ದೇಶದ ಏಕತೆಗಾಗಿ ಬಿಜೆಪಿ ಬೆಂಬಲಿಸಿ: ಎಸ್.ವಿ. ರಾಘವೇಂದ್ರ

ಶುಕ್ರವಾರ, ಏಪ್ರಿಲ್ 19, 2019
22 °C
ಆನೇಕಲ್‌ನಲ್ಲಿ ಮತಯಾಚನೆ, ಪಾದಯಾತ್ರೆ

ದೇಶದ ಏಕತೆಗಾಗಿ ಬಿಜೆಪಿ ಬೆಂಬಲಿಸಿ: ಎಸ್.ವಿ. ರಾಘವೇಂದ್ರ

Published:
Updated:
Prajavani

ಆನೇಕಲ್: ದೇಶದ ಸಮಗ್ರತೆ ಹಾಗೂ ಏಕತೆಗಾಗಿ ಬಿಜೆಪಿಯನ್ನು ಬೆಂಬಲಿಸಿ. ಮತದಾರರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಥ್‌ ನಾರಾಯಣಗೌಡ ಅವರನ್ನು ಗೆಲ್ಲಿಸಿ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಸ್.ವಿ. ರಾಘವೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಬಿಜೆಪಿ ಅಭ್ಯರ್ಥಿ ಅವರ ಪರವಾಗಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು.

ದೇಶದ ಎಲ್ಲೆಡೆ ಮೋದಿ ಅವರ ಪರವಾದ ಅಲೆಯಿದೆ. ಹಾಗಾಗಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿ ಅವರು ಪ್ರಧಾನಿಯಾಗುವುದು ಖಚಿತ. ಹಾಗಾಗಿ ಕಾರ್ಯಕರ್ತರು ಚುನಾವಣೆಯಲ್ಲಿ ಬೂತ್ ಮಟ್ಟದಿಂದಲೂ ಹೆಚ್ಚಿನ ಶ್ರಮವಹಿಸಿ ಲೀಡ್ ನೀಡುವ ಮೂಲಕ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಬಿಜೆಪಿ ಮುಖಂಡ ಎಂ.ಯಂಗಾರೆಡ್ಡಿ ಮಾತನಾಡಿ, ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳನ್ನು ಬೆಂಬಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಪ್ರಚಾರ ಸಭೆಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಸಾಫ್ಟ್‌ವೇರ್ ಉದ್ಯೋಗಿಗಳು, ವಿದ್ಯಾವಂತರು ಬಿಜೆಪಿಯ ಪರ ಎಲ್ಲೆಡೆ ಒಲವು ತೋರುತ್ತಿದ್ದಾರೆ. ಜನಧನ್, ಆಯುಷ್ಮಾನ್ ಭಾರತ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಳಕ್ಕೆ ಕ್ರಮ, ಭಾರತ್‌ ಮಾಲಾ ಯೋಜನೆ ಅಂತರರಾಜ್ಯ ರಸ್ತೆಗಳ ಅಭಿವೃದ್ಧಿ, ಪ್ರತಿ ಮನೆಗೆ ಅಡುಗೆ ಅನಿಲ ಪೂರೈಕೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ದೇಶದ ಪ್ರತಿಯೊಬ್ಬರ ಮನೆಮಾತಾಗಿರುವ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಆನೇಕಲ್‌ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿಯ ಚಿಂತನೆಗಳನ್ನು ಎಲ್ಲರೂ ಬೆಂಬಲಿಸಿದ್ದಾರೆ ಎಂದರು.

ಬಿಜೆಪಿ ಟೌನ್ ಘಟಕದ ಅಧ್ಯಕ್ಷ ಸಿ.ಕೆ.ಜಗನ್ನಾಥ್, ಪುರಸಭಾ ಸದಸ್ಯರಾದ ಕೆ.ನಾಗರಾಜು, ಎಂ.ನಾರಾಯಣಸ್ವಾಮಿ, ಶ್ರೀನಿವಾಸ್, ಎಪಿಎಂಸಿ ನಿರ್ದೇಶಕ ಬಿ.ನಾಗರಾಜು, ಮುಖಂಡರಾದ ದಿನ್ನೂರು ರಾಜು, ಎಂ.ರಾಮಕೃಷ್ಣ, ಸುರೇಶ್, ಶ್ರೀನಿವಾಸ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !