ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿಗೆ ಆಧಾರವಾದ ಮಡಿಕೆ, ಮಣ್ಣೆತ್ತು!

Last Updated 1 ಜುಲೈ 2019, 19:31 IST
ಅಕ್ಷರ ಗಾತ್ರ

ಸಿರುಗುಪ್ಪ: ಮಡಿಕೆ, ಮಣ್ಣೆತ್ತು ತಯಾರಿಸಿ, ಅವುಗಳನ್ನು ಮಾರಾಟ ಮಾಡಿ ಅದರಲ್ಲೇ ವ್ಯಾಸಂಗ ಮಾಡುತ್ತಿದ್ದಾನೆ ಪಟ್ಟಣದ ಹಳೇ ಕೋಟೆ ನಿವಾಸಿ ಮಹೇಂದ್ರ.

ಕುಂಬಾರ ಮನೆತನದ ಬಸಮ್ಮನವರು ಹಿರಿಯರಿಂದ ಬಳುವಳಿಯಾಗಿ ಬಂದ ಮಡಿಕೆ, ಮಣ್ಣೆತ್ತು ತಯಾರಿಸಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಈಗ ಅವರ ಕೆಲಸಕ್ಕೆ ಮೊಮ್ಮಗ ಮಹೇಂದ್ರ ಕೂಡ ಕೈಜೋಡಿಸಿದ್ದಾನೆ. ಅಷ್ಟೇ ಅಲ್ಲ, ಸದ್ಯ ಪಿ.ಯು.ಸಿ. ಓದುತ್ತಿರುವ ಮಹೇಂದ್ರ, ಓದಿಗಾಗಿ ಮಡಿಕೆ, ಮಣ್ಣೆತ್ತುಗಳಿಂದ ಹಣ ಹೊಂದಿಸಿಕೊಳ್ಳುತ್ತಿದ್ದಾನೆ.

ಮಹೇಂದ್ರ ಕಾಲೇಜು ಮುಗಿಸಿಕೊಂಡು, ಓದಿದ ನಂತರ ಮಡಿಕೆ, ಮಣ್ಣೆತ್ತುಗಳನ್ನು ತಯಾರಿಸುತ್ತಾನೆ. ಸಮಯ ಸಿಕ್ಕಾಗಲೆಲ್ಲ ತಾನೆ ಅಜ್ಜಿಯ ಜತೆಗೆ ಅವುಗಳನ್ನು ಮಾರಾಟ ಮಾಡುತ್ತಾನೆ. ವ್ಯಾಪಾರ ಇಲ್ಲದಾಗ ಅಲ್ಲೇ ಪುಸ್ತಕ ತೆರೆದು ಓದುತ್ತಾನೆ. ಮಹೇಂದ್ರ ಅವರ ತಂದೆ ನಿಧನ ನಂತರ ಮಡಿಕೆ, ಮಣ್ಣೆತ್ತು ತಯಾರಿಸುವುದು ಬಸಮ್ಮನವರೊಬ್ಬರಿಗೆ ಆಗುತ್ತಿರಲಿಲ್ಲ. ಕುಟುಂಬಕ್ಕೆ ಅದೊಂದೆ ಆಧಾರವಾಗಿರುವುದರಿಂದ ಆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಯಿತು. ಆದರೆ, ಅದಕ್ಕಾಗಿ ಓದು ಬಿಡದೇ ಮುಂದುವರೆಸಿದ್ದಾರೆ.

ನಿತ್ಯದ ಕಾಯಕದ ಜತೆಗೆ ಮಣ್ಣೆತ್ತಿನ ಅಮವಾಸ್ಯೆಗೆ ಎರಡು ತಿಂಗಳ ಹಿಂದಿನಿಂದ ಮಣ್ಣೆತ್ತು ಮಾಡುತ್ತಿದ್ದಾರೆ. ಒಟ್ಟು 400ಕ್ಕೂ ಅಧಿಕ ಮಣ್ಣೆತ್ತು ಮಾಡಿ, ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಬಹುತೇಕ ಬಿಕರಿಯಾಗಿವೆ.

‘ಮೊಮ್ಮಗ ಓದುವುದರ ಜತೆಗೆ ಮನೆ ನಡೆಸಲು ಸಹಾಯ ಮಾಡುತ್ತಿದ್ದಾನೆ. ಆತನ ಕಾಲ ಮೇಲೆ ಆತ ನಿಂತರೆ ಸಾಕು. ಓದಿ ನೌಕರಿ ಸಿಕ್ಕರೆ ಕಷ್ಟಪಡುವುದು ತಪ್ಪುತ್ತದೆ’ ಎನ್ನುತ್ತಾರೆ ಬಸಮ್ಮ.

‘ಮಂಗಳವಾರ (ಜು. 2) ಮಣ್ಣೆತ್ತಿನ ಅಮಾವಾಸ್ಯೆ ಇದೆ. ಜನ ದೊಡ್ಡ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಹಣ ಗಳಿಸಬಹುದು ಎಂದು ಅಜ್ಜಿ, ನಾನು ಸಾಕಷ್ಟು ದುಡಿದು ತಯಾರಿಸಿದ್ದೇವೆ. ಬಹುತೇಕ ಮಾರಾಟಗೊಂಡಿವೆ. ಅದರಿಂದ ಬಂದ ಹಣದಲ್ಲಿ ಮನೆ ಹಾಗೂ ಓದಿಗೆ ಬಳಸಿಕೊಳ್ಳುವೆ’ ಎಂದು ಮಹೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT