ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.28ರಂದು ಅಂಗಡಿ ಮುಗ್ಗಟ್ಟುಗಳ ಬಂದ್

ದಿನಸಿ ವರ್ತಕರ ಸಂಘ ಸೇರಿದಂತೆ ವಿವಿಧ ವ್ಯಾಪಾರಿ ಸಂಘಟನೆಗಳ ಬೆಂಬಲ
Last Updated 24 ಫೆಬ್ರುವರಿ 2020, 15:26 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರ ಪತನಕ್ಕೆ ಬೃಹತ್ ಮಾಲ್‍ಗಳು, ಆನ್‍ಲೈನ್ ವಿದೇಶಿ ಕಂಪನಿಗಳು ಮುಳುವಾಗಿವೆ. ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳ ವಿರುದ್ಧ ಹಾಗೂ ವ್ಯಾಪಾರಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.28ರಂದು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಜಿ.ಎಸ್.ಸೋಮರುದ್ರ ಶರ್ಮ ಹೇಳಿದರು.

ದಿನಸಿ ವರ್ತಕರ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದುಬಾರಿ ಬಾಡಿಗೆ, ಜೀವನ ವೆಚ್ಚಗಳಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ರಿಯಾಯಿತಿ ಎಂಬ ಹೆಸರಿನಲ್ಲಿ ದೊಡ್ಡ ಮಾಲ್‍ಗಳ ಸೆಳೆತವೇ ಕಾರಣವಾಗಿದೆ. ಆದರೆ, ಇದರಲ್ಲಿ ಕಳಪೆ ಗುಣಮಟ್ಟ ಇರುವುದನ್ನು ಗ್ರಾಹಕರು ಅರ್ಥ ಮಾಡಿಕೊಳ್ಳಬೇಕಿದೆ. ಸರ್ಕಾರಕ್ಕೆ ಸಣ್ಣ ವ್ಯಾಪಾರಸ್ಥರ ಮೇಲೆ ಉತ್ತಮ ಅಭಿಪ್ರಾಯ ಇಲ್ಲ. ಈ ದಿಸೆಯಲ್ಲಿ ‘ಒಂದು ದೇಶ ಒಂದು ತೆರಿಗೆ ನೀತಿ’ ಅಳವಡಿಕೆ, ರಿಯಾಯಿತಿ ಮೋಸದ ಜಾಲ ನಿಯಂತ್ರಣಕ್ಕೆ ಕ್ರಮ, ವ್ಯಾಪಾರಸ್ಥರ ಹಿತ ಕಾಪಾಡಲು ಸರ್ಕಾರ ನಿಗಮ ಮಂಡಳಿ ಅಸ್ತಿತ್ವ ತರಬೇಕು ಎಂದು ಒತ್ತಾಯಿಸಿದರು.

ದಿನಸಿ ವರ್ತಕರ ಸಂಘದ ಕಾರ್ಯದರ್ಶಿ ಎಂ.ಸಿ.ರಘುನಾಥ್ ಮಾತನಾಡಿ, ನಗರ ಪ್ರದೇಶಗಳಲ್ಲಿದ್ದ ಮಾಲ್‍ಗಳು ಇಂದು ತಾಲ್ಲೂಕು ಮಟ್ಟಕ್ಕೂ ವ್ಯಾಪಿಸಿವೆ. ವ್ಯಾಪಾರ ಹದಗೆಡಿಸುತ್ತಿವೆ. ಇದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ಜನ ಬೀದಿಪಾಲಾಗುತ್ತಿದ್ದು ವ್ಯಾಪಾರಿಗಳ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ಮರೆಯಾಗಿದೆ. ಈ ದಿಸೆಯಲ್ಲಿ ರಾಜ್ಯದ ವರ್ತಕರ ಸಂಘದ ಮಾರ್ಗದರ್ಶನದಲ್ಲಿ ಫೆ.28ರಂದು ಬೆಳಿಗ್ಗೆ 9ರಿಂದ ತಾಲ್ಲೂಕಿನಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗುವುದು ಎಂದರು.

ಹಿರಿಯ ವರ್ತಕ ಎಂ.ಜೆ.ರಾಜೇಂದ್ರಕುಮಾರ್‌ ಮಾತನಾಡಿ, ಮಾಲ್‌ನಲ್ಲಿ ಸಿಗುವ ಉತ್ಪನ್ನಗಳ ಗುಣಮಟ್ಟ ಬಗ್ಗೆ ಸರಿಯಾದ ತನಿಖೆಯಾಗಬೇಕು. ವರ್ತಕರು ತೆರಿಗೆ ಕಟ್ಟುವ ಮೂಲಕ ಸರ್ಕಾರಕ್ಕೆ ಆಸರೆಯಾಗಿದ್ದಾರೆ. ಆದರೆ, ಮಾರ್ಟ್‍ಗಳು ತೆರಿಗೆ ವಂಚಿಸುತ್ತಿದ್ದು, ವ್ಯಾಪಾರಸ್ಥರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ದಿನಸಿ ವರ್ತಕರ ಸಂಘದ ಖಜಾಂಚಿ ಡಿ.ಎನ್.ರಾಮಯ್ಯಶೆಟ್ಟಿ, ನಿರ್ದೇಶಕರಾದ ಸಿ.ಎ.ರವಿಪ್ರಸಾದ್, ವಿ.ಎಸ್.ರಾಜೇಶ್, ಕೆ.ಜಿ.ನಂಜುಂಡಯ್ಯ, ಮಾಜಿ ಅಧ್ಯಕ್ಷ ಆರ್.ವಿ.ಶಿವಣ್ಣ, ವಿತರಕರ ಸಂಘದ ಅಧ್ಯಕ್ಷ ಕೆ.ಎನ್.ಪ್ರಭಾಕರ್, ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಸಿ.ಎನ್.ಗಿರೀಶ್, ಮಹೇಶ್ ಇದ್ದರು.

ತಾಲ್ಲೂಕು ವಿತರಕರ ಸಂಘ, ಔಷಧಿ ವ್ಯಾಪಾರಿಗಳ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಫ್ಯಾನ್ಸಿ ಸ್ಟೋರ್ಸ್ ಮೊದಲಾದ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT