ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸಾವಿರ ಮರ ಬೆಳೆಸಿದ ಹಸಿರು ಪ್ರೇಮಿ

Last Updated 24 ಅಕ್ಟೋಬರ್ 2020, 22:15 IST
ಅಕ್ಷರ ಗಾತ್ರ

ಹೆಸರಘಟ್ಟ: ರಾಜಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದ್ದೆ ವಿಶ್ವನಾಥಪುರ, ಶ್ರೀರಾಮನಹಳ್ಳಿ, ಅದಿಗಾನಹಳ್ಳಿ ಗ್ರಾಮಗಳಲ್ಲಿ ಸುಮಾರು ಎರಡು ಸಾವಿರ ಮರಗಳನ್ನು ವಿ.ಎಂ.ಚಿಕ್ಕತಿಮ್ಮರೆಡ್ಡಿ ಅವರು ಸ್ವಂತ ಖರ್ಚಿನಲ್ಲಿ ಬೆಳೆಸಿ ಮಾದರಿಯಾಗಿದ್ದಾರೆ.

ಮೂಲತಃ ಅದ್ದೆ ವಿಶ್ವನಾಥಪುರ ಗ್ರಾಮದರಾದ ಚಿಕ್ಕತಿಮ್ಮರೆಡ್ಡಿ, ಗ್ರಾಮದ ಸರ್ವೆ ನಂಬರ್‌ 226ರ ಗುಂಡುತೋಪು, 63ರಲ್ಲಿ ಇರುವ ಕುಳ್ಳಗುಟ್ಟಿ, 93ರಲ್ಲಿರುವ ಸರ್ಕಾರಿ ಬಿಳಿನೀರಿನ ಕುಂಟೆ, ಕೆರೆಯಂಗಳ ಮತ್ತು ಕಾಕೋಳು ಗ್ರಾಮದ ಕಡೆ ಹೋಗುವ ಮುಖ್ಯರಸ್ತೆಗಳ ಬದಿಯಲ್ಲಿ ಹಲಸು, ಮಾವು ಮತ್ತು ನೇರಳೆ ಮರಗಳನ್ನು ಬೆಳೆಸಿದ್ದಾರೆ. ಶ್ರೀರಾಮನಹಳ್ಳಿ, ಅದಿಗಾನಹಳ್ಳಿ ಪಟಾಲಮ್ಮ ದೇವಸ್ಥಾನ ಹಾಗೂ ರಾಜಾನುಕುಂಟೆ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ನೂರಾರು ಮರಗಳನ್ನು 20 ವರ್ಷಗಳಿಂದ ಪೋಷಿಸಿದ್ದಾರೆ. ಫಲ ನೀಡುತ್ತಿರುವ ಈ ಮರಗಳು ವಿವಿಧ ಜೀವಸಂಕುಲಗಳಿಗೂ ಆಸರೆಯಾಗಿವೆ.

‘ಪ್ರಕೃತಿಯಲ್ಲಿ ಮರವಿದ್ದರೆ ಒಳ್ಳೆಯ ಗಾಳಿ ಸಿಗುತ್ತದೆ ಮತ್ತು ಉತ್ತಮ ಮಳೆಯಾಗುತ್ತದೆ ಎಂಬ ಕಾರಣಕ್ಕೆ ಬಾಲ್ಯದಿಂದಲೇ ಮರಗಳನ್ನು ಬೆಳೆಸುತ್ತಿದ್ದೇನೆ. ಯಾರಿಂದಲೂ ಸಹಾಯ ಕೇಳಿಲ್ಲ. ದುಡಿಮೆಯ ಶೇಕಡ ಹತ್ತು ಭಾಗವನ್ನು ಈ ಕಾರ್ಯಕ್ಕೆ ಮೀಸಲಿಟ್ಟಿದ್ದೇನೆ’ ಎನ್ನುತ್ತಾರೆ ಚಿಕ್ಕತಿಮ್ಮರೆಡ್ಡಿ.

‘ಮರಗಳು ನೆರಳು ನೀಡುತ್ತವೆ. ಹೆಚ್ಚು ಮರಗಳಿದ್ದಷ್ಟೂ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ನಾವು ಚಿಕ್ಕವರಿದ್ದಾಗ ಮರಗಳನ್ನು ದೇವರಂತೆ ನೋಡುತ್ತಿದ್ದೆವು, ಮುಟ್ಟಿ ನಮಸ್ಕರಿಸುತ್ತಿದ್ದೆವು. ಒಂದು ಮರ ಕಡಿಯುವ ಮುನ್ನ ಹಲವು ಬಾರಿ ಯೋಚಿಸುತ್ತಿದ್ದೆವು. ಆದರೆ, ಇಂತಹ ಕಾಳಜಿ ಈಗಿನವರಲ್ಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಅದ್ದೆ ವಿಶ್ವನಾಥಪುರ, ಶ್ರೀರಾಮನ ಹಳ್ಳಿ, ಅದಿಗಾನಹಳ್ಳಿ ಗ್ರಾಮಗಳಿಗೆ ಹೋದಾಗ ಅಲ್ಲಿನ ಮರಗಳಿಂದ ಒಳ್ಳೆಯ ಗಾಳಿ, ನೆರಳು ಸಿಗುತ್ತದೆ. ಅನೇಕ ಪಕ್ಷಿಗಳ ಧ್ವನಿ ಕೇಳಿಸುತ್ತದೆ. ಇಡೀ ವಾತಾವರಣ ಹೊಸತನದಿಂದ ಕೂಡಿರುತ್ತದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಮರಗಳನ್ನು ನಿಸ್ವಾರ್ಥವಾಗಿ ಬೆಳೆಸಿದ ಚಿಕ್ಕತಿಮ್ಮರೆಡ್ಡಿ ಅವರ ಕೆಲಸ ಮಾದರಿಯಾದುದು’ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT