ಭಾನುವಾರ, ಸೆಪ್ಟೆಂಬರ್ 20, 2020
22 °C
ದೊಡ್ಡಬಳ್ಳಾಪುರ: ಕೊರೊನಾ ವೈರಸ್‌ ಹರಡುವ ಭಯ l ಅಂತರ ಕಾಯ್ದುಕೊಳ್ಳಲು ಗ್ರಾಮಸ್ಥರ ಉಪಾಯ

ಹೊಲಗಳಲ್ಲಿ ಗುಡಿಸಲು ನಿರ್ಮಿಸಿ ವಾಸ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೊರೊನಾ ವೈರಸ್‌ ಸೋಂಕಿಗೆ ಹೆದರಿ ತಾಲ್ಲೂಕಿನ ಸಾಸಲು ಹೋಬಳಿಯ ಉಜ್ಜನಿ ಗ್ರಾಮದ ಕೆಲ ಕುಟುಂಬಗಳವರು ಊರು ತೊರೆದು ಹೊಲಗಳಲ್ಲೇ ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು
ವಾಸಮಾಡುತ್ತಿದ್ದಾರೆ.

ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಕೋವಿಡ್‌-19 ಈಗ ತಾಲ್ಲೂಕಿನ ಬಹುತೇಕ ಗ್ರಾಮಗಳನ್ನು ವ್ಯಾಪಿಸಿದೆ. ತಾಲ್ಲೂಕು ಕೇಂದ್ರದಿಂದ ಸುಮಾರು 25 ರಿಂದ 30 ಕಿ.ಮೀ ದೂರದ ಗ್ರಾಮಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.

ಕೋವಿಡ್‌-19 ದೃಢಪಟ್ಟ ಮನೆಗಳ ಸುತ್ತ ಕಂಟೈನ್‌ಮೆಂಟ್‌ ಪ್ರದೇಶವನ್ನಾಗಿ ಮಾಡಲಾಗುತ್ತಿದೆ. ಇದರಿಂದ ಮನೆಯವರು ಎಲ್ಲೂ ಹೋಗಲು, ಯಾವುದೇ ರೀತಿಯ ದಿನ ನಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

‘ನಗರ ಪ್ರದೇಶದಲ್ಲಿ ನಮ್ಮನ್ನು ನಂಬಿಕೊಂಡು ಯಾವುದೇ ರೀತಿಯ ಸಾಕುಪ್ರಾಣಿಗಳು ಇರುವುದಿಲ್ಲ. ಹೀಗಾಗಿ ಮನೆಯಿಂದ ಹೊರ ಹೋಗದೆ ಇದ್ದರೂ ತೊಂದರೆ ಇಲ್ಲ. ಆದರೆ, ಗ್ರಾಮಗಳಲ್ಲಿನ ರೈತರ ಮನೆಯಲ್ಲಿ ದನ,ಕರು,ಮೇಕೆಗಳಿಗೆ ಹೊಲಕ್ಕೆ ಹೋಗಿ ಮೇವು ತಂದು ಹಾಕುವುದು ಕಷ್ಟವಾಗುತ್ತದೆ ಎನ್ನುವ ಉಜ್ಜನಿ ಗ್ರಾಮದ ಗಂಗಾಧರಪ್ಪ, ಈಗ ಮಳೆಗಾಲ ಆರಂಭವಾಗಿದೆ. ಗ್ರಾಮದಲ್ಲಿ ಯಾರಿಗಾದರೂ ಕೋವಿಡ್‌ ದೃಢಪಟ್ಟರೆ ಕೃಷಿ ಕೆಲಸವೇ ನಿಂತು ಹೋಗುತ್ತದೆ. ಈ ಹಿಂದೆ ಗ್ರಾಮದಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ತಿಳಿಯುತ್ತಿದ್ದಂತೆ ಇಡೀ ಬೀದಿಯನ್ನು ಬಂದ್‌ ಮಾಡಲಾಗಿತ್ತು. ಆ ಸಮಯದಲ್ಲಿ ಇನ್ನು ಮಳೆಗಾಲ ಆರಂಭವಾಗಿರಲಿಲ್ಲ. ಈಗ ಮಳೆಯಾಗುತ್ತಿದ್ದು ರಾಗಿ,ಜೋಳ ಬಿತ್ತನೆ ಮಾಡಲಾಗಿದೆ. ಹೊಲದಲ್ಲಿ ಕೆಲಸವು ಹೆಚ್ಚಾಗಿದೆ ಹೀಗಾಗಿ ಹೊಲದಲ್ಲೇ ವಾಸ ಅನಿವಾರ್ಯ’ ಎಂದರು.

‘ಕೊರೊನಾ ಹಾವಳಿ ಕಡಿಮೆಯಾಗುವವರೆಗೂ ಗ್ರಾಮದಲ್ಲಿನ ಮನೆಯಲ್ಲಿ ಇದ್ದು ಬಂಧಿಯಾಗುವುದಕ್ಕಿಂತಲೂ ಹೊಲದಲ್ಲಿಯೇ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದೇವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಮಳೆಗಾಲ ಮುಕ್ತಾಯವಾಗಿ ಕೊರೊನಾ ಹಾವಳಿ ತಗ್ಗಿದ ನಂತರ ಗ್ರಾಮದಲ್ಲಿನ ಮನೆಗೆ ಮರುಳುತ್ತೇವೆ’ ಎನ್ನುತ್ತಾರೆ ಉಜ್ಜನಿ ಗ್ರಾಮದ ರಾಮಣ್ಣ, ಮಲ್ಲೇಶ್‌, ಮುನಿರಾಜಪ್ಪ.

ಉಜ್ಜನಿ ಗ್ರಾಮ ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಸುಮಾರು 100 ಕುಟುಂಬಗಳು ಇವೆ. ಇದರಲ್ಲಿ 40ಕ್ಕೂ ಹೆಚ್ಚಿನ ಕುಟುಂಬಗಳವರು ಗ್ರಾಮವನ್ನು ತೊರೆದು ತಮ್ಮ ಹೊಲ, ತೋಟಗಳಲ್ಲೇ ತೆಂಗಿನ ಗರಿಗಳಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ಅಗತ್ಯಕ್ಕೆ ತಕ್ಕಷ್ಟು ಅಡುಗೆ ಪರಿಕರ,ದಿನಸಿ, ಬಟ್ಟೆಗಳನ್ನು ಮಾತ್ರ ಗ್ರಾಮದಲ್ಲಿನ ಮನೆಗಳಿಂದ ತೆಗೆದುಕೊಂಡು ಹೋಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.