ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ: ದಶಕ ಕಳೆದರೂ ಬಾರದ ತುಂಗಭದ್ರಾ ನೀರು!

ಆಮೆಗತಿ ವೇಗದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ
Published 27 ಅಕ್ಟೋಬರ್ 2023, 7:27 IST
Last Updated 27 ಅಕ್ಟೋಬರ್ 2023, 7:27 IST
ಅಕ್ಷರ ಗಾತ್ರ

ಕಂಪ್ಲಿ: ದಶಕದ ಹಿಂದೆ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಎರಡು ಯೋಜನೆ ಕಾಮಗಾರಿಗಳು ಇಂದಿಗೂ ಮುಂದುವರಿದಿದ್ದು, ಜನರ ತುಂಗಭದ್ರಾ ನದಿ ನೀರು ಕನಸಾಗಿಯೇ ಉಳಿದಿದೆ.

ಈ ಯೋಜನೆಗೆ ಚಾಲನೆ ದೊರೆತಾಗ ತಾಲ್ಲೂಕಿನ 17 ಹಳ್ಳಿಗಳ ಜನರು ‘ಗಂಗಾ ಸ್ನಾನ ತುಂಗಾ ಪಾನ’ ಎನ್ನುವ ನಾಣ್ಣುಡಿ ನೆನಪಿಸಿಕೊಂಡಿದ್ದರು. ಆದರೆ, ಇನ್ನು ಕೆಲ ಹಳ್ಳಿಗಳ ಜನರು ಆಮೆಗತಿ ವೇಗದ ಕಾಮಗಾರಿ ಕಂಡು ಇಂದು ‘ತುಂಗಭದ್ರಾ ನದಿ ನೆಂಟಸ್ತನ, ಕುಡಿಯುವ ನೀರಿಗೆ ಬಡತನ’ ಎನ್ನುತ್ತಿದ್ದಾರೆ.

2011-12ರಲ್ಲಿ ತಾಲ್ಲೂಕಿನ ಕಣವಿತಿಮ್ಮಲಾಪುರ, ದೇವಸಮುದ್ರ, ಮೆಟ್ರಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ(ಬುಕ್ಕಸಾಗರ) ₹13.35 ಕೋಟಿ, ಸಣಾಪುರ ಸೇರಿ 9 ಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಗೆ ₹ 7.50 ಕೋಟಿ ಅನುದಾನಕ್ಕೆ ಅಂದಿನ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ಬುಕ್ಕಸಾಗರ ಯೋಜನೆ ಸದ್ಯ ಅದೇ ಗ್ರಾಮಕ್ಕೆ ಸೀಮಿತವಾಗಿದೆ. ಇದರ ವ್ಯಾಪ್ತಿಯ ಕಣವಿತಿಮ್ಮಲಾಪುರ, ನಂ.10 ಮುದ್ದಾಪುರ, ದೇವಸಮುದ್ರ, ಮೆಟ್ರಿ ಗ್ರಾಮಗಳಿಗೆ ನದಿ ನೀರು ಇನ್ನು ಮರೀಚಿಕೆಯಾಗಿದೆ. ಸಣಾಪುರ ಯೋಜನೆ ವ್ಯಾಪ್ತಿಯ ಬೆಳಗೋಡುಹಾಳು, ಬಸವಣ್ಣಕ್ಯಾಂಪ್, ಕೊಂಡಯ್ಯಕ್ಯಾಂಪ್‍ಗೂ ನದಿ ನೀರು ತಲುಪಿಲ್ಲ.

ಬುಕ್ಕಸಾಗರ ಯೋಜನೆಗೆ ಸಂಬಂಧಿಸಿದಂತೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪೈಪ್‍ಲೈನ್ ಅಳವಡಿಸಲು ಇಲಾಖೆ ಅನುಮತಿಗಾಗಿ ವರ್ಷಗಟ್ಟಲೇ ಕಾಯಬೇಕಾಯಿತು. ನೀರೆತ್ತುವ ಪಂಪ್‍ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲದೆ ಮೋಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿತು. ಕೆಲವೆಡೆ ಅದಾಗಲೇ ಅಳವಡಿಸಿದ್ದ ಪೈಪ್‍ಲೈನ್ ಹಾಳಾಗಿದ್ದವು. ಈ ಕಾರಣಕ್ಕೆ ಅವಧಿಯೊಳಗೆ ನದಿ ನೀರು ತಲುಪಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ನದಿ ನೀರು ತಲುಪದ ಗ್ರಾಮಗಳು ಇಂದಿಗೂ ಬೋರ್‌ವೆಲ್ ನೀರನ್ನೇ ಆಧರಿಸಿವೆ.

‘ಯೋಜನೆಗೆ ಸಂಬಂಧಿಸಿದಂತೆ ನಮ್ಮೂರಿನಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ. ಅದು ಕೂಡ ಗುಣಮಟ್ಟದಿಂದ ಕೂಡಿಲ್ಲ’ ಎನ್ನುತ್ತಾರೆ ದೇವಸಮುದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾರೆಮ್ಮ ಅವರು.

‘ಈ ವರ್ಷ ಬೇಸಿಗೆಗೂ ಮುನ್ನವೇ ತಾಪಮಾನ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ನೀರಿಗೆ ತತ್ವಾರ ಉಂಟಾಗಬಹುದು. ಆದಷ್ಟು ಬೇಗನೇ ಯೋಜನೆ ಪೂರ್ಣಗೊಳಿಸಬೇಕು’ ಎಂದು ಮೆಟ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎಚ್. ಹೊನ್ನೂರಮ್ಮ ಅವರು ಆಗ್ರಹಿಸಿದ್ದಾರೆ.

‘ತಾಂತ್ರಿಕ ತೊಂದರೆ ಸರಿಪಡಿಸಿ ನೀರು ಪೂರೈಕೆ’

‘ಕೆಲ ಹಳ್ಳಿಗಳಿಗೆ ಈಗಾಗಲೇ ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ ಹಳ್ಳಿಗಳಲ್ಲಿ ಪೈಪ್‍ಗಳಿಗೆ ಹಾನಿಯಾಗಿದ್ದು ಸರಿಪಡಿಸಲಾಗುತ್ತಿದೆ. ಬುಕ್ಕಸಾಗರ ಯೋಜನೆಗೆ ಸಂಬಂಧಿಸಿದಂತೆ ಪಂಪ್‍ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಎಲ್ಲ ತಾಂತ್ರಿಕ ತೊಂದರೆಗಳನ್ನು ಶೀಘ್ರ ಸರಿಪಡಿಸಿ ನೀರು ಪೂರೈಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗದ ಎಇಇ ವಿನಾಯಕ ಎಂ.ಎನ್. ಭರವಸೆ ನೀಡಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಒಂದು ತಿಂಗಳಲ್ಲಿ ಎರಡು ಯೋಜನೆ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ತುಂಗಭದ್ರಾ ನದಿ ನೀರು ಲಭ್ಯವಾಗಲಿದೆ
-ಜೆ.ಎನ್.ಗಣೇಶ್ ಕಂಪ್ಲಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT