ಬುಧವಾರ, ಜನವರಿ 22, 2020
16 °C
ಈ ಭಾಗದ ಭಕ್ತರ ಆರಾಧ್ಯ ದೈವ * ಧಾರ್ಮಿಕ ಕ್ಷೇತ್ರದ ಜತೆಗೆ ಪ್ರವಾಸಿ ತಾಣವೂ ಹೌದು

ಪ್ರಕೃತಿ ನಡುವೆ ನೆಲೆ ನಿಂತ ಕಣಿವೆ ಆಂಜನೇಯ

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಸುತ್ತಲೂ ಎತ್ತರವಾದ ಬೆಟ್ಟಗುಡ್ಡ. ಹಸಿರ ಹೊದಿಕೆ ನಡುವೆ ಸಮತಟ್ಟಾದ ಜಾಗ. ಅಲ್ಲಿನ ಆಂಜನೇಯಸ್ವಾಮಿ ಭಕ್ತರ ಆರಾಧ್ಯ ದೈವ. ನಿಷ್ಠೆಯಿಂದ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ ಎಂಬ ನಂಬಿಕೆ. ಈ ದೇವಾಲಯ ಇರುವುದು ತಾಲ್ಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗುಳಿ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಈ ಪ್ರದೇಶವನ್ನು ಕಣಿವೆ ಆಂಜನೇಯ ಎಂದೇ ಕರೆಯುತ್ತಾರೆ.

ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯ ತುಂಬಾ ಪುರಾತನವಾದುದ್ದು. ಈ ಗ್ರಾಮದಲ್ಲಿ  ಯಾವುದಾದರೂ ಸಮಸ್ಯೆ ಉಂಟಾದರೆ ಇಲ್ಲಿಗೆ ಬಂದು ಪರಿಹರಿಸಿಕೊಳ್ಳುತ್ತಿದ್ದರು. ವ್ಯಾಜ್ಯ,‌ಕಲಹ ಉಂಟಾದರೆ ಪಂಚಾಯಿತಿ ಮುಖ್ಯಸ್ಥರು ಬಗೆಹರಿಸುತ್ತಿದ್ದರು. ಇದನ್ನು ನ್ಯಾಯಕಟ್ಟೆ ಎಂತಲೂ ಕರೆಯುತ್ತಾರೆ.

ದೇವಾಲಯದ ಸುತ್ತಮುತ್ತಲ 35ಕ್ಕೂ ಹೆಚ್ಚು ಗ್ರಾಮದ ಜನರು ಇಲ್ಲಿ ಮದುವೆ ಕಾರ್ಯ, ಶುಭಕಾರ್ಯ ಮಾಡುತ್ತಾರೆ. ಯಾವುದಾದರೂ ಪ್ರಮುಖ ಕಾರ್ಯಕ್ರಮ ಇಲ್ಲಿ ನೆರವೇರಿಸುತ್ತಾರೆ. ಜತೆಗೆ ರಾಜಕೀಯ ಸಭೆ,ಸಮಾರಂಭ ಇಲ್ಲಿ ಹೆಚ್ಚಾಗಿ ನಡೆಯುತ್ತದೆ.

ಮದುವೆ ವಿಳಂಬ, ಮಕ್ಕಳಾಗದವರು, ಶುಭ ಕಾರ್ಯಕ್ಕಾಗಿ ಹರಕೆ ಹೊತ್ತವರು ಇಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ  ಹರಕೆ ತೀರಿಸುತ್ತಾರೆ. ಇಲ್ಲಿ ದೇವರ ಕಾರ್ಯ ಮಾಡಲು ಎಲ್ಲ ರೀತಿ ಅನುಕೂಲಗಳಿವೆ. ಚಿಕ್ಕದಾಗಿ ಸಮುದಾಯ ಭವನವಿದೆ. ನೀರಿಗಾಗಿ ಪಕ್ಕದಲ್ಲೇ ಕೆರೆ ಇದೆ. ಕುಡಿಯುವ ನೀರಿಗಾಗಿ ಸಿಹಿ ನೀರಿನ ಬಾವಿಯೂ ಇದೆ.

ಸಾವಿರಾರು ವರ್ಷಗಳ ಹಿಂದೆ ಉದ್ಭವಗೊಂಡಿರುವ ಆಂಜನೇಯಮೂರ್ತಿಗೆ ಇಲ್ಲಿ ಚಿಕ್ಕದಾಗಿ ಗುಡಿಕಟ್ಟಿ ಪೂಜಿಸಲಾಗತ್ತಿತ್ತು. ನಂತರದಲ್ಲಿ ವೀರೇಗೌಡನದೊಡ್ಡಿ ಮತ್ತು ಕೊಟ್ಟಗಾಳು ಗ್ರಾಮದವರು ಜೀರ್ಣೋದ್ಧಾರ ಸಮಿತಿ ರಚನೆ ಮಾಡಿಕೊಂಡು ಸುತ್ತಮುತ್ತಲ ಗ್ರಾಮದ ಜನರ ಸಹಕಾರದಿಂದ 10ವರ್ಷಗಳ ಹಿಂದೆ ದೊಡ್ಡ ದೇವಾಲಯ ಜೀರ್ಣೋದ್ಧಾರ ಮಾಡಿದ್ದಾರೆ.

ಜೀರ್ಣೋದ್ಧಾರ ಸಮಿತಿಯಲ್ಲಿ ಪ್ರಮುಖವಾಗಿ ಅಂಗರಹಳ್ಳಿ ಮಾಯಣ್ಣ ಎಂಬುವರು ಜೀರ್ಣೋದ್ಧಾರಕ್ಕೆ ಹೆಚ್ಚು ಶ್ರಮಿಸಿದ್ದಾರೆ ಎಂಬುದು ಸ್ಥಳೀಯರ ಮಾತು. ದೇವಾಲಯ ಒಂದು ಪ್ರಶಾಂತವಾದ ಸುಂದರ ವಾತಾವರಣದಲ್ಲಿದೆ. ಸದಾ ಹಸಿರು ಬೆಟ್ಟದಿಂದ ಕೂಡಿರುವ ಈ ಜಾಗ ಧಾರ್ಮಿಕ ಕ್ಷೇತ್ರದ ಜತೆಗೆ ಪ್ರವಾಸಿ ತಾಣವೂ ಆಗಿದೆ.

ಕಡಿದಾದ ಬೆಟ್ಟ, ಸದಾ ಜಿನಗುವ ನೀರಿನ ಝರಿ, ಹಚ್ಚಹಸಿರ ಕಾಡು, ವಿಶಾಲವಾದ ಬಂಡೆ, ಸುಂದರವಾಗಿ ನಿರ್ಮಾಣ ಮಾಡಿರುವ ರಾಮಾಂಜನೇಯಮೂರ್ತಿ. ಈ ಜಾಗದಲ್ಲಿ ನಿಂತು ನೋಡಿದರೆ ಬೆಟ್ಟವೇ ಆಕಾಶ ಮಟ್ಟಿಸಿದಂತೆ ಬಾಸವಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳ.

ಇದನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿದರೆ ಸಾವನದುರ್ಗದಂತೆ ರಾಮನಗರ ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣ ಹಾಗೂ ಧಾರ್ಮಿಕ ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಯಾಗುತ್ತದೆ. ಇಲ್ಲಿಗೆ ಬರಲು ಬಿಡದಿ, ರಾಮನಗರ ಹಾಗೂ ಕನಕಪುರದಿಂದ ಉತ್ತಮ ರಸ್ತೆ ಸಂಪರ್ಕವಿದ್ದು ಬಸ್‌ ಸೌಲಣಭ್ಯವಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು