ಹಿರಿಯ ನಾಗರಿಕರ ಪರ ಕಾನೂನು ಅರಿವು ಮುಖ್ಯ

7

ಹಿರಿಯ ನಾಗರಿಕರ ಪರ ಕಾನೂನು ಅರಿವು ಮುಖ್ಯ

Published:
Updated:
Deccan Herald

ದೊಡ್ಡಬಳ್ಳಾಪುರ: ‘ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳಿಗಾಗಿ ಕಾದು ಕುಳಿತುಕೊಳ್ಳುವಂತಹ ದೈನೇಸಿ ಸ್ಥಿತಿಗೆ ನಮ್ಮ ಹಿರಿಯರನ್ನು ದೂಡುತ್ತಿರುವುದು ದುರಂತದ ಸಂಗತಿಯಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಪಿ.ಕೃಷ್ಣಭಟ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರ ಇವರ ವತಿಯಿಂದ ಮಂಗಳವಾರ ನಡೆದ ಗಾಂಧಿ ಜಯಂತಿ ಮತ್ತು ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು.

‘ಹಿರಿಯರನ್ನು ಸಾಕಿ ಸಲಹಬೇಕಿರುವುದು ಭಾರತೀಯ ಸಂಸ್ಕೃತಿಯಲ್ಲಿ ಸಹಜವಾಗಿಯೇ ಆಗಬೇಕಿರುವ ಕೆಲಸ. ಆದರೆ ಇಂದು ಕಾನೂನಿನ ಮೂಲಕ ಮಾಡುವಂತಾಗಿದೆ. ದೇಶದಲ್ಲಿ ಇಂದು ರೂಪಾಯಿ ಮೌಲ್ಯ ಮಾತ್ರ ಕುಸಿಯುತ್ತಿಲ್ಲ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ತಾಯಂದಿರು ಮಕ್ಕಳ ಬಗ್ಗೆ ಕಾಳಜಿ ವಹಿಸುವ ಜೊತೆಗೆ ನಮ್ಮ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಬೇಕು. ಯಾವುದೇ ಬದಲಾವಣೆ ನಮ್ಮಿಂದಲೇ ಮೊದಲು ಆರಂಭವಾಗಬೇಕು’ ಎಂದರು.

ರಾತ್ರಿ 12 ಗಂಟೆಯಲ್ಲೂ ಮಹಿಳೆ ಒಬ್ಬಂಟಿಯಾಗಿ ತಿರುಗಾಡುವಂತಾದರೆ ಮಾತ್ರ ನಿಜವಾದ ಸ್ವಾತಂತ್ರ್ಯ ಎನ್ನುವ ಆಸೆ ಗಾಂಧೀಜಿಯವರದಾಗಿತ್ತು. ಆದರೆ ಇಂದು ಹಗಲಿನ ವೇಳೆಯಲ್ಲಿಯೇ ಮಹಿಳೆಯರು ನಿರ್ಭಯವಾಗಿ ತಿರುಗಾಡಲು ಭಯಪಡುವಂತಾಗಿದೆ ಎಂದರು.

ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಯೋಜನಾ ಸಹಾಯಕ ಅಧಿಕಾರಿ ಸುಬ್ರಮಣ್ಯರಾಜ್ ಅರಸ್, ಜಿಲ್ಲೆಯಲ್ಲಿ ಇದುವರೆಗೂ 24 ಸಾವಿರ ಹಿರಿಯ ನಾಗರಿಕರ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. ಅಂಕಿ ಅಂಶಗಳ ಪ್ರಕಾರ ಇನ್ನು ಸುಮಾರು 30 ಸಾವಿರ ಜನರಿಗೆ ಕಾರ್ಡ್ ಗಳನ್ನು ವಿತರಣೆ ಮಾಡಬೇಕಿದೆ. ಈ ಕಾರ್ಡ್ ಗಳನ್ನು ಪಡೆಯಲು ಈಗ ಆನ್ ಲೈನ್ ಮೂಲಕವು ಅರ್ಜಿ ಸಲ್ಲಿಸಿ ಒಂದೇ ದಿನದಲ್ಲಿ ಕಾರ್ಡ್ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.

ಇಲಾಖೆ ವತಿಯಿಂದ ನಗರದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ವತಿಯಿಂದ ಹಗಲಿನ ವೇಳೆಯಲ್ಲಿ ಹಿರಿಯ ನಾಗರೀಕರ ಯೋಗ ಕ್ಷೇಮ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ ಖಾಸಗಿಯವರು ನಡೆಸುವ ವೃದ್ದಾಶ್ರಮಗಳಿಗು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲಾಗುತ್ತಿದೆ ಎಂದರು.

ಹಿರಿಯ ನಾಗರಿಕರ ಪರವಾಗಿ 2007ರಲ್ಲಿ ಜಾರಿಗೆ ತರಲಾಗಿರುವ ಕಾನೂನಿನ ಅಡಿಯಲ್ಲಿ ಸಾಕಷ್ಟು ರಕ್ಷಣೆ ನೀಡಲು, ಜೀವನಾಂಶ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಅವರಿಗೆ ಸಹಾಯಕ್ಕಾಗಿ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಸಹಾಯವಾಣಿಯನ್ನು ತೆರೆಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿನ 1090 ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುವುದು. ಮಕ್ಕಳ ಹೆಸರಿಗೆ ಬರೆದುಕೊಟ್ಟಿರುವ ಆಸ್ತಿಯನ್ನು ಮತ್ತೆ ಹಿಂದಕ್ಕೆ ಪಡೆಯಲು ಸಹ ಅಧಿಕಾರ ಇದೆ ಎಂದರು.

ಈ ಕಾರ್ಡ್ ಗಳನ್ನು ಪಡೆಯುವುದರಿಂದ ಬಸ್, ವಿಮಾನ, ರೈಲು ಸೇರಿದಂತೆ ಎಲ್ಲ ಕಡೆಯಲ್ಲೂ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ಪ್ರತ್ಯೇಕವಾಗಿ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್ ಗಳಲ್ಲಿ ಠೇವಣಿ ಮೇಲೆ ಹೆಚ್ಚಿನ ಬಡ್ಡಿ ಪಡೆಯಲು ಅವಕಾಶ ಎಂದರು.

ಹಿರಿಯ ನಾಗರಿಕರ ಕಾನೂನು ಕುರಿತು ಹಿರಿಯ ವಕೀಲರಾದ ಎ.ಆರ್.ಸಂಪತ್ ಕುಮಾರ್ ಮಾತನಾಡಿದರು. ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದ ಅಧ್ಯಕ್ಷೆ ಕೆ.ಎಸ್.ಪ್ರಭಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ, ಸಮಾಜದ ಉಪಾಧ್ಯಕ್ಷೆ ಕೆ.ಜೆ.ಕವಿತ, ಖಜಾಂಚಿ ಜಿ.ವಿ.ಯಶೋಧ, ನಿರ್ದೇಶಕರಾದ ಎಂ.ಕೆ.ವತ್ಸಲ, ವಿ.ನಿರ್ಮಲ, ಎಸ್.ಗೌರಮ್ಮ, ಟಿ.ಪಿ.ವರಲಕ್ಷ್ಮೀ, ಬಿ.ಎ.ಗಿರಿಜ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !