. ಸ್ಟೇರ್‌ಕೇಸ್‌ಗಳ ಕೆಲಸ ಅಲ್ಪಸ್ವಲ್ಪ ಮುಗಿದಿವೆ. ಶೌಚಾಲಯಗಳ ಕೆಲಸ ನಡೆಯಬೇಕಿದೆ. ಕಿಟಕಿ, ಬಾಗಿಲು ಅಳವಡಿಸಿಲ್ಲ. ಬಣ್ಣದ ಕೆಲಸವೂ ಇನ್ನಷ್ಟೆ ಆರಂಭವಾಗಬೇಕಿದೆ. ಇಲೆಕ್ಟ್ರಿಕಲ್ ಕೆಲಸವೂ ಆರಂಭವಾಗಿಲ್ಲ.
ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದೆ ಎಂದು ತೋರಿಸಲು ಕಟ್ಟಡ ಮುಂಭಾಗದ ಎಲಿವೇಷನ್ ಕೆಲಸಗಳನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ. ಅಲ್ಪಸ್ವಲ್ಪ ಪ್ರೈಮರ್ ಬಳಿದು ಬಣ್ಣ ಹಚ್ಚುವುದು ಮಾತ್ರ ಉಳಿದಿದೆ ಎಂದು ಸಾಬೀತುಪಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
‘ಯಾವುದೇ ಕಟ್ಟಡ ಪೂರ್ಣಗೊಂಡ ಬಳಿಕ ಸ್ಥಳೀಯ ಆಡಳಿತದಿಂದ ಪ್ರಮಾಣ ಪತ್ರ ಪಡೆದು ಉದ್ಘಾಟನೆ ಮಾಡುವುದು ವಾಡಿಕೆ. ಸರ್ಕಾರಿ ಕಟ್ಟಡಗಳಿಗೆ ಪ್ರಮಾಣ ಪತ್ರದ ಅಗತ್ಯವಿಲ್ಲ. ಆದರೆ, ಕಟ್ಟಡ ವಿಭಾಗದ ಎಂಜಿನಿಯರ್‌ಗಳು ಕಟ್ಟಡದ ಗುಣಮಟ್ಟ, ಸುರಕ್ಷತೆ ಮತ್ತು ಗುತ್ತಿಗೆದಾರರ ಬಿಲ್‌ಗಳನ್ನು ದೃಢೀಕರಿಸಬೇಕು’ ಎಂದು ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.
ವಾಣಿಜ್ಯಶಾಸ್ರ್ರ ಹಾಗೂ ನಿರ್ವಹಣಾ ಶಾಸ್ತ್ರದ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿರುವ ವಿ.ಬಿ. ಪ್ರಸಾದ್ ರೆಡ್ಡಿ ಅವರ ಕಂಪನಿಯ ಎಂಜಿನಿಯರ್ ಅಶೋಕ್ ಹೇಳುವಂತೆ, ‘ಕಟ್ಟಡದಲ್ಲಿ ಇನ್ನೂ ಕೆಲಸಗಳು ಬಾಕಿ ಇದ್ದು 15 ದಿನದೊಳಗೆ ಮುಗಿಯಲಿವೆ.
ವಿವಿ ಕಟ್ಟಡ ವಿಭಾಗದ ಮೂಲಗಳ ಪ್ರಕಾರ, ಕಾಮಗಾರಿ ಇನ್ನೂ ಸಾಕಷ್ಟು ಬಾಕಿ ಇದೆ. ‘ನಾವು ವಿಶ್ವವಿದ್ಯಾಲಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಯಾವುದಕ್ಕೂ ನಮ್ಮ ಸಲಹೆ ಪಡೆಯುತ್ತಿಲ್ಲ. ನಾಳೆ ಕಟ್ಟಡ ಉದ್ಘಾಟನಾ ಸಮಾರಂಭದ ಮಾಹಿತಿಯೂ ನಮಗಿಲ್ಲ. ನಮ್ಮ ಸಲಹೆ ಕೇಳಿದ್ದರೆ ಪೂರ್ಣಗೊಳ್ಳದ ಕಟ್ಟಡದ ಉದ್ಘಾಟನೆ ಸರಿಯಲ್ಲ ಎಂಬ ಅಭಿಪ್ರಾಯ ಕೊಡುತ್ತಿದ್ದೆವು. ಕುಲಪತಿ ಅವರಾಗಲೀ ಅಥವಾ ರಿಜಿಸ್ಟ್ರಾರ್ ಅವರಾಗಲೀ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಜುಲೈ 13ರಂದು ವಿವಿ ಘಟಿಕೋತ್ಸವ ನಡೆದ ದಿನದಿಂದ ಇಲ್ಲಿಯವರೆಗೆ ₹ 4.95 ಕೋಟಿ ವೆಚ್ಚದಲ್ಲಿ ಕಟ್ಟಿದ ಆಡಳಿತ ವಿಭಾಗ, ₹ 5ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಹುಡುಗರ ವಿದ್ಯಾರ್ಥಿ ನಿಲಯ, ₹ 3.5 ಕೋಟಿ ವೆಚ್ಚದ ಸಿಎಂಆರ್‌ಎಫ್ ಕಟ್ಟಡ, ಜೆಎಸ್‌ಡಬ್ಕ್ಯು ನೆರವಿನಿಂದ ಕೈಗೊಂಡ ಬಟಾನಿಕಲ್ ಗಾರ್ಡನ್, ಅಲ್ಲದೆ, ವಿವೇಕಾನಂದ ಪ್ರತಿಮೆ ಉದ್ಘಾಟನೆಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆಗೆ ವಿವಿ ಕಟ್ಟಡ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ವೈ. ಅವರನ್ನು ಸಂಪರ್ಕಿಸಿದಾಗ ಮಾತನಾಡಲು ನಿರಾಕರಿಸಿದರು.
ವಾಣಿಜ್ಯ ಶಾಸ್ತ್ರ ಕಟ್ಟಡವನ್ನು ತರಾತುರಿಯಲ್ಲಿ ಉದ್ಘಾಟಿಸುವುದು ಸರಿಯಲ್ಲ. ಕುಲಪತಿ ಏಕೆ ಅವಸರ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ
-ಮರ್ಚಡ್ ಮಲ್ಲಿಕಾರ್ಜುನಗೌಡ ಸಿಂಡಿಕೇಟ್ ಮಾಜಿ ಸದಸ್ಯ
ಕುಲಪತಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಟ್ಟಡ ಶೇ 80ರಷ್ಟು ಮುಗಿದಿದೆ. ಅವರಿರುವಾಗಲೇ ಉದ್ಘಾಟನೆ ಆಗಬೇಕು ಎಂಬ ಉದ್ದೇಶದಿಂದ ಸಿಂಡಿಕೇಟ್ ತೀರ್ಮಾನ ಕೈಗೊಂಡಿದೆ
-ಸುರೇಶ್ ಆರ್. ಸಜ್ಜನ್ ಸಿಂಡಿಕೇಟ್ ಸದಸ್ಯ
ಸಿದ್ದು ಅಲಗೂರ ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿರುವಾಗಲೇ ಕಟ್ಟಡ ಉದ್ಘಾಟನೆ ಆಗಲಿ ಎಂದು ಸಜ್ಜನ್ ಸರ್ ಸಿಂಡಿಕೇಟ್ ಸಭೆಯಲ್ಲಿ ಒತ್ತಡ ಹಾಕಿದರು
-ರಮೇಶ್ ಭೂಪಾಲ್ ಸವದಿ ಸಿಂಡಿಕೇಟ್ ಸದಸ್ಯ
ವಿಶ್ವವಿದ್ಯಾಲಯದ ಘಟಿಕೋತ್ಸವ ಹೊರತುಪಡಿಸಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ನಿಯಮ ಪಾಲಿಸುವುದು ಕಡ್ಡಾಯ
-ಮಹಮ್ಮದ್ ಜುಬೇರ್ ಹೆಚ್ಚುವರಿ ಜಿಲ್ಲಾಧಿಕಾರಿ
‘ಶೇ 80ರಷ್ಟು ಕಾಮಗಾರಿ’
‘ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಕುಲಪತಿ ಅವರಿರುವಾಗಲೇ ವಾಣಿಜ್ಯ ಶಾಸ್ತ್ರ ಕಟ್ಟಡ ಉದ್ಘಾಟನೆ ಆಗಬೇಕು ಎಂಬ ತೀರ್ಮಾನ ಇದೇ 28ರಂದು ನಡೆದ ಸಭೆಯಲ್ಲಿ ಕೈಗೊಳ್ಳಲಾಗಿತ್ತು’ ಎಂದು ಕುಲಸಚಿವ ಎಸ್.ಸಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ಕಟ್ಟಡ ಕಾಮಗಾರಿ ಶೇ 80ರಷ್ಟು ಮುಗಿದಿದೆ. ಉಳಿದಿರುವ ಕೆಲಸಗಳು ತ್ವರಿತವಾಗಿ ಮುಗಿಯಲಿವೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.