ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

ಪುರಸಭೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
Last Updated 8 ಜನವರಿ 2019, 13:06 IST
ಅಕ್ಷರ ಗಾತ್ರ

ವಿಜಯಪುರ: ಹೆಜ್ಜೇನು ಗೂಡು ತೆರವುಗೊಳಿಸದ ಪುರಸಭೆಯ ಅಧಿಕಾರಿಗಳ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪದ ಕ್ರೀಡಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರೂಬಿ ಆಂಗ್ಲ ಶಾಲೆಯ ಶಾಲಾ ವಾರ್ಷಿಕೋತ್ಸವದ ವೇಳೆ ಜೇನು ಹುಳುಗಳು ದಾಳಿ ನಡೆಸಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರನ್ನು ಕಚ್ಚಿವೆ. ಈ ಘಟನೆಯ ಬಳಿಕ ಜನರು ಪುರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಮಾತನಾಡಿ, ’ತಿಂಗಳ ಸಂಬಳ ಪಡೆಯಲು ಮಾತ್ರ ಅಧಿಕಾರಿಗಳು ಕೆಲಸ ಮಾಡುವಂತಿದೆ. ಇದುವರೆಗೆ ನಾಲ್ಕು ಬಾರಿ ಹೆಜ್ಜೇನು ಹುಳುಗಳು ದಾಳಿ ನಡೆಸಿ ಅನೇಕರು ಗಾಯಗೊಂಡಿದ್ದಾರೆ. ಇಂದು ಬಂದ್‌ ಅಂಗವಾಗಿ ಕಾಲೇಜು ರಜೆ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ’ ಎಂದರು.

’ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಪುರಸಭೆಯವರು, ನಮ್ಮಲ್ಲಿ ಸಿಬ್ಬಂದಿ ಇಲ್ಲ; ಏನೂ ಮಾಡಲು ಆಗುವುದಿಲ್ಲವೆಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಜನರಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದ ಮೇಲೆ ಪುರಸಭೆಯವರು ಏಕೆ ಬೇಕು. ಜಿಲ್ಲಾಧಿಕಾರಿಗೆ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಇನ್ನು ಯಾರಿಗೆ ಹೇಳಬೇಕು ಎಂದುಆಕ್ರೋಶ ವ್ಯಕ್ತಪಡಿಸಿದರು.

ಗೃಹಿಣಿ ನಳಿನಾ ಮಾತನಾಡಿ, ’ಸರ್ಕಾರದಿಂದ ಬರುವಂತಹ ಅನುದಾನ ಖರ್ಚು ಮಾಡಿ ಕಮಿಷನ್ ಹೊಡೆಯಲಿಕ್ಕೆ ಮಾತ್ರ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಮಕ್ಕಳ ಸುರಕ್ಷತೆ ದೃಷ್ಟಿಯಿಂದಾದರೂ ಜೇನುಗೂಡು ತೆರವುಗೊಳಿಸದಿದ್ದರೆ ಹೇಗೆ. ದೇವನಹಳ್ಳಿ ಪುರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ ಜೇನುಗೂಡು ತೆರವುಗೊಳಿಸಿದ್ದಾರೆ. ಇವರಿಗೆ ಬೇರೆ ಅನುದಾನ ಅವರಿಗೆ ಬೇರೆ ಅನುದಾನ ಬರುತ್ತಾ’ ಎಂದು ಪ್ರಶ್ನಿಸಿದರು.

‘ಪುರಸಭೆಯಲ್ಲಿ ಸದಸ್ಯರಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಗಳು ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಪುರಸಭೆಗೆ ನಾವೇ ಹೋಗಿ ಬೀಗ ಹಾಕುತ್ತೇವೆ. ಜನರು ಏನು ಮಾಡಲಾರರು ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಅಧಿಕಾರಿಗಳು ಹೆಜ್ಜೇನು ಗೂಡು ತೆರವುಗೊಳಿಸಿದರೆ ಸರಿ ಇಲ್ಲವಾದರೆ ನಾವು ಬೀದಿಗಿಳಿಯಬೇಕಾಗುತ್ತದೆ’ ಎಂದರು.

ಹೆಜ್ಜೇನು ದಾಳಿಯಿಂದ ರಕ್ಷಿಸಿಕೊಳ್ಳಲು ಶಾಲಾ ಮಕ್ಕಳು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅಳವಡಿಸಿದ್ದ ವೇದಿಕೆಯ ಕೆಳಭಾಗದಲ್ಲಿ ಅವಿತುಕೊಂಡು ಕುಳಿತಿದ್ದರು. ಕೆಲವರು ಮರದ ರೆಂಬೆಗಳನ್ನು ಬೀಸುತ್ತಾ ರಕ್ಷಣೆ ಪಡೆದುಕೊಂಡರು. ಗಾಯಗೊಂಡಿದ್ದ ಮಕ್ಕಳಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ವಿಜಯಪುರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT