ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡಿಗಾನಹಳ್ಳಿ: ಕಲಿಕಾ ಹಬ್ಬಕ್ಕೆ ಚಾಲನೆ

30ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗಿ: ಅಡುಗೆ ತಯಾರಿಕೆ ಪ್ರದರ್ಶನ
Last Updated 25 ಜನವರಿ 2023, 5:51 IST
ಅಕ್ಷರ ಗಾತ್ರ

ಸೂಲಿಬೆಲೆ (ಹೊಸಕೋಟೆ): ಹೋಬಳಿಯ ಬೆಂಡಿಗಾನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಅದ್ದೂರಿಯಾಗಿ ಕಲಿಕಾ ಹಬ್ಬ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶರತ್‌ ಬಚ್ಚೇಗೌಡ, ‘ಮಕ್ಕಳಲ್ಲಿರುವ ಕಲಿಕೆಯನ್ನು ವಿಭಿನ್ನವಾಗಿ ಹೊರತರುವ ಕೆಲಸಕ್ಕೆ ಶಿಕ್ಷಣ ಇಲಾಖೆ ವಿವಿಧ ರೀತಿಯಲ್ಲಿ ವೇದಿಕೆ ನೀಡುತ್ತಿದೆ. ಕಲಿಕಾ ಹಬ್ಬದ ಮೂಲಕ ಮತ್ತೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.

ಸೂಲಿಬೆಲೆ ಹಾಗೂ ಬೆಂಡಿಗಾನಹಳ್ಳಿ ಕ್ಲಸ್ಟರ್‌ ಸಹಯೋಗದಡಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 30ಕ್ಕೂ ಹೆಚ್ಚು ಶಾಲೆಗಳು ಈ ಹಬ್ಬದಲ್ಲಿ ಪಾಲ್ಗೊಂಡಿವೆ. ಮಕ್ಕಳಿಂದ ತಯಾರಿಸಲಾದ ಕಲಿಕಾ ಪರಿಕರಗಳನ್ನು ಪ್ರದರ್ಶಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಿಸಿಯೂಟ ಸಿಬ್ಬಂದಿಯ ಸಹಕಾರದಲ್ಲಿ ವಿಭಿನ್ನ ಅಡುಗೆ ತಯಾರಿಸಿ ಪ್ರದರ್ಶನದ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡುತ್ತಿರುವುದು ಶ್ಲಾಘನೀಯ. ಕಾಯಕ ಯೋಗಿಗಳಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.

ದೊಡ್ಡಹರಳಗೆರೆ ಗ್ರಾ.ಪಂ. ಅಧ್ಯಕ್ಷ ಬಿ.ವಿ. ಸತೀಶಗೌಡ ಮಾತನಾಡಿ, ಶಾಲೆಯಲ್ಲಿನ ಕಲಿಕಾ ಹಬ್ಬವನ್ನು ಗ್ರಾಮದಲ್ಲಿ ನಡೆಯುವ ಸಂಕ್ರಾಂತಿ ಹಬ್ಬವನ್ನು ನೆನಪಿಸುವ ರೀತಿಯಲ್ಲಿ ಮಾಡಿದ್ದಾರೆ ಎಂದರು.

‘ಶಾಲೆಯಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಪ್ರತಿ ಮಗು, ಶಿಕ್ಷಕರು, ಅಧಿಕಾರಿಗಳು ಈ ಹಬ್ಬದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಬಿಸಿಯೂಟ ಸಿಬ್ಬಂದಿ ಹೆಚ್ಚಿನ ಶ್ರಮವಹಿಸಿ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ’ ಎಂದು ಸಂಪನ್ಮೂಲ ವ್ಯಕ್ತಿ ಮಂಜುನಾಥ್‌ ಶ್ಲಾಘಿಸಿದರು.

ಸೂಲಿಬೆಲೆ ಕ್ಲಸ್ಟರ್‌ 11 ಶಾಲೆ, ಬೆಂಡಿಗಾನಹಳ್ಳಿ ಕ್ಲಸ್ಟರ್‌ನ 13 ಶಾಲೆ ಸೇರಿದಂತೆ 24 ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ರಂಗೋಲಿ, ಗಾಳಿಪಟ, ಪಠ್ಯ ಚಟುವಟಿಕೆ, ಪಠ್ಯೇತರ ಚಟುವಟಿಕೆಗಳು ಗಮನ ಸೆಳೆದವು. ಶಿಕ್ಷಣ ಇಲಾಖೆಯ ಆದೇಶದಂತೆ ಉತ್ತಮವಾಗಿ ಆಹಾರ ತಯಾರಿಸಿದ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು.

ಶಾಸಕ ಶರತ್‌ ಬಚ್ಚೇಗೌಡ ಎತ್ತಿನ ಗಾಡಿ ಚಲಾಯಿಸುವ ಮೂಲಕ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಭುವನೇಶ್ವರಿ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಿ. ಶ್ರೀನಿವಾಸ್, ನಿರ್ದೇಶಕ ವೆಂಕಟೇಶ್, ಸಿಆರ್‌ಪಿ ಮಂಜುನಾಥ್, ಗುತ್ತಿಗೆದಾರ ದೇವರಾಜಪ್ಪ, ಇಟ್ಟಸಂದ್ರ ಗೋಪಾಲ್, ಡಾ.ಡಿ.ಟಿ. ವೆಂಕಟೇಶ್, ಇಸಿಒ ರವಿಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಉಷಾರಾಣಿ, ಗ್ರಾ.ಪಂ. ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT