ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ನೀರು ಹರಿದರೂ ಕೆರೆಯಲ್ಲಿನ ಜಾಲಿ ಮರಗಳಿಗಿಲ್ಲ ಮುಕ್ತಿ

ಬಿರುಕು ಬಿಟ್ಟಿರುವ ಕೆರೆ ಏರಿಗಳು, ಮರ ತೆರವುಗೊಳಿಸದೆ ನೀರು ತುಂಬಿಸುವುದು ಅವೈಜ್ಞಾನಿಕ: ಆರೋಪ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದೇವನಹಳ್ಳಿ: ಬಯಲು ಸೀಮೆ ಪ್ರದೇಶಗಳಿಗೆ ಕೊನೆಗೂ ಬೆಂಗಳೂರಿನ ನಾಗವಾರ ಮತ್ತು ಹೆಬ್ಬಾಳ ಕೆರೆಯ ತ್ಯಾಜ್ಯ ಸಂಸ್ಕರಿಸಿದ ನೀರು ಹರಿದರೂ ಕೆರೆಯಂಗಳಲ್ಲಿನ ಜಾಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆದೇ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎತ್ತಿನ ಹೊಳೆ ಯೋಜನೆಗೆ ಹಲವು ಅಡ್ಡಿ, ಆತಂಕ ಎದುರಾದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2017 ಜುಲೈ 28ರಂದು ದೇವನಹಳ್ಳಿ ದೊಡ್ಡಹಿರೆ ಅಮಾನಿ ಕೆರೆಯಲ್ಲಿ ₹ 883.54 ಕೋಟಿ ವೆಚ್ಚದ ಎಚ್.ಎನ್ ವ್ಯಾಲಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದ್ದರು.

ಹಲವು ಸಮಸ್ಯೆಗಳ ನಡುವೆ ಕುಂಟುತ್ತಾ ಸಾಗಿದ ಕಾಮಗಾರಿ ಕೆಲಸ ಒಂದಿಷ್ಟು ಉಳಿದಿರುವಂತೆಯೆ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಕೆಗೆ ಮುಂದಾಗಿರುವ ಕ್ರಮ ಸಂತಸದಾಯಕವಾದರೂ ಕೆರೆಗಳ ದುರಸ್ತಿಯಾಗದೆ ನೀರು ಹರಿಸುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಆರೋಪ.

ಬೆಂಗಳೂರು ಉತ್ತರ ತಾಲ್ಲೂಕಿನ 12, ದೇವನಹಳ್ಳಿ ತಾಲ್ಲೂಕಿನ 9, ಚಿಕ್ಕಬಳ್ಳಾಪುರ ತಾಲ್ಲೂಕಿನ 24, ಶಿಡ್ಲಘಟ್ಟ ತಾಲ್ಲೂಕಿನ 9, ಗುಡಿಬಂಡೆ, ಬಾಗೆಪಲ್ಲಿ ಒಟ್ಟು 65 ಕೆರೆಗಳಿಗೆ 2.70 ಟಿಎಂಸಿ ನೀರು ತುಂಬಿಸುವ ಉದ್ದೇಶಿತ ಯೋಜನೆ ಸಾಕಾರಗೊಳ್ಳವತ್ತ ಹಜ್ಜೆ ಇಟ್ಟಿದ್ದರೂ ಯಾವುದೇ ಕೆರೆಯ ಅಂಗಳದಲ್ಲಿ ಒಂದಿಡಿ ಹೂಳು ಎತ್ತಿಲ್ಲ. ಕೆಲ ಕೆರೆ ಏರಿಗಳು ಬಿರುಕು ಬಿಟ್ಟಿವೆ. ಕೆರೆ ತೂಬುಗಳು ದುರಸ್ತಿಯಾಗಿಲ್ಲ. ಅಪಾರ ಪ್ರಮಾಣದ ಗಿಡಗಂಟಿಗಳ ಜತೆಗೆ ಹತ್ತಾರು ವರ್ಷಗಳಿಂದ ಬಯಲು ಸೀಮೆ ಜಾಲಿ ಮತ್ತು ಬಳ್ಳಾರಿ ಜಾಲಿ ಬೆಳೆದು ಒಂದಕ್ಕೊಂದು ಹೆಣೆದುಕೊಂಡು ಮೆದೆಗಳ ಕೊಂಪೆಯಾಗಿದೆ.

ಮುಂಜಾಗ್ರತೆ ವಹಿಸಿ, ಕೆರೆಯಂಗಳ ಹಸನು ಮಾಡಿ, ರಾಜ ಕಾಲುವೆಗಳನ್ನು ದುರಸ್ತಿ ಮಾಡಿ ನೀರು ಹರಿಸಬೇಕಾದ ಸಂಬಂಧಿಸಿದ ಇಲಾಖೆ ತರಾತುರಿಯಲ್ಲಿ ಕಾಟಚಾರಕ್ಕೆ ಕೆರೆಗಳಿಗೆನೀರು ಹರಿಸಲು ಮುಂದಾಗಿರುವ ಕ್ರಮವೇ ಅವೈಜ್ಞಾನಿಕವಾಗಿದೆ.

2017–18ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಿ.ಎಸ್.ಕರೀಗೌಡ ಸ್ಥಳೀಯರು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕಾರಹಳ್ಳಿ ಅಮಾನಿಕೆರೆ, ಬ್ಯಾಡರಹಳ್ಳಿ, ಕೊಯಿರಾ, ದ್ಯಾವರಹಳ್ಳಿ, ಜಾಲಿಗೆ, ಕಾಮೇನಹಳ್ಳಿ, ಕನ್ನಮಂಗಲ, ಬೂದಿಗೆರೆ, ದೇವನಹಳ್ಳಿ ಚಿಕ್ಕ ಸಿಹಿ ನೀರಿನ ಕೆರೆಯಂಗಳದಲ್ಲಿನ ಹೂಳು ಎತ್ತುವ ಕಾಮಗಾರಿ ನಡೆಸಿದ್ದರ ಫಲವಾಗಿ ಕೆರೆಗಳ ದುರಸ್ತಿಯಾಗಿದೆ.

ಇದನ್ನು ಹೊರತು ಪಡಿಸಿದರೆ ಬೇರೆ ಇಲಾಖೆಯಿಂದ ಬಿಡಿಗಾಸಿನ ಅಭಿವೃದ್ಧಿ ಕೆಲಸಗಳಾಗಿಲ್ಲ. ಇದು ಕೇವಲ ದೇವನಹಳ್ಳಿ ತಾಲ್ಲೂಕಿನ ಚಿತ್ರಣವಲ್ಲ. ಎಚ್.ಎನ್ ವ್ಯಾಲಿ ವ್ಯಾಪ್ತಿಯಲ್ಲಿ ನೀರು ಹರಿಸಬೇಕಾಗಿರುವ ಎಲ್ಲ ಕೆರೆಗಳ ಸ್ಥಿತಿಯಾಗಿದೆ ಎನ್ನುತ್ತಾರೆ ರೈತ ಸಂಘಟನೆ ಪದಾಧಿಕಾರಿಗಳು.

ಅಂತರ್ಜಲಕ್ಕೆ ಶಾಶ್ವತ ಪರಿಹಾರವಾಗಿ ಕೆರೆಗಳಿಂದ ಎಕರೆಗೆ ಸ್ವಾಭಾವಿಕ ನಾಲೆ (ರಾಜಕಾಲುವೆ) ಮತ್ತು ಪೈಪ್‌ಲೈನ್ ಮೂಲಕ 142 ಕಿ.ಮೀ ನೀರು ಹರಿಸಬೇಕು. ಒತ್ತುವರಿಯಾಗಿರುವ ಪೋಷಕ ಕಾಲುವೆಗಳು ಮತ್ತು ರಾಜಕಾಲುವೆ ತೆರವುಗೊಳಿಸಿಲ್ಲ. ಒಂದೊಂದು ಕೆರೆಯಲ್ಲಿ ಸಾವಿರಾರು ಜಾಲಿ ಮರಗಳಿವೆ. ಕೆರೆ ತುಂಬಿಸಿದರೂ ಶೇಕಡಾವಾರು ನೀರನ್ನು ಬೆಳೆದಿರುವ ಮರಗಳು ಹೀರಿಕೊಳ್ಳುತ್ತವೆ. ಇದರ ಅರಿವು ಇದ್ದರೂ ಜಾಲಿ ಮರಗಳ ತೆರವು ಕಾರ್ಯಚರಣೆ ಮಾಡದೆ ನೀರು ಕೆರೆಗಳಿಗೆ ತುಂಬಿಸುವುದು ಅವೈಜ್ಞಾನಿಕ ಎನ್ನುತ್ತಾರೆ ತಾಲ್ಲೂಕು ಬೆಸ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಆಂಜಿನಪ್ಪ.

ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 15 ವರ್ಷಗಳಿಂದ ಸತತ ಹೋರಾಟ ನಡೆಯುತ್ತಿದೆ. ಮೊದಲ ಹಂತದಲ್ಲಿ ಎತ್ತಿನ ಹೊಳೆ ಯೋಜನೆ ಎಂದು ಜಾರಿಗೆ ತಂದರಾದರೂ ಅ ಯೋಜನೆ ಎಲ್ಲಿಗೆ ನಿಂತಿದೆ ಎಂಬುದೇ ಗೊತ್ತಿಲ್ಲ. ಪ್ರಸ್ತುತ ಎಚ್.ಎನ್ ವ್ಯಾಲಿ ಯೋಜನೆ ಜಾರಿಯಾಗಿದೆ. ಈ ನೀರು ಕೆರೆಗಳಿಗೆ ತುಂಬಿಸಿದರೆ ಜನ ಜಾನುವಾರು ಕುಡಿಯುವಂತಿಲ್ಲ ಎಂದು ಹೇಳಲಾಗುತ್ತಿದೆ. ಪ್ರಾಣಿ, ಪಕ್ಷಿಗಳ ಸ್ಥಿತಿ ಏನು. ಇದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯ ಬೆಸ್ತರ ಸಮುದಾಯದ ಮುಖಂಡ ಜಗನ್ನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT