ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸಂಭ್ರಮ; ಖರೀದಿ ಭರಾಟೆ

ಕೋವಿಡ್‌ ಮರೆಯಾದ ನಂತರ ಮರಳಿದ ದೀಪಾವಳಿಯ ಸಡಗರ
Last Updated 24 ಅಕ್ಟೋಬರ್ 2022, 15:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ದೀಪಾವಳಿಯ ಹಬ್ಬದ ಸಂಭ್ರಮ ನಗರದಲ್ಲೆಡೆ ಸೋಮವಾರ ಮನೆ ಮಾಡಿತ್ತು.

ಹಬ್ಬದ ಸಂಭ್ರಮಕ್ಕೆ ಖರೀದಿ ಭರಾಟೆಯೂ ಜೋರಾಗಿತ್ತು. ನಗರದ ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಎಪಿಎಂಸಿ ಮಾರುಕಟ್ಟೆ, ರಾಮ ಟಾಕೀಸ್‌ ಬಳಿ ಸೋಮವಾರ ಬೆಳಿಗ್ಗೆಯಿಂದಲೇ ಜನಜಾತ್ರೆ ಇತ್ತು. ಜನ ಹೂ, ಹಣ್ಣು, ತರಕಾರಿ, ಬಾಳೆದಿಂಡು, ಕಾಯಿ, ಕರ್ಪೂರ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ಜನಜಂಗುಳಿ ಕಂಡು ಬಂತು.

ಹಬ್ಬಕ್ಕಾಗಿ ಹೆಚ್ಚಿನ ಬೇಡಿಕೆ ಇರುವುದರಿಂದ ಹೂ ಬೆಳೆಗಾರರು ಖುದ್ದು ಮಾರುಕಟ್ಟೆಗೆ ವಿವಿಧ ಬಗೆಯ ಹೂಗಳನ್ನು ತೆಗೆದುಕೊಂಡು ಮಾರಾಟಕ್ಕೆ ಬಂದಿದ್ದರು. ಸೋಗಿ ಮಾರುಕಟ್ಟೆ, ಎಪಿಎಂಸಿ ರಸ್ತೆ, ಗಾಂಧಿ ವೃತ್ತದಲ್ಲಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ನಿಂತು ಹೂ ಮಾರಾಟ ಮಾಡಿದರು. ಬೆಳಿಗ್ಗೆ ಹೆಚ್ಚಿನ ಜನದಟ್ಟಣೆ ಇತ್ತು. ಮಧ್ಯಾಹ್ನ ಬಿಸಿಲು ಏರುತ್ತಿದ್ದಂತೆ ಸಂಖ್ಯೆ ತಗ್ಗಿತ್ತು. ಪುನಃ ಸಂಜೆ ಜನ ಮಾರುಕಟ್ಟೆಗೆ ಬಂದು ಖರೀದಿಸಿದರು.

ಇನ್ನು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿದ್ದು, ಜನ ಕುಟುಂಬ ಸದಸ್ಯರೊಂದಿಗೆ ತೆರಳಿ ಪಟಾಕಿಗಳನ್ನು ಖರೀದಿಸಿದರು. ಕೋವಿಡ್‌ನಿಂದ ಈ ಹಿಂದಿನ ವರ್ಷ ದೀಪಾವಳಿ ಸಂಭ್ರಮ ಇರಲಿಲ್ಲ. ಈ ವರ್ಷ ಕೋವಿಡ್‌ ಮರೆಯಾಗಿರುವುದರಿಂದ ಯಾವುದೇ ಅಡೆತಡೆ, ನಿರ್ಬಂಧವಿಲ್ಲದೆ ಮುಕ್ತವಾಗಿ, ಸಂಭ್ರಮದಿಂದ ಹಬ್ಬ ಆಚರಿಸಿದರು. ವ್ಯಾಪಾರಿಗಳು ಕೂಡ ಕೈತುಂಬ ಹಣ ಗಳಿಸಿದರು. ಇನ್ನು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕೂಡ ಬಿಡುವು ಕೊಟ್ಟಿರುವುದರಿಂದ ಜನ ಹಬ್ಬದ ಸಂಭ್ರಮಕ್ಕೆ ಯಾವುದೇ ತೊಡಕಾಗಲಿಲ್ಲ.

ಇನ್ನು, ಸಂಜೆ ನಗರದಲ್ಲಿ ಮಳಿಗೆ, ಮನೆಗಳಲ್ಲಿ ಪೂಜೆ ನೆರವೇರಿಸಿ, ಕುಟುಂಬ ಸದಸ್ಯರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಜೆ ಆರಂಭಗೊಂಡ ಪಟಾಕಿಗಳ ಸದ್ದು, ರಾಕೆಟ್‌ಗಳ ಜಿಗಿತ ರಾತ್ರಿಯಿಡೀ ಕೇಳಿಸಿತು. ಇಡೀ ನಗರ ಮಾಲಿನ್ಯದಲ್ಲಿ ಮುಳುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT