ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಮಟಕಾ, ಜೂಜು ಇಳಿಕೆ: ಹೆಚ್ಚಿದ ಬೆಟ್ಟಿಂಗ್‌ ದಂಧೆ

ಮೇ ವರೆಗೆ ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿರುವ ಪೊಲೀಸರು
Published 28 ಜೂನ್ 2024, 5:00 IST
Last Updated 28 ಜೂನ್ 2024, 5:00 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಈ ವರ್ಷ ಮೇ ಅಂತ್ಯದ ವರೆಗೆ ಮಟಕಾ, ಜೂಜು, ಕ್ರಿಕೆಟ್‌ ಬೆಟ್ಟಿಂಗ್‌ ಸೇರಿ ಒಟ್ಟು 251ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, 767 ಮಂದಿಯನ್ನು ಬಂಧಿಸಲಾಗಿದೆ. ₹17,89,185 ಮೌಲ್ಯದ ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

251 ಪ್ರಕರಣದಲ್ಲಿ ಮಟಕಾ ದಂಧೆ ಪ್ರಕರಣಗಳು 165 ಆಗಿದ್ದರೆ, ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳು 15. ಜೂಜಾಟದ ಪ್ರಕರಣಗಳು 71 ಆಗಿವೆ ಎಂದು ಪೊಲೀಸ್ ಇಲಾಖೆಯ ಅಂಕಿ ಅಂಶಗಳಿಂದ ಗೊತ್ತಾಗಿದೆ.

ಮಟಕಾ ದಂಧೆಯ ಪೋಷಣೆಗೆ ವಿವಿಧ ಪಕ್ಷಗಳ ನಾಯಕರು ತೊಡಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅದೇನೇ ಇದ್ದರೂ, ‘ದಾಖಲಾಗುತ್ತಿರುವ’ ಮಟಕಾ ದಂಧೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದಾಗಿ ಇಲಾಖೆ ನೀಡಿದ ಮಾಹಿತಿಯಿಂದ ಗೊತ್ತಾಗಿದೆ.

ಜಿಲ್ಲೆಯಲ್ಲಿ 2022ರಲ್ಲಿ 472 ಮಟಕಾ ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ 421 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಮೇ ಅಂತ್ಯದ ವರೆಗೆ 165 ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಮಟಕಾ ದಂಧೆ ಪ್ರಕರಣಗಳ ಪ್ರಮಾಣ ಕಡಿಮೆಯಾಗಿದೆ.

ಜೂಜು ಪ್ರಕರಣಗಳಲ್ಲಿಯೂ ಇಳಿಕೆ ಕಂಡು ಬಂದಿದೆ. ಈ ವರ್ಷ ಮೇ ಅಂತ್ಯದ ವರೆಗೆ 71 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 266, 2022ರಲ್ಲಿ 315 ಕೇಸುಗಳು ದಾಖಲಾಗಿದ್ದವು.

ಅದರೆ, ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವುದು ಗೊತ್ತಾಗಿದೆ. 2023ರ ಇಡೀ ವರ್ಷ 16 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಆದರೆ, ಈ ವರ್ಷ ಈ ಹೊತ್ತಿಗಾಗಲೇ 15 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 46 ಪ್ರಕರಣಗಳಿದ್ದವು. 

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (ಕೊಟ್ಪ) ಅಡಿಯಲ್ಲಿ ಈ ವರ್ಷ ಇಲ್ಲಿಯ ವರೆಗೆ 2,726 ಪ್ರಕರಣಗಳು ಪತ್ತೆಯಾಗಿವೆ. ₹2,57,400 ಮೌಲ್ಯದ ದಂಡ/ ವಸ್ತು ವಶಕ್ಕೆ ಪಡೆಯಲಾಗಿದೆ. ಈ ವರ್ಷ ಅಕ್ರಮ ಮದ್ಯ ಸಾಗಣೆ, ಮಾರಾಟ, ದಾಸ್ತಾನಿಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯಿಂದ 149 ಪ್ರಕರಣ ದಾಖಲಿಸಲಾಗಿದ್ದು, 167 ಮಂದಿಯನ್ನು ಬಂಧಿಸಲಾಗಿದೆ. ₹6,540,67 ಮೌಲ್ಯದ ವಸ್ತು/ ಹಣ ವಶಕ್ಕೆ ಪಡೆಯಲಾಗಿದೆ.  

ಏರುಗತಿಯಲ್ಲಿ ಮರಳು ದಂಧೆ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಪ್ರಕರಣಗಳೂ ಏರುಗತಿಯಲ್ಲಿ ಸಾಗಿರುವುದು ಬಯಲಾಗಿದೆ. ಮಟಕಾದಂತೆಯೇ ಮರಳು ದಂಧೆಗೂ ರಾಜಕೀಯ ವಲಯದ, ಪ್ರಬಲರ ಪೋಷಣೆ ಇರುವ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಪುಷ್ಟಿ ನೀಡುವಂತೆ ಈ ವರ್ಷ ಮೇ ಅಂತ್ಯದ ವರೆಗೆ ಜಿಲ್ಲೆಯಲ್ಲಿ 44 ಪ್ರಕರಣಗಳು ದಾಖಲಾಗಿವೆ. ಆದರೆ, 2023ರ ಇಡೀ ವರ್ಷ ದಾಖಲಾಗಿದ್ದದ್ದು 58 ಪ್ರಕರಣ. 2022ರಲ್ಲಿ 57 ಪ್ರಕರಣ ದಾಖಲಾಗಿತ್ತು. ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಇತ್ತೀಚಿನ ಎರಡು ವರ್ಷಗಳಲ್ಲೇ ಈ ವರ್ಷ ಅಧಿಕ ಮರಳು ದಂಧೆ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ.

ಈ ವರ್ಷ ಅಕ್ರಮ ಮರಳು ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ 90 ಮಂದಿಯನ್ನು ಬಂಧಿಸಿದ್ದರೆ, ₹1,41,500 ಮೌಲ್ಯದ ಹಣ, ವಸ್ತು ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಟಕಾ ದಂಧೆಯನ್ನು ನಿಯಂತ್ರಿಸಲು ಶ್ರಮ ಹಾಕಲಾಗಿದೆ. ಪರಿಣಾಮವಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳು ಕಡಿಮೆಯಾಗಿವೆ
ರಂಜಿತ್‌ ಕುಮಾರ್‌ ಬಂಡಾರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಐದು ತಿಂಗಳಲ್ಲಿ 93.76 ಕೆ.ಜಿ ಗಾಂಜಾ ವಶ

ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷ ಮೇ ಅಂತ್ಯದ ವರೆಗೆ 14 ಪ್ರಕರಣಗಳಲ್ಲಿ ಒಟ್ಟು 93.66 ಕೆ.ಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. 20 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ತನ್ನ ಮಾಹಿತಿಯಲ್ಲಿ ಹೇಳಿದೆ. ಇದು ಇತ್ತೀಚಿನ ಎರಡು ವರ್ಷಗಳಲ್ಲೆ ಅಧಿಕ ಎನ್ನಲಾಗಿದೆ. 2023ರಲ್ಲಿ ಒಟ್ಟು 53 ಪ್ರಕರಣಗಳಲ್ಲಿ 97 ಜನರನ್ನು ಬಂಧಿಸಿ 56 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. 2022ರಲ್ಲಿ 24 ಪ್ರಕರಣಗಳಲ್ಲಿ 52 ಆರೋಪಿಗಳನ್ನು ಬಂಧಿಸಿ 65 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಮೇ 22ರಂದು ಅತಿ ದೊಡ್ಡ ಗಾಂಜಾ ಜಾಲ ಭೇದಿಸಿದ್ದ ನಗರದ ಕೌಲ್‌ ಬಜಾರ್‌ ಪೊಲೀಸರು ₹27 ಲಕ್ಷ ಮೌಲ್ಯದ 55 ಕೆ.ಜಿ. ಗಾಂಜಾ ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT