ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ಮೊಬೈಲ್‌ ಹಿಂದಿರುಗಿಸಿದ ಆಟೊ ಚಾಲಕ

Published 10 ಜೂನ್ 2023, 20:46 IST
Last Updated 10 ಜೂನ್ 2023, 20:46 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಯಾಣಿಕರೊಬ್ಬರು ಗಡಿಬಿಡಿಯಲ್ಲಿ ಆಟೊದಲ್ಲಿ ಮರೆತು ಹೋಗಿದ್ದ ₹30 ಸಾವಿರ ರೂಪಾಯಿ ಬೆಲೆಬಾಳುವ ಸ್ಮಾರ್ಟ್‌ಫೋನ್‌ ಅನ್ನು ಆಟೊ ಚಾಲಕರೊಬ್ಬರು ಹಿಂದಿರುಗಿಸಿದ್ದಾರೆ.

ಯಲಹಂಕದ ರೈಲ್ವೆ ನಿಲ್ದಾಣದ ಬಳಿಯ ಆಟೊ ನಿಲ್ದಾಣದ ಶ್ರೀನಿವಾಸ್‌ ಎಂಬುವರೇ ಫೋನ್‌ ಹಿಂದಿರುಗಿಸಿದ ಆಟೊ ಚಾಲಕ.   

ಬೀದರ್‌ನಿಂದ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣಕ್ಕೆ ಬಂದಿಳಿದ ಬೀದರ್‌ ಜಿಲ್ಲೆಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹನುಮಂತರಾಯ ಕೌಟಗೆ ಎಂಬುವರು ಶ್ರೀನಿವಾಸ್‌ ಅವರ ಆಟೊದಲ್ಲಿ ಜಕ್ಕೂರಿನಲ್ಲಿರುವ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ (ಎಂಜಿಐಆರ್‌ಇಡಿ) ತೆರಳಿದ್ದರು. ಅವಸರದಲ್ಲಿ ಸ್ಮಾರ್ಟ್‌ಫೋನ್‌ ಆಟೊದಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು.  

ಆಟೊದಲ್ಲಿಯೇ ಫೋನ್‌ ಬಿಟ್ಟಿರುವುದು ಗೊತ್ತಾಗುತ್ತಿದ್ದಂತೆಯೇ ಕೌಟಗೆ ಅವರು ಸಹೋದ್ಯೋಗಿ ಫೋನ್‌ನಿಂದ ತಮ್ಮ ಫೋನ್‌ಗೆ ಕರೆ ಮಾಡಿದರು. ಫೋನ್‌ ರಿಂಗ್‌ ಆಗುತ್ತಿದ್ದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಅಲ್ಲಿಗೇ ತಮ್ಮ ಮೊಬೈಲ್ ಸಿಗಬಹುದು ಎಂಬ ಆಸೆ ಕೈಬಿಟ್ಟ ಅವರು ತರಬೇತಿಗೆ ತೆರಳಿದರು.

ಸ್ವಲ್ಪ ಹೊತ್ತಿಗೆ ಕೌಟಗೆ ಅವರ ಸಹೋದ್ಯೋಗಿ ಫೋನ್‌ಗೆ ಕರೆಯೊಂದು ಬಂದಿತು. ‘ಸರ್‌, ಆಟೊದಲ್ಲಿಯೇ ನೀವು ಫೋನ್‌ ಮರೆತು ಹೋಗಿದ್ದೀರಿ. ನಾನು ಈಗ ತಾನೇ ನೋಡಿದೆ. ಫೋನ್‌ ತಂದು ಕೊಡುತ್ತೇನೆ’ ಎಂದು ಶ್ರೀನಿವಾಸ ಹೇಳಿದರು. ದೇವನಹಳ್ಳಿ ಕಡೆಗೆ ತೆರಳಿದ್ದ ಶ್ರೀನಿವಾಸ್‌ ತಾಸಿನ ಬಳಿಕ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬಳಿ ಬಂದು ಕೌಟಗೆ ಅವರಿಗೆ ಮೊಬೈಲ್‌ ಒಪ್ಪಿಸಿದರು.

ಮರಳಿ ಮೊಬೈಲ್‌ ಸಿಕ್ಕ ಖುಷಿಯಲ್ಲಿ ಕೌಟಗೆ ಹಣ ನೀಡಲು ಮುಂದಾದರು. ಆದರೆ, ಶ್ರೀನಿವಾಸ ಅದನ್ನು ನಯವಾಗಿ ತಿರಸ್ಕರಿಸಿದರು.  ‘ನನ್ನ ಆಟೊದಲ್ಲಿ ಯಾರು ಏನೇ ಬಿಟ್ಟು ಹೋದರೂ ಅದನ್ನು ಅದರ ಮಾಲೀಕರಿಗೆ ಮರಳಿಸುತ್ತೇನೆ. ಇದನ್ನು ವ್ರತದಂತೆ ಪಾಲಿಸಿಕೊಂಡು ಬಂದಿದ್ದೇನೆ. ಪರರ ವಸ್ತು ಪಾಷಾಣಕ್ಕೆ ಸಮ ಎಂದು ನಂಬಿದವನು ನಾನು’ ಎಂದು ಶ್ರೀನಿವಾಸ್‌ ಹೇಳಿದರು.

‘ಪ್ರಾಮಾಣಿಕತೆ, ಸತ್ಯ ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಅಪರೂಪಕ್ಕೊಮ್ಮೆ ಶ್ರೀನಿವಾಸ್ ಅಂತಹ ಪ್ರಾಮಾಣಿಕರು ಸಿಗುತ್ತಾರೆ. ಈಗಲೂ ಇಂಥವರು ಇದ್ದಾರಲ್ಲ ಎನ್ನುವುದು ನೆಮ್ಮದಿಯ ವಿಷಯ’ ಎಂದು ಪಿಡಿಒ ಹನುಮಂತರಾಯ ಕೌಟಗೆ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಅನುಭವ ಹಂಚಿಕೊಂಡರು.

‘ನಾನು ನೀಡಿದ ಹಣವನ್ನೂ ಆತ ಮುಟ್ಟಲಿಲ್ಲ. ಒಂದು ಕಪ್‌ ಟೀ ಕೂಡ ಕುಡಿಯಲಿಲ್ಲ. ನೆನಪಿಗೋಸ್ಕರ ಒಂದು ಫೋಟೊ ತೆಗೆಸಿಕೊಂಡ. ಒಂದಿಲ್ಲ ಒಂದು ದಿನ ಸತ್ಯ, ಪ್ರಮಾಣಿಕತೆಗೆ ತಕ್ಕ ಸಿಗಬೇಕಾದ ಪ್ರತಿಫಲ ಸಿಗುತ್ತದೆ ಎಂದು ಹೇಳಿ ಹೊರಟುಹೋದ’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT