ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ತುಂಗಭದ್ರೆ: 8 ದಿನಕ್ಕೊಮ್ಮೆ ನೀರು

ಹಳ್ಳ ಹಿಡಿದ ಜೆಜೆಎಂ ಕಾಮಗಾರಿ; ಕೆರೆ ಇದ್ದರೂ ತಪ್ಪುತ್ತಿಲ್ಲ ನೀರಿನ ಬವಣೆ
ಡಿ.ಮಾರೆಪ್ಪ ನಾಯಕ
Published 24 ಮಾರ್ಚ್ 2024, 6:36 IST
Last Updated 24 ಮಾರ್ಚ್ 2024, 6:36 IST
ಅಕ್ಷರ ಗಾತ್ರ

ಸಿರುಗುಪ್ಪ: ನಗರದ ಹತ್ತಿರ ಹರಿಯುವ ತುಂಗಭದ್ರ ನದಿಯು ಸಂಪೂರ್ಣವಾಗಿ ಬತ್ತಿಹೋಗಿದ್ದು, ನಗರಸಭೆ ವತಿಯಿಂದ 8 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ನಗರ ನಿವಾಸಿಗಳು ಆರೋಪಿಸಿದ್ದಾರೆ.

ಈ ಹಿಂದೆ ತಾಲ್ಲೂಕಿನ ದೇಶನೂರು ಗ್ರಾಮದ ವಿನಾಯಕ ನಗರದ ಹತ್ತಿರ ಹರಿಯುವ ತುಂಗಭದ್ರನದಿಯಲ್ಲಿ ಸುಮಾರು 2 ಕಿ.ಮೀ.ಉದ್ದ, 80ಅಡಿ ಆಳ, 50ಮೀಟರ್ ಅಗಲ ಇರುವ ಹರಿಗೋಲ್‍ ಘಾಟ್‍ನಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದರು. ಈ ವರ್ಷ ಬೇಸಿಗೆಯ ಮುನ್ನವೇ ತುಂಗಭದ್ರ ನದಿಯು ಬತ್ತಿಹೋಗಿದ್ದು, ಸಿರುಗುಪ್ಪದ ಜನರು ನೀರಿಗಾಗಿ ನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ.

ನಗರದ ವಿವಿಧ ವಾರ್ಡಗಳಿಗೆ ನೀರು ಪೂರೈಕೆ ಮಾಡಲು ಪರ್ಯಾಯವಾಗಿ ಎರಡು ಮೂರು ವಾರ್ಡಗಳ ಮಧ್ಯದಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರು ಸರಬರಾಜು ಮಾಡುತ್ತಿದ್ದಾರೆ. ಇಷ್ಟಾದರೂ ನಗರದಲ್ಲಿ ಸಂಪೂರ್ಣವಾಗಿ ನೀರು ಸರಬರಾಜು ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

ತುಂಗಭದ್ರಾ ನದಿಯಲ್ಲಿರುವ ಹರಿಗೋಲ್ ಘಾಟ್‌ನಿಂದ ನಗರಸಭೆಯ ಜಾಕ್‌ವೆಲ್‍ವರೆಗೆ ನೀರು ಹರಿಸಲು ₹1.40ಕೋಟಿ ವೆಚ್ಚಮಾಡಿ ಪೈಪ್‌ಲೈನ್‌ಗಳನ್ನು ಹಾಕಿ, ನೀರೆತ್ತಲು 10 ಎಚ್.ಪಿ.ಯ 5 ಮೋಟಾರ್‌ಗಳನ್ನು ಅಳವಡಿಸಿದರೂ ಬೇಸಿಗೆಯಲ್ಲಿ ನೀರಿನ ಬಣೆ ತಪ್ಪುತ್ತಿಲ್ಲ.

ಸುಮಾರು 70ಸಾವಿರ ಜನಸಂಖ್ಯೆ ಹೊಂದಿರುವ ಸಿರುಗುಪ್ಪ ನಗರಕ್ಕೆ ನೀರಿನ ಮೂಲವಾಗಿರುವ ತುಂಗಭದ್ರೆಯು ಪ್ರತಿವರ್ಷ ಬೇಸಿಗೆಯಲ್ಲಿ ಬತ್ತಿ ಹೋದಾಗ ಹರಿಗೋಲ್ ಘಾಟ್‌ನಿಂದ ಎಪ್ರಿಲ್-ಮೇ ತಿಂಗಳಲ್ಲಿ ನೀರನ್ನು ನಗರಕ್ಕೆ ಹರಿಸಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಸಿದ್ದಪ್ಪ ನರದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಕೆರಿಯಿಂದ ನಗರಕ್ಕೆ ನೀರು ಪೂರೈಕೆ ಮಾಡಲು ನಗರಸಭೆ ಮುಂದಾಗಿದ್ದರು ಸಂಪೂರ್ಣವಾಗಿ ಸರಬರಾಜು ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ನೀರು ಸರಬರಾಜು ಕೇಂದ್ರದಲ್ಲಿ ಶುದ್ದೀಕರಣ ಘಟಕದಲ್ಲಿ ಸರಿಯಾಗಿ ಶುದ್ಧೀಕರಣ ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರು ಈ ನೀರನ್ನು ಕುಡಿಯಲು ಬಳಸುತ್ತಿಲ್ಲ. ನಗರಸಭೆಯ ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿರುವುದರಿಂದ ಖಾಸಗಿ ಶುದ್ಧೀಕರಣ ಘಟಕಗಳ ಮೇಲೆ ಅವಲಂಬನೆ ಅನಿವಾರ್ಯವಾಗಿದೆ. 

ಜೆಜೆಎಂ ಕಾಮಗಾರಿಯಲ್ಲಿ ಇನ್ನೂ ಅನೇಕ ಕಾಲೊನಿಗಳಿಗೆ ಪೈಪ್‍ ಲೈನ್ ಅಳವಡಿಕೆಯಾಗಿಲ್ಲ. ಉಳ್ಳವರಿಗೆ ನಗರಸಭೆಯ ನೀರಿನ ಟ್ಯಾಂಕರ್ ಮೂಲಕ ಸರಬರಾಜು, ಸಾಮಾನ್ಯ ಜನರ ಗೋಳು ಕೇಳುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಅಧಿಕಾರಿಗಳ ನಿರ್ಲಕ್ಷ್ಯ ಹಿಡಿದ ಕೈಗನ್ನಡಿಯಾಗಿದೆ. ಇನ್ನೂ ಬಿಡಾಡಿ ದನಕರಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿಯಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಗರದಲ್ಲಿ ದಿನಬಳಕೆಗೆ ನೀರು ಪೂರೈಕೆ ಮಾಡಲು ಒಟ್ಟು 225 ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದು, ಇದರಲ್ಲಿ 8-10 ಬೋರ್‌ವೆಲ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ.ಇನ್ನೂಳಿದ ಬೋರ್‌ವೆಲ್‌ಗಳಿಂದ ದಿನಬಳಕೆಗೆ ಬೇಕಾದ ನೀರನ್ನು ಮಿನಿ ವಾಟರ್ ಟ್ಯಾಂಕ್ ಮತ್ತು ಕೆಲವು ಕಡೆ ಪೈಪ್‌ಲೈನ್‌ಗಳಿಗೆ ನೇರವಾಗಿ ನೀರು ಹರಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿರುಗುಪ್ಪ ನಗರದ ಬಾಲಾಜಿ ಕಾಲೊನಿಯ ನಿವಾಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿಕೊಳ್ಳುತ್ತಿರುವುದು 
ಸಿರುಗುಪ್ಪ ನಗರದ ಬಾಲಾಜಿ ಕಾಲೊನಿಯ ನಿವಾಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿಕೊಳ್ಳುತ್ತಿರುವುದು 
ಸಿರುಗುಪ್ಪ ನಗರದ ನೀರು ಸರಬರಾಜು ಕೇಂದ್ರದಲ್ಲಿ ನಗರಸಭೆಯ ನೀರಿನ ಟ್ಯಾಂಕರ್‌ನಿಂದ ನೀರು ತುಂಬಿಸುತ್ತಿರುವುದು 
ಸಿರುಗುಪ್ಪ ನಗರದ ನೀರು ಸರಬರಾಜು ಕೇಂದ್ರದಲ್ಲಿ ನಗರಸಭೆಯ ನೀರಿನ ಟ್ಯಾಂಕರ್‌ನಿಂದ ನೀರು ತುಂಬಿಸುತ್ತಿರುವುದು 

ನೀರಿನ ಸಮಸ್ಯೆ ಹೇಳಿದರೆ ಕಚೇರಿಗೆ ಬಂದು ದೂರು ಕೊಡಿ ಎಂದು ಹೇಳಿ ಹೋಗುತ್ತಾರೆ. ಚುನಾವಣೆಯಲ್ಲಿ ಗೆದ್ದು ಹೋದವರು ಜಾಣ ಕುರುಡರಂತೆ ಇದ್ದಾರೆ 

–ಸರೋಜಮ್ಮ ನಿವಾಸಿ ಸಿರುಗುಪ್ಪ 

ನಗರಸಭೆಯಿಂದ ಸಾವಿರ ಸಾವಿರ ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ನೀರು ಮಾತ್ರ ಸರಿಯಾಗಿ ಬಿಡುವುದಿಲ್ಲ.

–ನಾಯಕರ ಹುಲಿಗೆಮ್ಮ ಸದಾಶಿವ ನಗರ ಸಿರುಗುಪ್ಪ 

ಈ ಹಿಂದೆ ಹರಿಗೋಲ್ ಘಾಟ್‌ನಿಂದ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದು ಸದ್ಯ ಬೋರ್‌ವೆಲ್‍ ಕೆರೆ ನೀರನ್ನು ಸರಬರಾಜು ಮಾಡುವ ಕ್ರಮ ತೆಗೆದುಕೊಳ್ಳಲಾಗಿದೆ

 – ಗಂಗಾಧರಗೌಡ ಎ.ಇ.ಇ ನಗರಸಭೆ ಸಿರುಗುಪ್ಪ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT