ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಊಟ ಸೇವನೆ: 15 ಮಕ್ಕಳು ಅಸ್ವಸ್ಥ

ಹುಲಿಕುಂಟೆ ಗ್ರಾಮದ ಕೇಂದ್ರದಲ್ಲಿ ಘಟನೆ
Last Updated 11 ಜುಲೈ 2017, 11:48 IST
ಅಕ್ಷರ ಗಾತ್ರ

ಕೂಡ್ಲಿಗಿ:  ಅಂಗನವಾಡಿಯ ಮಧ್ಯಾಹ್ನದ ಊಟ ಸೇವಿಸಿ ಸುಮಾರು 15 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ, ಕೂಡ್ಲಿಗಿ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಕೂಡಲೇ ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಅಂಗನವಾಡಿಯಲ್ಲಿ ಎಂದಿನಂತೆ ಮಧ್ಯಾಹ್ನ ಮಕ್ಕಳಿಗೆ ಚಿತ್ರಾನ್ನ ನೀಡಲಾಗಿತ್ತು. ಇದನ್ನು ತಿಂದ ಸ್ವಲ್ಪ ಹೊತ್ತಿನಲ್ಲೇ ಕೆಲ ಮಕ್ಕಳು ವಾಂತಿ ಮಾಡಿಕೊಳ್ಳಲಾರಂಭಿಸಿದರು. ಇದನ್ನು ಗಮನಿಸಿದ ಅಂಗನವಾಡಿ ಸಹಾಯಕಿ, ವಿಷಯವನ್ನು ಮಕ್ಕಳ ಪೋಷಕರ ಗಮನಕ್ಕೆ ತಂದರು. ತಕ್ಷಣ ಎಲ್ಲರನ್ನೂ ಸಮೀಪದ ಬೆಳ್ಳಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ಅಲ್ಲದೆ, ತೀವ್ರ ಅಸ್ವಸ್ಥಗೊಂಡ ವಿನಯ್, ಲಂಕೇಶ, ಕುಮಾರ್ ಹಾಗೂ ತೇಜಾ ಎಂಬ ನಾಲ್ಕು ಮಕ್ಕಳನ್ನು ವೈದ್ಯ ಡಾ. ಟಿ.ಎಂ. ಕೊಟ್ರೇಶ್ ಸಲಹೆ ಮೇರೆಗೆ ಕೂಡ್ಲಿಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.

ಆತಂಕ ಬೇಡ: ‘ಅಂಗನವಾಡಿಯಲ್ಲಿದ್ದ ಒಟ್ಟು 18 ಮಕ್ಕಳ ಪೈಕಿ 15 ಮಂದಿ ಅಸ್ವಸ್ಥಗೊಂಡಿದ್ದಾರೆ. ಸದ್ಯ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಯಾವುದೇ ಅಪಾಯ ಇಲ್ಲ ಎಂದು ಹೇಳಿರುವುದರಿಂದ ಪೋಷಕರು ಆತಂಕಪಡುವ ಅಗತ್ಯ ಇಲ್ಲ’ ಎಂದು ಪ್ರಭಾರ  ತಾಲ್ಲೂಕು ಆರೋಗ್ಯ ಆಧಿಕಾರಿ ಡಾ. ದೇವೇಂದ್ರ ತಿಳಿಸಿದರು.

‘ಜಿಲ್ಲಾ ಸರ್ವೇಶಕ್ಷಣಾಧಿಕಾರಿ ಡಾ. ಅನಿಲ್ ಕುಮಾರ್ ಹಾಗೂ ಪ್ರಯೋ ಗಾಲಯದ ಸಿಬ್ಬಂದಿ, ಅಂಗನವಾಡಿಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಮಕ್ಕಳಿಗೆ ಸಿದ್ದಪಡಿಸಿದ ಆಹಾರ ಮತ್ತು ಕುಡಿಯುವ ನೀರಿನ ಮಾದರಿ ಸಂಗ್ರಹಿಸಿದ್ದು, ಪರೀಕ್ಷೆ ಬಳಿಕ ಅಸ್ವಸ್ಥಕ್ಕೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಅವರು ಹೇಳಿದರು.

ತನಿಖೆ: ವಿಷಯ ತಿಳಿದ ಶಿಶು ಅಭಿವೃದ್ಧಿ ಆಧಿಕಾರಿ ಸೋಮಣ್ಣ ಚಿನ್ನೂರು ಮತ್ತು ಬೆಳ್ಳಗಟ್ಟೆ ಮೇಲ್ವಿಚಾರಕಿ ಅನ್ನ ಪೂರ್ಣಮ್ಮ, ಬೆಳ್ಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಕುರಿತು ಮಾಹಿತಿ ಪಡೆದರು. 

‘ಬೆಳಿಗ್ಗೆ ಅಂಗನಾಡಿ ಕೇಂದ್ರಕ್ಕೆ ಬಂದ ಕಾರ್ಯಕರ್ತೆ ಮಾರಕ್ಕ, ಮಕ್ಕಳಿಗೆ ಆಹಾರ ಸಿದ್ದಪಡಿಸಲು ಸಹಾಯಕಿಗೆ ಅಡುಗೆ ಪದಾರ್ಥಗಳನ್ನು ನೀಡಿ, ವೇತನ ಪಡೆಯುವ ಸಲುವಾಗಿ ಕೂಡ್ಲಿಗಿಗೆ ಬಂದಿದ್ದಾರೆ. ಆದರೆ, ಅಂಗನವಾಡಿ ಮಕ್ಕಳು ಅಸ್ವಸ್ಥರಾಗಿರುವ ವಿಷಯ ತಿಳಿಸಿದರೂ, ಮಕ್ಕಳನ್ನು ನೋಡಲು ಬಂದಿಲ್ಲ’ ಎಂದು ಪೋಷಕರು ಇದೇ ವೇಳೆ ಆರೋಪ ಮಾಡಿದರು.

ನಂತರ ಮಾತನಾಡಿದ ಅವರು, ‘ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಅಲ್ಲದೆ, ಅಂಗನವಾಡಿ ಕಾರ್ಯಕರ್ತೆಗೆ ಕಾರಣ ಕೇಳಿ ನೋಟೀಸ್ ನೀಡಲಾಗು ವುದು’ ಎಂದು ಸೋಮಣ್ಣ ಚಿನ್ನೂರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT