ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಅಂಗನವಾಡಿಯಲ್ಲೇ ಎಲ್‍ಕೆಜಿ, ಯುಕೆಜಿ ಆರಂಭಿಸಲು ಆಗ್ರಹ

ವಿವಿಧ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಹೋರಾಟ| ಪೋಷಣ್ ಟ್ರ್ಯಾಕ್‌ಗೆ ಮಾಹಿತಿ ಸ್ಥಗಿತ
Published 15 ಜೂನ್ 2024, 15:54 IST
Last Updated 15 ಜೂನ್ 2024, 15:54 IST
ಅಕ್ಷರ ಗಾತ್ರ

ಬಳ್ಳಾರಿ: ‘ಮಕ್ಕಳ ಆರೋಗ್ಯ ಪಾಲನೆ ಮತ್ತು ಅಕ್ಷರಾಭ್ಯಾಸದ ಜೊತೆಗೆ ಸರ್ಕಾರದ ಕುಟುಂಬ ಯೋಜನೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕೇಂದ್ರಗಳಲ್ಲಿಯೇ ರಾಜ್ಯ ಸರ್ಕಾರ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು‘ ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಿತು. 

ಎಐಟಿಯುಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಹಮ್ಮಿಕೊಂಡ ದರಣಿಯಲ್ಲಿ ಮಾತನಾಡಿದ  ಫೆಡರೇಷನ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ಎಸ್. ಅರ್ಕಾಣಿ,  ‘ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಸರ್ಕಾರ ನೇಮಕ ಮಾಡಿಕೊಳ್ಳಬೇಕು. ಅಂಗನವಾಡಿಗಳನ್ನು ಬಾಡಿಗೆ ಕಟ್ಟಡಗಳಲ್ಲಿ, ಸ್ವಂತ ಕಟ್ಟಡಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಆವಕಾಶ ಕಲ್ಪಿಸಿಕೊಡಬೇಕು. ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಶೂ, ಬ್ಯಾಗ್, ಪಠ್ಯಪುಸ್ತಕಗಳನ್ನು ಅಂಗನವಾಡಿಗೆ ಪೂರೈಸಬೇಕು. ಮಕ್ಕಳಿಗೆ ಶಿಕ್ಷಣ ನೀಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ತರಬೇತಿ ನೀಡಬೇಕು. ಎಸ್‍ಡಿಎಂಸಿ ಯೋಜನೆ ರದ್ದುಪಡಿಸಬೇಕು ಮತ್ತು ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಬೇಕು’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಐಟಿಯುಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಶುಕ್ರವಾರದಿಂದ ಅನಿರ್ಧಿಷ್ಟಾವಧಿಗೆ ಅಂಗನವಾಡಿಗಳನ್ನು ಬಂದ್ ಮಾಡುತ್ತಿವೆ. ಮೊಬೈಲ್‍ಗಳಲ್ಲಿ ಪೋಷಣ್‌ ಟ್ರ್ಯಾಕ್ ಮಾಹಿತಿಗಳನ್ನು ನೀಡದೇ, ಮಾತೃವಂದನಾ, ಭಾಗ್ಯಲಕ್ಷ್ಮಿ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಲಾಗುತ್ತಿದೆ. ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.  ರಾಜ್ಯ ಸರ್ಕಾರ ಈ ಆದೇಶವನ್ನು ಕೈಬಿಡದಿದ್ದರೆ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರು ಚಲೋ, ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲು ಹಿಂಜರಿಯುವುದಿಲ್ಲ’ ಎಂದೂ ಈ ವೇಳೆ ಎಚ್ಚರಿಕೆ ನೀಡಿದರು.

ಕಾನೂನು ಸಲಹೆಗಾರರದ ಎಂಆರ್‌ಎಂ ಇಸ್ಮಾಯಿಲ್, ಎಐಟಿಯುಸಿ ಅಧ್ಯಕ್ಷ ಎಚ್.ಎ.ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಇ.ಮಂಗಮ್ಮ ಮತ್ತಿತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT