ಭಾನುವಾರ, ಏಪ್ರಿಲ್ 11, 2021
28 °C
ಎಸ್ಎಸ್ಎಲ್‌ಸಿಯಲ್ಲಿ 218 ವಿದ್ಯಾರ್ಥಿಗಳಿಂದ ಕಲಿಕೆ

ಹೆಚ್ಚುವರಿ ಬೋಧನಾ ಕೊಠಡಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಎಸ್ಎಸ್ಎಲ್‌ಸಿಯಲ್ಲಿ 218 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರ ಕಲಿಕೆಗೆ ಅನುಕೂಲವಾಗಲು ಇನ್ನಷ್ಟು ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿದೆ. ಹಾಗಾಗಿ ಈ ಬಗ್ಗೆ ಗಮನ ಹರಿಸಬೇಕು’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಅವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ (ಸಿಇಒ) ಲತಾ ಅವರಿಗೆ ಮನವಿ ಮಾಡಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

‘ಶಾಲೆಯಲ್ಲಿನ ವಿದ್ಯಾರ್ಥಿಗಳು ಕಳೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 85 ರಷ್ಟು ಫಲಿತಾಂಶ ಪಡೆದು, ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಲಿಕೆಗೆ ಪೂರಕ ವಾತಾವರಣ ಇಲ್ಲಿದೆ. ಉತ್ತಮ ಸಿಬ್ಬಂದಿ ವರ್ಗ ಇದ್ದಾರೆ. ಈಗ ಕಂಪ್ಯೂಟರ್ ಕಲಿಕಾ ಕೇಂದ್ರವನ್ನೂ ಪ್ರಾರಂಭಿಸಿದ್ದೇವೆ. ಆಟೋ ಬೆಲ್ ಕೊಠಡಿಯನ್ನೂ ಮಾಡಲಾಗಿದ್ದು, ಇವರೆಡೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನೆರವಾಗಲಿವೆ. ಇದಕ್ಕೆ ಪೂರಕ ಕೊಠಡಿಗಳ ಅಗತ್ಯವಿದೆ. ಕಂಪ್ಯೂಟರ್ ಕೊಠಡಿಯನ್ನು ಹವಾನಿಯಂತ್ರಿತ ಕೊಠಡಿಯನ್ನಾಗಿ ಮಾರ್ಪಡಿಸಬೇಕಿದ್ದು, ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ಉಪಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ‘ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಕ್ರಿಯಾ ಯೋಜನೆಗಳನ್ನು ರೂಪಿಸಿದ್ದೇವೆ. ಖಾಸಗಿ ಶಾಲೆಗಳನ್ನು ಬಿಟ್ಟು, ಇಲ್ಲಿಗೆ ದಾಖಲಾಗಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಈ ಬಾರಿ ಶೇ 100 ರಷ್ಟು ಫಲಿತಾಂಶ ಪಡೆಯಬೇಕು ಎಂಬ ಸಂಕಲ್ಪ ನಮ್ಮದು. ಹಾಗಾಗಿ ಇಲಾಖೆಯಿಂದ ಅಗತ್ಯವಿರುವ ಸಹಕಾರ ನೀಡಬೇಕು’ ಎಂದರು.

ಸಿಇಒ ಲತಾ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಪ್ರಗತಿ ನಮ್ಮ ಮೂಲ ಉದ್ದೇಶ. ಕಲಿಕೆಗೆ ಯಾವುದೇ ಅಡ್ಡಿಯಾಗದಂತೆ ಗಮನ ವಹಿಸಬೇಕು. ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇವೆ. ನೋಡಲ್ ಅಧಿಕಾರಿಗಳು ಸೇರಿದಂತೆ ಮೇಲ್ವಿಚಾರಕರು ನೀಡುವ ಎಲ್ಲ ಸಲಹೆ, ಸೂಚನೆಗಳನ್ನು ಅನುಸರಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಶೋಭಾ, ನೋಡಲ್ ಅಧಿಕಾರಿ ಡಾ.ಸುನೀತಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.