ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಾಗರೂಕತೆ ತಂದ ಆಪತ್ತು... ಜೀವಕ್ಕೆ ಕುತ್ತು...

Last Updated 16 ಏಪ್ರಿಲ್ 2013, 9:05 IST
ಅಕ್ಷರ ಗಾತ್ರ

ಕುರುಗೋಡು: ಗ್ರಾಮದಿಂದ ಇಳಿ ಸಂಜೆಯ ಹೊತ್ತಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೊರಟ ಕ್ರ್ಯೂಸರ್ ವಾಹನ ಚಾಲಕನ ಅಜಾಗರೂಕತೆ, ಅತಿವೇಗದಿಂದಾಗಿ ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಚಿಕ್ಕ ಮಕ್ಕಳೂ ಸೇರಿದಂತೆ ಎಂಟು ಜನ ಪ್ರಯಾಣಿಕರು ಆಹುತಿಯಾಗಿದ್ದಾರೆ.

ಕೆಲಸ- ಕಾರ್ಯ ಮುಗಿಸಿಕೊಂಡು ಮನೆಗಳತ್ತ ಹೊರಟವರು, ಧಾರ್ಮಿಕ ಕೇಂದ್ರಗಳಿಗೆ ಆಗಮಿಸಿದವರು, ಸಂಬಂಧಿಗಳನ್ನು ಭೇಟಿ ಮಾಡಿಕೊಂಡು ಮರಳಿ ಊರಿಗೆ ಹೊರಟವರು, ಬಳ್ಳಾರಿಗೆ ವಿವಿಧ ವಸ್ತುಗಳನ್ನು ಖರೀದಿಸಲು ತೆರಳುತ್ತಿದ್ದವರಲ್ಲಿ 8 ಜನ ಸಾವಿಗೀಡಾಗಿದ್ದಾರೆ. ತೀವ್ರ ಗಾಯಗೊಂಡಿರುವ ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಜೀವನ್ಮರಣದ ನಡುವೆ ಹೋರಾಟ ನಡೆಸುವಂತಾಗಿದೆ.

ಪ್ರಯಾಣ ದರ ಸ್ವೀಕರಿಸುತ್ತಿದ್ದ ಕ್ಲೀನರ್, ಚಿಲ್ಲರೆ ಕೇಳಿದ. ಅತಿ ವೇಗದಲ್ಲಿದ್ದ ಸಂದರ್ಭದಲ್ಲಿ ಆತನಿಗೆ ಚಿಲ್ಲರೆ ನೀಡಲು ಮುಂದಾದ ಚಾಲಕ ಸ್ವತಃ ತನ್ನ ಪ್ರಾಣವನ್ನೂ ಕಳೆದುಕೊಂಡಿದ್ದಲ್ಲದೆ, ಇತರ ಏಳು ಜನರ ಜೀವಕ್ಕೆ ಎರವಾಗಿದ್ದಾನೆ.

ಜಿಲ್ಲಾ ಕೇಂದ್ರ ಬಳ್ಳಾರಿಯತ್ತ ಹೊರಟಿದ್ದ ಈ ವಾಹನದಲ್ಲಿ ನಿಯಮಾನುಸಾರ 12 ಜನ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶವಿದ್ದರೂ, 20 ಜನರನ್ನು ಸಾಗಿಸಲಾಗುತ್ತಿತ್ತು. ನಿತ್ಯವೂ ಮಿತಿಮೀರಿ ಪ್ರಯಾಣಿಕರನ್ನು ಸಾಗಿಸಿದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳದ್ದರಿಂದ ಈ ಅನಾಹುತ ಸಂಭವಿಸಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ನಿತ್ಯವೂ ಟಂಟಂ, ಕ್ರ್ಯೂಸರ್, ಟಾಟಾ ಏಸ್ ಮತ್ತಿತರ ಮಾದರಿಯ ಹಲವಾರು ವಾಹನಗಳು ಕುರುಗೋಡಿನಿಂದ ಸಿರಿಗೇರಿ, ಕಂಪ್ಲಿ, ಬಳ್ಳಾರಿ ಮತ್ತು ಸಿರುಗುಪ್ಪದ ಕಡೆ ಸಂಚರಿಸುತ್ತವೆ.

ನಿಯಮ ಮೀರಿ ಪ್ರಯಾಣಿಕರನ್ನು ಹೊತ್ತು ಸಾಗುತ್ತ, ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತಿತರ ಖಾಸಗಿ ವಾಹನಗಳ ಸ್ಪರ್ಧೆಯ ಹಿನ್ನೆಲೆಯಲ್ಲಿ, ಮಿತಿಮೀರಿದ ವೇಗದಿಂದ ಸಾಗುವ ವಾಹನಗಳಲ್ಲಿ ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆಯೇ ಎಂಬ ಸ್ಪಷ್ಟ ಕಲ್ಪನೆ ಪ್ರಯಾಣಿಕರಲ್ಲಿದೆ. ಆದರೂ ಬಸ್‌ಗಳಲ್ಲಿನ ದುಬಾರಿ ಪ್ರಯಾಣ ದರ, ಅಗತ್ಯವಿದ್ದಲ್ಲಿ ನಿಲುಗಡೆ ದೊರೆಯುತ್ತದೆ ಎಂಬ ಕಾರಣದಿಂದ ಅನಿವಾರ್ಯವಾಗಿ ಇಂತಹ ಖಾಸಗಿ ವಾಹನಗಳಲ್ಲೇ ಸಂಚರಿಸಲು ಪ್ರೇರಣೆ ನೀಡುತ್ತಿದೆ.

ಕಡಿವಾಣ ಹಾಕಿ: ಅತಿಯಾದ ವೇಗ, ನಿಯಮ ಮೀರಿ ಪ್ರಯಾಣಿಕರನ್ನು ಸಾಗಿಸುವುದು, ಪ್ರಯಾಣಿಕರ ಸುರಕ್ಷತೆಯನ್ನೇ ನಿರ್ಲಕ್ಷ್ಯಿಸುವ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಅಪಘಾತದಲ್ಲಿ ಸಾವಿಗೀಡಾದವರ, ಗಾಯಗೊಂಡವರ ಕುಟುಂಬ ಸದಸ್ಯರ ಕೋರಿಕೆಯಾಗಿದೆ.

ಅಲ್ಲದೆ, ಪ್ರಯಾಣಿಕರಿಂದ ತುಂಬಿ ತುಳುಕುವ ಇಂತಹ ವಾಹನಗಳ ಹಿಂಬಾಗಿಲಿನಲ್ಲೇ ನಿಂತು ಸಾಗುವ ಕ್ಲೀನರ್ ಹಾಗೂ ಪ್ರಯಾಣಿಕರು ನಿತ್ಯ ಕಂಡುಬಂದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಅಪಘಾತಕ್ಕೆ ಕಾರಣವಾಗಿದೆ.

ಈ ಕುರಿತು ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಕುರುಗೋಡಿನ ಹೊನ್ನೂರಪ್ಪ, ಅಬ್ದುಲ್ ಸಾದಿಕ್ ಮತ್ತಿತರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT