ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು: ಗಿಡ ನೆಡುವ ಕಾರ್ಯ ಆರಂಭ

ಮೂರಯವರೆ ಲಕ್ಷಕ್ಕೂ ಅಧಿಕ ಗಿಡ ನೆಡುವ ಗುರಿ
ರಾಮು ಅರಕೇರಿ
Published 29 ಮೇ 2024, 4:57 IST
Last Updated 29 ಮೇ 2024, 4:57 IST
ಅಕ್ಷರ ಗಾತ್ರ

ಸಂಡೂರು: ಮುಂಗಾರು ಆರಂಭಕ್ಕೆ ಮುನ್ನವೇ ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶ ಹಾಗೂ ರಸ್ತೆಬದಿ ಗಿಡ ನೆಡುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ವರ್ಷ ವಿವಿಧ ಯೋಜನೆಗಳಡಿ ಮೂರುವರೆ ಲಕ್ಷಕ್ಕೂ ಅಧಿಕ ವಿವಿಧ ತಳಿಯ ಮರಗಳನ್ನು ಬೆಳೆಸುವ ಗುರಿ ಹೊಂದಿದ್ದು, ಮೇ ತಿಂಗಳಲ್ಲೇ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ.

ಈ ವರ್ಷ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಸುರಿದು ಇಳೆ ತಂಪಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಉತ್ತರ ಮತ್ತು ದಕ್ಷಿಣ ವಲಯದಿಂದ ಈಗಾಗಲೇ ಗಿಡ ನೆಡುವ ಕಾರ್ಯ ಆರಂಭವಾಗಿದೆ. ಮೇ 20ರಿಂದ ಆರಂಭಿಸಿ ಸುಮಾರು 25 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಗಿಡ ನೆಡುವುದು ವಾಡಿಕೆ. ಆದಾಗ್ಯೂ ಈ ಬಾರಿ ನೆಲ‌ ಹಸಿಯಾಗಿದ್ದು ದಕ್ಷಿಣ ವಲಯದ ಅಂಕಮ್ಮನಾಳ್, ಜಿಗೇನಹಳ್ಳಿ, ನರಸಿಂಗಾಪುರ ಅರಣ್ಯ ಪ್ರದೇಶ ಹಾಗೂ ಸಂಡೂರು ಬೈಪಾಸ್ ರಸ್ತೆ ಇಕ್ಕೆಲಗಳಲ್ಲಿ ಗಿಡ ನೆಡಲಾಗುತ್ತಿದೆ. ಉತ್ತರ ವಲಯದ ಕಾಟನ್ ಬೈಲು, ಕೆಂಪಂಚಿ ಹಾಗೂ ಫೋರ್ಟ್ ವಾಲ್ ಬೀಟ್ ಪ್ರದೇಶದಲ್ಲಿ ಗಿಡ ಹಾಕುವ ಕಾರ್ಯ ಭರದಿಂದ ಸಾಗಿದೆ.

ಸಂಡೂರಿನ ದಕ್ಷಿಣ ಅರಣ್ಯ ವಲಯ, ಉತ್ತರ ವಲಯ ಹಾಗೂ ಸಾಮಾಜಿಕ ಅರಣ್ಯ ಸೇರಿ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಗುರಿಯನ್ನು ಈ ಬಾರಿ ಹೊಂದಲಾಗಿದೆ. ಸಂಡೂರಿನ ಮಟ್ಟಿಗೆ ಈ ದಶಕದಲ್ಲೇ ಹೆಚ್ಚು ಸಂಖ್ಯೆಯ ಗಿಡ ನೆಡುವ ಗುರಿ ಇದಾಗಿದೆ.

ಎರಡು ವಲಯಗಳು ಸೇರಿ ಕೆಎಂಇಆರ್‌ಸಿಇ ಯೋಜನೆಯಡಿ 2 ಲಕ್ಷ 41 ಸಾವಿರ, ಆರ್‌ಎಸ್‌ಪಿಡಿ‌ ಯೋಜನೆಯಲ್ಲಿ 24 ಸಾವಿರ, ಕಾಂಪ ಯೋಜ‌ನೆಯಲ್ಲಿ 16 ಸಾವಿರ ಸೇರಿ ಒಟ್ಟು 2 ಲಕ್ಷ 81 ಸಾವಿರ ಸಸ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ನರೇಗಾ, ಎಸ್ಎಫ್ಎಸ್ ಯೋಜನೆ ಮತ್ತು ರೈತರಿಗೆ ನೀಡುವ ಗಿಡಗಳು ಸೇರಿ 1 ಲಕ್ಷ 9 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ದಕ್ಷಿಣ ವಲಯ, ಉತ್ತರ ವಲಯ ಮತ್ತು ಸಾಮಾಜಿಕ ಅರಣ್ಯ ಸೇರಿ ಸುಮಾರು 3 ಲಕ್ಷ 90 ಸಾವಿರದಷ್ಟು ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ಇದರಲ್ಲಿ ರೈತರು, ಸಾರ್ವಜನಿಕರಿಗೆ ಮಾರಾಟ ಮಾಡುವ ಸಸ್ಯಗಳು‌ ಸೇರಿವೆ.

ರೈತರಿಗೆ ನೆಡಲು ಗಿಡಗಳು ಬೇಕಾದಲ್ಲಿ ಅರಣ್ಯ ಇಲಾಖೆಯ ನರ್ಸರಿ ಅಥವಾ ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ರಿಯಾಯಿತಿ ದರದಲ್ಲಿ ಸಸ್ಯಗಳನ್ನು ಮಾರಾಟ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು
ಸಯ್ಯದ್ ದಾದಾ ಖಲಂದರ್ ಆರ್‌ಎಫ್ಒ ಉತ್ತರ ವಲಯ ಸಂಡೂರು

ಲಭ್ಯವಿರುವ ಸಸ್ಯಗಳು

ಭವಿಷ್ಯದಲ್ಲಿ ಮಾನವ ಪ್ರಾಣಿ ಸಂಘರ್ಷ‌ ತಪ್ಪಿಸುವ‌ ಉದ್ದೇಶದಿಂದ ಈ ಬಾರಿ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಜಾತಿಯ ಗಿಡಗಳನ್ನು ಪ್ರಾಣಿ ಪಕ್ಷಿಗಳ‌ ಆಹಾರ ಉದ್ದೇಶದಿಂದ ನೆಡಲಾಗುತ್ತಿದೆ‌. ಬಿದಿರು ನೆಲ್ಲಿ ಹುಣಸೆ ಹಿಪ್ಪೆ ಬಸರಿ ಗೋಣಿ ಹೊಳೆ ಮತ್ತಿ ಹೊಂಗೆ ತೇಗ ಮಹಾಗನಿ ಸೀತಾಫಲ ಮಾವು ಕಮರ ಆಲ ಅರಳಿ ಬಸರಿ ಮುಂತಾದ ಗಿಡಗಳನ್ನು ಅರಣ್ಯದಲ್ಲಿ ನೆಡಲಾಗುತ್ತಿದೆ. ಮಹಾಗನಿ ಬಿದಿರು ಜಂಬನೇರಳೆ ತೇಗ ನುಗ್ಗೆ ಪೇರಲ ನಿಂಬೆ ಕರಿಬೇವು ಚೆರ್ರಿ ಗಿಡಗಳನ್ನು ಸಾರ್ವಜನಿಕರು ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು‌ ಸಿದ್ಧಗೊಳಿಸಲಾಗಿದೆ. 6X9 ಅಳತೆಯ ಗಿಡಗಳು ₹3 ಹಾಗೂ 8X12 ಅಳತೆಯ ಸಸ್ಯಗಳನ್ನು ₹6 ರ ದರದಲ್ಲಿ ಮಾರಾಟ ಮಾಡುವ ಉದ್ದೇಶವಿದೆ. ಜೂನ್ ಮೊದಲ ವಾರದಿಂದ ಸಂಡೂರಿನ ವಾರದ ಸಂತೆಯಲ್ಲೂ ಗಿಡಗಳು ದೊರೆಯಲಿವೆ ಎನ್ನುತ್ತಾರೆ ದಕ್ಷಿಣ ವಲಯದ ಡಿ.ಆರ್.ಎಫ್.ಒ‌ ತಿಪ್ಪೇಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT