ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ರೈತರಿಗೆ ₹ 2 ಕೋಟಿ ಸಾಲ ವಿತರಣೆ

ಸಕಾಲದಲ್ಲಿ ಮರುಪಾವತಿಸಲು ಸಲಹೆ
Last Updated 26 ಆಗಸ್ಟ್ 2021, 9:24 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ರೈತರು ಹಾಗೂ ಹೈನೋದ್ಯಮಕ್ಕೆ ಸಹಕಾರ ಸಂಘಗಳ ಸಹಕಾರ ಅಪಾರವಾಗಿದೆ. ರೈತರು, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಸಂಘಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ ಅವರ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಹಕಾರ ಸಂಘಗಳು ನೆರವು ನೀಡುತ್ತಿವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ತಾಲ್ಲೂಕಿನ ರೈತರಿಗೆ ₹ 2 ಕೋಟಿ ಬಡ್ಡಿರಹಿತ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಮೀನು ಹೊಂದಿರುವ ರೈತರಿಗೆ ಬಡ್ಡಿರಹಿತ ಸಾಲ ನೀಡುವುದರಿಂದ ಅವರ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ. ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ನೀಡಿದರೆ ಅದರಿಂದ ಗುಡಿ ಕೈಗಾರಿಕೆಗೆ ಪೂರಕವಾಗಲಿದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗಲಿದೆ ಎಂದರು.

ಸ್ತ್ರೀಶಕ್ತಿ ಸಂಘಗಳು ಸಕಾಲದಲ್ಲಿ ಮರುಪಾವತಿ ಮಾಡುವುದರಿಂದ ಅವರಿಗೆ ಸಹಕಾರ ಸಂಘಗಳು ಹೆಚ್ಚಿನ ರೀತಿಯಲ್ಲಿ ಸಾಲ ನೀಡುವುದಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಕೊರೊನಾ ಸಮಯದಲ್ಲಿ ಸಹಕಾರ ಸಂಘಗಳು ಸಾರ್ವಜನಿಕರಿಗೆ ಉಚಿತ ಲಸಿಕೆ ನೀಡಲು ₹ 50 ಲಕ್ಷಕ್ಕೂ ಹೆಚ್ಚಿನ ನೆರವು ನೀಡಿವೆ. ಜೊತೆಗೆ ತಾಲ್ಲೂಕಿನ ವಿವಿಧೆಡೆ ಸಹಕಾರ ಸಂಘದ ವತಿಯಿಂದ ಸಾವಿರಾರು ಜನ ಬಡವರಿಗೆ ಉಚಿತ ದಿನಸಿ ಕಿಟ್, ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ವಿತರಣೆ ಮಾಡಿ ಸಮಾಜಮುಖಿ ಕೆಲಸಕ್ಕೆ ಕನ್ನಡಿ ಹಿಡಿದಿವೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ರೈತರಿಗೆ ಸಾಲ ನೀಡಲು ಬ್ಯಾಂಕ್ ವತಿಯಿಂದ ಯಾವುದೇ ಸಮಸ್ಯೆಯಿಲ್ಲ. ರೈತರಿಗೆ ಜಮೀನಿನ ಅಗತ್ಯಕ್ಕೆ ತಕ್ಕಂತೆ ಸಾಲ ವಿತರಿಸುತ್ತಿದೆ. ರೈತರಿಗೆ ಸಂಘದ ವತಿಯಿಂದ ₹ 150 ಕೋಟಿ ಸಾಲ ನೀಡಲು ಸಿದ್ಧವಿದ್ದೇವೆ. ಸಾಲ ಮೇಳ ಹಮ್ಮಿಕೊಂಡು ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ಸ್ತ್ರೀಶಕ್ತಿ ಸಂಘಗಳು ಸಾಲ ಪಡೆಯಲು ಮುಂದೆ ಬಂದಲ್ಲಿ ಅವರಿಗೂ ಸಾಲ ನೀಡಲು ಬ್ಯಾಂಕ್ ಸಿದ್ಧವಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಸುಮಾರು ₹ 600 ಕೋಟಿ ಸಾಲ ನೀಡಲಾಗಿದ್ದು, ಸ್ತ್ರೀಶಕ್ತಿ ಗುಂಪುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಂಜುಂಡೇಗೌಡ, ಸೂಲಿಬೆಲೆ ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಸತೀಶ್ ಗೌಡ, ಹೊಸಕೋಟೆ ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ ಅಂಡ್ ಟಿ ಮಂಜುನಾಥ್, ನಿರ್ದೇಶಕ ಸ. ಮುನಿಯಪ್ಪ, ನಿರ್ದೇಶಕ ಬಾಬು ರೆಡ್ಡಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಗೋಪಾಲ್ ಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT