ಹೆಜ್ಜೇನು ಗೂಡು ತೆರವು ಕಾರ್ಯಾಚರಣೆ ಚುರುಕು

7
ನಿಟ್ಟುಸಿರು ಬಿಟ್ಟ ಸ್ಥಳೀಯರು, ನೂರಾರು ಜನರಿಂದ ವೀಕ್ಷಣೆ

ಹೆಜ್ಜೇನು ಗೂಡು ತೆರವು ಕಾರ್ಯಾಚರಣೆ ಚುರುಕು

Published:
Updated:
Prajavani

ದೇವನಹಳ್ಳಿ: ನಗರದ ಹಳೆ ತಾಲ್ಲೂಕು ಕಚೇರಿ ಮುಂಭಾಗದ ಎರಡು ಬೃಹತ್ ಮರದ ಕೊಂಬೆಗಳಲ್ಲಿ ಗೂಡು ಕಟ್ಟಿದ ಹೆಜ್ಜೇನುಗಳನ್ನು ಕೊನೆಗೂ ಪುರಸಭೆ ತೆರವುಗೊಳಿಸುವ ಕಾರ್ಯಾಚರಣೆ ಚುರುಕುಗೊಳಿಸಿದೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

ಡಿ.24 ರಂದು 'ಪ್ರಜಾವಾಣಿ' ಸಂಚಿಕೆಯಲ್ಲಿ ಹಳೆ ತಾಲ್ಲೂಕು ಕಚೇರಿ ಮತ್ತು ಪ್ರವಾಸಿ ಮಂದಿರ ಸುತ್ತಮುತ್ತ ಗೂಡು ಕಟ್ಟಿರುವ ಹೆಜ್ಜೇನು, ತಂಟೆಗೆ ಹೋದರೆ ದಾಳಿ ಮಾಡುವ ಆತಂಕ ಎಂಬ ಶೀರ್ಷಿಕೆಯಡಿ ಸಮಗ್ರ ವರದಿಯನ್ನು ಪ್ರಕಟಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.

ಕೊನೆಗೂ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿರುವುದನ್ನು ನೂರಾರು ಜನ ಸ್ಥಳೀಯರು ದೂರದಿಂದಲೇ ತೆರವು ಕಾರ್ಯಾಚರಣೆಯನ್ನು ವೀಕ್ಷಿಸಿದರು.

ಬೆಳಗಿನ ಜಾವ 3.30 ರಿಂದ ಜೇನು ಗೂಡು ತೆರವು ಕಾರ್ಯಚರಣೆ ನಿಗದಿಯಾಗಿತ್ತು. ಹೊರರಾಜ್ಯದ 15 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಕ್ರೇನ್ ಯಂತ್ರ ಸಕಾಲದಲ್ಲಿ ಬರುವುದು ತಡವಾದ ಕಾರಣ 5.30ರಿಂದ ಆರಂಭಿಸಲಾಗಿದೆ. ಮರದ ಕೆಳಗೆ ಹೊಗೆ ಹೆಚ್ಚು ಮಾಡಿ ಸಿಬ್ಬಂದಿ ಜೇನುಗೂಡು ತೆರವುಗೊಳಿಸುವ ಕೆಲಸ ಆರಂಭಿಸಿದ್ದಾರೆ.

ಸುಮಾರು 150 ಕ್ಕೂ ಹೆಚ್ಚು ಗೂಡುಗಳಿವೆ ಎಂದು ಅಂದಾಜಿಸಲಾಗಿದೆ. ಉಪಯೋಗವಿಲ್ಲದ ಈ ಎರಡು ಬುರುಜು ಮರ ಕಟಾವಿಗೆ ಅರಣ್ಯ ಇಲಾಖೆ ಅನುಮತಿ ಪಡೆಯಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮೂರ್ತಿ ತಿಳಿಸಿದರು.

ತೆರವು ಕಾರ್ಯಾಚರಣೆಯ ಜತೆಗೆ ತೆರವುಗೊಂಡ ಜೇನಿನ ಗೂಡಿನಿಂದ ಶೇಖರಣೆಗೊಂಡ ತಾಜಾ ಜೇನು ತುಪ್ಪ ಲೀಟರ್‌ಗೆ ₹ 400ಕ್ಕೆ ಮಾರಾಟ ಮಾಡುತ್ತಿದ್ದ ಸಿಬ್ಬಂದಿ, ತೆರವು ಕಾರ್ಯ ವೀಕ್ಷಿಸಲು ಬಂದವರಿಗೆ ಜೇನಿನ ಸಿಹಿ ನೀಡಿದರು. ಕೆಲವರು ಬಾಯಿ ಚಪ್ಪರಿಸಿಕೊಂಡೇ ಇದ್ದರು. ಅಂತೂ ಇಂತೂ ಜೇನು ಗೂಡು ಹೋಯಿತಲ್ಲಾ ಎಂದು ಮಾತನಾಡಿಕೊಳ್ಳುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !