ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಸಸಿಗೆ ಹೆಚ್ಚಿದ ಬೇಡಿಕೆ

ಸೋನಾ ಮಸೂರಿ, ಆರ್.ಎನ್.ಆರ್, ಗಂಗಕಾವೇರಿ ಭತ್ತ ಸಸಿಗಳಿಗೆ ಭಾರಿ ಬೇಡಿಕೆ
Published 17 ಆಗಸ್ಟ್ 2023, 22:54 IST
Last Updated 17 ಆಗಸ್ಟ್ 2023, 22:54 IST
ಅಕ್ಷರ ಗಾತ್ರ

–ಡಿ.ಮಾರೆಪ್ಪ ನಾಯಕ

ಸಿರುಗುಪ್ಪ: ಸೋನಾ ಮಸೂರಿ, ಆರ್.ಎನ್.ಆರ್, ಗಂಗಕಾವೇರಿ ಭತ್ತ ಸಸಿಗಳಿಗೆ ಭಾರಿ ಬೇಡಿಕೆ ಇದ್ದು ಹೆಚ್ಚಿನ ಬೆಲೆಗೆ ಇಲ್ಲಿ ಮಾರಾಟವಾಗುತ್ತಿವೆ. ತುಂಗಭದ್ರಾ ಅಚ್ಚಕಟ್ಟು ಪ್ರದೇಶದ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡುವ ಆರ್.ಎನ್.ಆರ್, ಭತ್ತದ ಸಸಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

ಇಲ್ಲಿನ ಭತ್ತ ಸಸಿಗಳನ್ನು ಪಕ್ಕದ ಸಿಂಧನೂರು, ಬಳ್ಳಾರಿ ಮತ್ತು ಸೀಮಾಂಧ್ರ ಗಡಿಭಾಗದ ರೈತರು ಖರೀದಿಸುವುದು ರೂಢಿಯಿದ್ದು, ಇಲ್ಲಿಯ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಸಸಿಗಳನ್ನು ಹಾಕಿ ರೈತರಿಂದ ಮುಂಗಡ ಹಣ ಪಡೆಯುವ ವ್ಯವಹಾರ ನಡೆಯುತ್ತದೆ.

ಸಾಮಾನ್ಯವಾಗಿ ಪ್ರತಿವರ್ಷ ಜೂನ್‍ ಮತ್ತು ಜುಲೈ ತಿಂಗಳಲ್ಲಿ ನೀರಿನ ಲಭ್ಯತೆಯ ಮೇರೆಗೆ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಸಸಿಗಳನ್ನು ಹಾಕಿ ಮಾರಾಟ ಮಾಡಲು ಸಿದ್ದರಾಗುತ್ತಿದ್ದರು.

ಈ ವರ್ಷ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದಲ್ಲದೇ ಮುಂಗಾರು ಮಳೆಯ ವೈಫಲ್ಯದಿಂದ ನೀರಿನ ಕೊರತೆ ಉಂಟಾಗಿ ಬಹಳಷ್ಟು ರೈತರು ಸಸಿ ಮಡಿಗಳನ್ನು ಹಾಕಿ ನೀರಿಲ್ಲದೇ ಸಸಿಗಳು ಒಣಗಿ ಹೋಗಿದ್ದವು. ಇನ್ನು ಹಲವು ರೈತರು ವಿವಿಧ ಪ್ರಯತ್ನಗಳಿಂದ ಸಸಿಗಳಿಗೆ ನೀರು ಹರಿಸಿ ರಕ್ಷಿಸಿಕೊಂಡಿದ್ದರು.

ಜಲಾಶಯದಿಂದ ನದಿಗೆ ಮತ್ತು ಕಾಲುವೆಯ ಉಪ ಕಾಲುವೇಗಳಿಗೆ ನೀರು ಬಿಡುಗಡೆ ಮಾಡಿದ್ದರಿಂದ ನದಿ ಪಾತ್ರದ ಏತ ನೀರಾವರಿ ಜಮೀನುಗಳಲ್ಲಿ ಭತ್ತದ ಸಸಿ ನಾಟಿ ಮಾಡಲು ನಾ ಮುಂದು ನೀ ಮುಂದು ಎಂದು ಏಕಕಾಲಕ್ಕೆ ರೈತರು ಮುಂದಾಗಿದ್ದರಿಂದ ಸಸಿಗಳ ಬೆಲೆ ಹೆಚ್ಚಾಗಲು ಕಾರಣವಾಗಿದೆ.

ಭತ್ತದ ಕಣಜವಾದ ಈ ಭಾಗದಲ್ಲಿ ಭತ್ತ ನಾಟಿ ಮಾಡುವ ಪ್ರಕ್ರಿಯೆಗೆ ಹಳ್ಳಿಗಳಲ್ಲಿ ಕೃಷಿ ಕೂಲಿಕಾರರು ನಗರಗಳತ್ತ ಗುಳೆ ಹೋಗಿದ್ದ ಪರಿಣಾಮ ಕೂಲಿಕಾರರ ಕೊರತೆಯೂ ರೈತರನ್ನು ಕಾಡುತ್ತಿದೆ. ಇದ್ದ ಕೂಲಿಕಾರರಿಗೆ ದುಪ್ಪಟ್ಟು ಹಣ ತೆತ್ತು ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ ಎನ್ನುತ್ತಾರೆ ರೈತಾಪಿ ವರ್ಗ.

ಆಗಸ್ಟ್ ಮೊದಲನೇ ವಾರದೊಳಗೆ ಭತ್ತ ಸಸಿ ನಾಟಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು ಆದರೆ ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಜಲಾಶಯಕ್ಕೆ ನೀರು ಸಂಗ್ರಹವಿಲ್ಲದೇ ಕಾಲುವೇಗಳಿಗೆ ಆಗಸ್ಟ್‍ನಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಅವಧಿ ಮೀರಿದ ಸಸಿಗಳನ್ನು ರೈತರು ಅನಿವಾರ್ಯವಾಗಿ ಭತ್ತ ನಾಟಿ ಮಾಡಲು ಆರಂಭಿಸಿದ್ದಾರೆ.

ಅಲ್ಲದೇ ಹಗರಿ ನದಿಯಲ್ಲಿ ನೀರು ಬತ್ತಿದ್ದರಿಂದ ನದಿ ಪಾತ್ರದ ಏತ ನೀರಾವರಿಗಳಿಗೆ ಭತ್ತ ಸಸಿ ನಾಟಿ ಮಾಡಲು ವಿಳಂಬವಾಗಿದೆ, ರೈತರು ನದಿಯ ನೀರಿಗಾಗಿ ಹಗಲಿರುಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

‘ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಒಂದು ಸೆಂಟ್ಸ್‍ ಸಸಿಗೆ ಗರಿಷ್ಠ ₹1100 ರೂಪಾಯಿವರೆಗೆ ಖರೀದಿ ದರ ಇತ್ತು, ಈಗ ಒಂದು ಸೆಂಟ್ಸ್‍ ಸಸಿಗೆ ₹1400 ರಿಂದ ₹1500 ಮಾರಾಟವಾಗುತ್ತಿವೆ. ಸಸಿ ಬೆಲೆ ಗಗನಕ್ಕೇರಿದೆ ಎಂದು ಕೆಂಚನಗುಡ್ಡದ ರೈತ ಬಿ.ರಾಮಣ್ಣ ಹೇಳಿದರು.

ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲು ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ನಡೆಯುತ್ತಿವೆ. ಅವಧಿ ಮೀರಿದ ಸಸಿಗಳನ್ನು ನಾಟಿ ಮಾಡುವುದರಿಂದ ಮುಂದೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಎಂದು ಇಬ್ರಾಂಪುರದ ರೈತ ರವಿ ಆತಂಕ ವ್ಯಕ್ತಪಡಿಸಿದರು.

ಸಸಿಗಳ ಕೊರತೆ ಇರುವುದರಿಂದ ರೈತರು ಇರುವ ಸಸಿಗಳನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸುವ ಪ್ರಕ್ರಿಯೆ ಜೋರಾಗಿದೆ. ಇದರ ಜೊತೆಗೆ ಸಸಿ ಕೀಳುವ ಸಾಗಾಣಿಕೆ ಮಾಡುವ ವೆಚ್ಚ ಕೂಡ ದುಬಾರಿಯಾಗಿದೆ
–ಬೇವೂರು ಬಸವನಗೌಡ ಎಪಿಎಂಸಿ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT