ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು: ವಾಟಾಳ್‌

Published 13 ಸೆಪ್ಟೆಂಬರ್ 2023, 15:36 IST
Last Updated 13 ಸೆಪ್ಟೆಂಬರ್ 2023, 15:36 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಕಾರ್ಯಕರ್ತರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ನೂರಾರು ಕಾರ್ಯಕರ್ತರು ಕನ್ನಡ ಧ್ವಜಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಅತ್ತಿಬೆಲೆಯಿಂದ ಗಡಿಗೋಪುರದವರೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಭಾವಚಿತ್ರವನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ಮಾತನಾಡಿ ಕರ್ನಾಟಕದ ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಜಲಮೂಲಗಳಿಲ್ಲದೆ ಕೃಷಿಯನ್ನೇ ಬಿಡುವ ಸ್ಥಿತಿಯಲ್ಲಿದ್ದಾರೆ. ಬೆಂಗಳೂರು ಜನರಿಗೆ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಕುಳಿತಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯು ಮೈಸೂರಿನ ಕೆಆರ್‌ಎಸ್ ಅಣೆಕಟ್ಟಿನಿಂದ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಹೊರಡಿಸಿರುವುದು ಖಂಡನೀಯ. ಕರ್ನಾಟಕ ಸರ್ಕಾರ ಯಾರ ಮುಲಾಜಿಗೂ ಬಗ್ಗದೆ ಎಲ್ಲ ತ್ಯಾಗಕ್ಕೂ ಸಿದ್ಧರಾಗಬೇಕು. ಬರಗಾಲದ ಪರಿಸ್ಥಿತಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಗುರುವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನ ಆಚರಿಸಲಾಗುವುದು. ನೆಲ ಜಲ ನಾಡು ನುಡಿ ವಿಚಾರದಲ್ಲಿ ರಾಜಕೀಯ ಸಲ್ಲದು. ಕಾವೇರಿ ಪ್ರತಿಯೊಬ್ಬ ಕನ್ನಡಿಗನ ಆಸ್ತಿಯಾಗಿದೆ. ಕರ್ನಾಟಕದ ಜನತೆಗೆ ನೀರಿಲ್ಲದಂತ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದರು.

ಕಾವೇರಿ ನೀರು ಬಿಡುವ ವಿಚಾರವಾಗಿ ಸರ್ವಪಕ್ಷ ಸಭೆ ನಡೆಸಿದ್ದು ಎಲ್ಲ ವಿರೋಧ ಪಕ್ಷಗಳು ಭಾಗವಹಿಸಬೇಕಿತ್ತು. ಸರ್ವ ಪಕ್ಷಗಳ ಸಭೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ದೆಹಲಿಯಲ್ಲಿದ್ದಾರೆ, ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿದ್ದಾರೆ. ಇವರೆಲ್ಲರೂ ಸಹ ಕನ್ನಡಿಗರ ಧ್ವನಿಯಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು ಎಂದರು.

ಇಂಡಿಯಾ ಒಕ್ಕೂಟವನ್ನು ಸಮಾಧಾನಪಡಿಸಲು ಮತ್ತು ಡಿ.ಎಂ.ಕೆ ಪಕ್ಷವನ್ನು ಓಲೈಸಲು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಬ್ಲಾಕ್ ಮೇಲ್ ಮಾಡುವ ಮೂಲಕ ಕನ್ನಡಿಗರ ಮೇಲೆ ದಾಳಿ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ಗಟ್ಟಿ ನಿರ್ಧಾರ ಪ್ರದರ್ಶಿಸುವ ಮೂಲಕ ಒಂದು ಹನಿ ನೀರನ್ನು ಬಿಡಬಾರದು. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿರೋಧ ಪಕ್ಷದಲ್ಲಿದ್ದಾಗ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ಅವರದೇ ಪಕ್ಷ ಅಧಿಕಾರದಲ್ಲಿದೆ ಹಾಗಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಬೇಕು ಎಂದರು.

ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ದೇವ ಮಾತನಾಡಿ ಕಾವೇರಿ ನೀರು ಕನ್ನಡಿಗರ ಅಸ್ಮಿತೆಯಾಗಿದ್ದು ಜಲದ ಸಮಸ್ಯೆಯ ಪರಿಹಾರಕ್ಕಾಗಿ ನಿರಂತರ ಹೋರಾಟ ರೂಪಿಸಲಾಗುವುದು. ಪ್ರತಿಯೊಬ್ಬ ಕನ್ನಡಿಗನು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಕನ್ನಡ ಪ್ರೀತಿಯನ್ನು ತೋರಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಖಾಲಿ ಕೊಡ ಪ್ರದರ್ಶಿಸುವ ಮೂಲಕ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಮ್ಮದು ನಮ್ಮದು ಎಂಬ ಘೋಷಣೆಗಳನ್ನು ಕೂಗಿದರು. ಎಎಸ್ಪಿ ಎಂ.ಎಲ್‌.ಪುರುಷೋತ್ತಮ್‌, ಡಿವೈಎಸ್ಪಿ ಗೋಪಾಲ್‌ ನಾಯಕ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದರು. ಪ್ರತಿಭಟನ ನಿರತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಮುಖಂಡರಾದ ಮಂಜೇಗೌಡ, ಬೆಂಡಗಾನಹಳ್ಳಿ ವೆಂಕಟೇಶ್, ಸಿ.ನಾಗರತ್ನಮ್ಮ, ಕೋದಂಡರಾಮ, ಕೆ.ನಾಗರಾಜು, ಆರ್‌.ಮಧುಕುಮಾರ್, ಆರ್‌.ಸತೀಶ್‌ ರಾಜು, ಸ್ನೇಹಲತಾ, ಆಶಾ ಗೌಡ, ನಾರಾಯಣಸ್ವಾಮಿ, ಮುಬಾರಕ್‌, ಮುನಾವರ್‌ ಇದ್ದರು.

ಪ್ರತಿಭಟನನಿರತ ವಾಟಾಳ್‌ ನಾಗರಾಜು ಅವರನ್ನು ಪೊಲೀಸರು ವಶಕ್ಕೆ ಪಡೆದರು
ಪ್ರತಿಭಟನನಿರತ ವಾಟಾಳ್‌ ನಾಗರಾಜು ಅವರನ್ನು ಪೊಲೀಸರು ವಶಕ್ಕೆ ಪಡೆದರು
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರಿಂದ ಟ್ರಾಫಿಕ್‌ ಜಾಂ ಉಂಟಾಗಿತ್ತು
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರಿಂದ ಟ್ರಾಫಿಕ್‌ ಜಾಂ ಉಂಟಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT