ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಯುಸಿಐ: ಮಹಿಳೆಗೆ `ಸಹಜ' ಮೀಸಲಾತಿ

Last Updated 17 ಏಪ್ರಿಲ್ 2013, 9:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿ ಬಿ ಫಾರಮ್‌ಗಾಗಿ ಹಗ್ಗ-ಜಗ್ಗಾಟವಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ಮ್ಯೋರಥಾನ್ ಸಭೆಗಳು ನಡೆಯುವುದಿಲ್ಲ. ಹೋರಾಟದ ಪಕ್ಷವಾದ ಎಸ್‌ಯುಸಿಐ (ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ)ನಲ್ಲಿ ಎಲ್ಲವೂ ಸಹಜವಾಗಿಯೇ ನಡೆಯುತ್ತದೆ; ಮಹಿಳಾ `ಮೀಸಲಾತಿ' ಕೂಡ.

ಎಡಪಂಥೀಯ ಚಿಂತನೆಗಳ ಪ್ರಖರ ಪ್ರತಿಪಾದಕ ಕಾರ್ಯಕರ್ತರನ್ನೊಳಗೊಂಡಿರುವ ಎಸ್‌ಯುಸಿಐ ಜನ್ಮ ತಾಳಿದ್ದು 1948ರಲ್ಲಿ.

ಕರ್ನಾಟಕದಲ್ಲಿ 80ರ ದಶಕ ದಿಂದಲೇ ಚುನಾವಣಾ ಕಣದಲ್ಲಿ ಸಕ್ರಿಯವಾಗಿರುವ ಪಕ್ಷ ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲೂ `ಅಲ್ಲಲ್ಲಿ' ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಇತಿಹಾಸ ಹೊಂದಿದೆ. ಪ್ರತಿ ಬಾರಿಯೂ ಪುರುಷ-ಮಹಿಳಾ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿರು ವುದಿಲ್ಲ. ಈ ಸಲವೂ ಇದು ಮುಂದುವರಿದಿದೆ.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಯುಸಿಐ ಒಟ್ಟು ಹನ್ನೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದೆ. ಇವರಲ್ಲಿ ಐದು ಮಂದಿ ಮಹಿಳೆ ಯರು. ರಾಜಕೀಯ ಪಕ್ಷಕ್ಕಿಂತ ಮೇಲಾಗಿ ರಾಜಕೀಯ ಸಂಘಟನೆಯ ರೂಪದಲ್ಲಿ ಕೆಲಸ ಮಾಡುವ ಎಸ್‌ಯುಸಿಐನ ಬಹುತೇಕ ಕಾರ್ಯಕರ್ತರು ಗಂಡ- ಹೆಂಡತಿ. ಹೀಗಾಗಿ ಅದು `ದಂಪತಿ'ಗಳ ಪಕ್ಷವೂ ಹೌದು. ಈ ಕಾರಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ವಿಷಯದಲ್ಲಿ ಗೊಂದಲ ಉಂಟಾಗುವುದಿಲ್ಲ. ಮಹಿಳೆಯರಿಗೆ ಸಹಜವಾಗಿಯೇ ಅವಕಾಶ-ಸ್ಥಾನ ದೊರಕುತ್ತದೆ.

`ನಮ್ಮ ಸಂಘಟನೆ ಮೀಸಲಾತಿಯನ್ನು ಬೆಂಬಲಿಸು ವುದಿಲ್ಲ. ರಾಜಕೀಯ ಮೀಸಲಾತಿಯಿಂದ ಮಹಿಳೆಯರು ಅಭಿವೃದ್ಧಿ ಸಾಧಿಸಬಲ್ಲರು ಎಂಬ ಭ್ರಮೆ ನಮಗಿಲ್ಲ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿ ಮಹಿಳೆ ಸ್ವಂತ ಕಾಲ ಮೇಲೆ ನಿಲ್ಲಲು ಅವಕಾಶ ನೀಡಿದರೆ ಮಾತ್ರ ಸ್ತ್ರೀ ಸಬಲೀಕರಣ ಸಾಧ್ಯ ಎಂಬುದು ನಮ್ಮ ವಾದ. ಹೀಗಾಗಿ ಚುನಾವಣೆಗೆ  ಅಭ್ಯರ್ಥಿಗಳನ್ನು ಆರಿಸುವಾಗ ಮಹಿಳೆ-ಪುರುಷ ಎಂಬ ಭೇದವನ್ನೇ ಮರೆತಿರುತ್ತೇವೆ' ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ರಾಧಾಕೃಷ್ಣ `ಪ್ರಜಾವಾಣಿ'ಗೆ ತಿಳಿಸಿದರು.

`ಸಂಘಟನೆಯಲ್ಲಿ ಮಹಿಳೆ-ಪುರುಷರು ಒಟ್ಟಾಗಿ ದುಡಿಯುತ್ತಿದ್ದೇವೆ. ಹೀಗಾಗಿ ಯಾವುದೇ ಕೆಲಸದ ಹಂಚಿಕೆಯಲ್ಲೂ ಸ್ತ್ರೀ-ಪುರುಷರನ್ನು ಸಹಜವಾಗಿಯೇ ಸಮಾನವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಚುನಾವಣೆಯ ಸಂದರ್ಭದಲ್ಲೂ ಇದು ಮುಂದುವರಿ ಯುತ್ತದೆ' ಎನ್ನುತ್ತಾರೆ ರಾಧಾಕೃಷ್ಣ.

`ಮಹಿಳೆಗೆ ಆಕೆಯ ಸ್ಥಾನಮಾನಗಳು ಸಹಜವಾಗಿಯೇ ಸಿಗಬೇಕು. ಮೀಸಲಾತಿಯಿಂದ ಅದು ಸಾಧ್ಯವಿಲ್ಲ. ಎಸ್‌ಯುಸಿಐನಲ್ಲಿ ಸಹಜ ಮೀಸಲಾತಿ ಲಭಿಸುತ್ತದೆ. ಇದರ ಅನುಭವ ಸಂಘಟನೆಯ ಎಲ್ಲ ಮಹಿಳೆಯರಿಗೂ ಆಗಿದೆ, ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಸಮಾನತೆಯ ಸಂಘಟನೆ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ' ಎಂದು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಡಿ.ನಾಗಲಕ್ಷ್ಮಿ  ಹೇಳಿದರು.

`ಎಸ್‌ಯುಸಿಐ ಸಮಾನ ಸ್ಥಾನಮಾನವನ್ನು ಪ್ರತಿಪಾದಿಸುವ ಸಂಘಟನೆ. ಇಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ಈ ಖುಷಿಯ ಅನುಭವವಾಗುತ್ತದೆ. ಸಾಮರ್ಥ್ಯಕ್ಕೆ ತಕ್ಕಂತೆ ಸಹಜವಾಗಿ ಅವಕಾಶಗಳು ಅರಸಿ ಬರಲು ಈ ತತ್ವ ಸುಲಭವಾಗಿ ಸಹಕರಿಸುತ್ತದೆ' ಎಂಬುದು ಮೈಸೂರು ಚಾಮರಾಜ ಕ್ಷೇತ್ರದ ಅಭ್ಯರ್ಥಿ ಉಮಾದೇವಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT