ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ | ಈರುಳ್ಳಿ ಬೆಲೆ ಕುಸಿತ: ರೈತರಿಗೆ ಆತಂಕ

ಕೆ. ಸೋಮಶೇಖರ್
Published 6 ಫೆಬ್ರುವರಿ 2024, 5:13 IST
Last Updated 6 ಫೆಬ್ರುವರಿ 2024, 5:13 IST
ಅಕ್ಷರ ಗಾತ್ರ

ಹೂವಿನಹಡಗಲಿ: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿದಿರುವುದರಿಂದ ತಾಲ್ಲೂಕಿನಲ್ಲಿ ಹಿಂಗಾರು ಋತುವಿನಲ್ಲಿ ಈರುಳ್ಳಿ ಬೆಳೆದ ರೈತರಿಗೆ ನಷ್ಟದ ಭೀತಿ ಎದುರಾಗಿದೆ.

ಕಳೆದ ಅಕ್ಟೋಬರ್, ನವೆಂಬರ್‌ನಲ್ಲಿ ಈರುಳ್ಳಿ ಬೆಲೆ ಕೆಜಿಗೆ ನೂರು ರೂಪಾಯಿ ವರೆಗೆ ಏರಿಕೆ ಆಗಿತ್ತು. ಹಿಂಗಾರು ಫಸಲಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆ ಯಿಂದ ತಾಲ್ಲೂಕಿನ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಬೆಲೆ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ ಪರಿಣಾಮ ಬೆಲೆ ಕುಸಿತ ಉಂಟಾಗಿದೆ. ಕೆಲವೇ ದಿನಗಳ ಹಿಂದೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ, ಈಗ ಬೆಳೆಗಾರರ ಕಣ್ಣಂಚಲ್ಲಿ ನೀರು ತರಿಸಿದೆ.

ತಾಲ್ಲೂಕಿನ ಇಟ್ಟಿಗಿ ಹೋಬಳಿಯ ಇಟ್ಟಿಗಿ, ಉತ್ತಂಗಿ, ತಳಕಲ್ಲು, ಮಹಾಜ ನದಹಳ್ಳಿ, ಮುಸುವಿನ ಕಲ್ಲಹಳ್ಳಿ, ಸೋಗಿ ಇತರೆ ಗ್ರಾಮಗಳ ನೀರಾವರಿ ಆಶ್ರಿತ 150 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಈರುಳ್ಳಿ ಬೆಳೆಯಲಾಗಿದೆ. ಸದ್ಯ ಫಸಲು ಕಟಾವಿಗೆ ಬಂದಿದ್ದು, ಬೆಂಗಳೂರು ಮಾರು ಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 2000 ಮೇಲ್ಪ ಟ್ಟಿದ್ದ ದರ ಈಗ ₹1200ಕ್ಕೆ ಕುಸಿದಿದೆ.

‘ಗುಣಮಟ್ಟದ ಈರುಳ್ಳಿಗೆ ಮಾತ್ರ ಒಳ್ಳೆಯ ಬೆಳೆ ನಿಗದಿಪಡಿಸುತ್ತಾರೆ. ಕಡಿಮೆ ದರ್ಜೆಯ ಈರುಳ್ಳಿಗೆ ದಲ್ಲಾಳಿಗಳು ಬೇಕಾಬಿಟ್ಟಿ ದರ ನಿಗದಿ ಮಾಡುತ್ತಾರೆ’ ಎಂದು ರೈತರು ಅಳಲು ತೋಡಿಕೊಂಡರು.

ಕಳೆದ ಐದಾರು ವರ್ಷ ಮುಂಗಾರಿನಲ್ಲಿ ಮಳೆ ಹೆಚ್ಚಾಗಿ ಈರುಳ್ಳಿಗೆ ಕೊಳೆ ರೋಗ ಬಾಧಿಸಿತ್ತು. ಬೆಳೆ ಹಾನಿಯಿಂದ ರೈತರು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಹಿಂಗಾರಿ ಫಸಲು ಉತ್ತಮವಾಗಿದ್ದರೂ ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

‘ಒಂದೂವರೆ ಎಕರೆ ಈರುಳ್ಳಿ ಬಿತ್ತನೆ, ಬೆಳೆ ನಿರ್ವಹಣೆಗೆ ₹80 ಸಾವಿರ ಖರ್ಚು ಮಾಡಿರುವೆ. ಈಗ ಈರುಳ್ಳಿ ಕಟಾವು ಮಾಡಿದ್ದು 150 ಚೀಲ ಇಳುವರಿಯ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ನಾವು ಬೆಳೆ ನಿರ್ವಹಣೆಗೆ ಮಾಡಿದ ಖರ್ಚು ಹಿಂತಿರುಗುವ ವಿಶ್ವಾಸವಿಲ್ಲ. ಕೃಷಿಗಾಗಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸುವುದೇ ಚಿಂತೆಯಾಗಿದೆ’ ಎಂದು ಉತ್ತಂಗಿಯ ರೈತ ಕೆ.ಎಂ. ವೀರಯ್ಯ ನೋವು ತೋಡಿಕೊಂಡರು.

‘ಒಂದು ಕ್ವಿಂಟಲ್ ಈರುಳ್ಳಿ ಉತ್ಪಾದನೆಗೆ ₹1800 ರಿಂದ  ₹2000 ವೆಚ್ಚವಾಗುತ್ತದೆ. ಸದ್ಯದ ಬೆಲೆ ಕುಸಿತದಿಂದ ಹಿಂಗಾರಿನಲ್ಲಿ ಈರುಳ್ಳಿ ಬೆಳೆದ ರೈತರು ನಷ್ಟ ಅನುಭವಿಸು ವಂತಾಗಿದೆ. ಸರ್ಕಾರ ರೈತರ ನೆರವಿಗೆ ಬಂದು, ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು’ ಎಂದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಎಂ. ಸಿದ್ದೇಶ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT