ಜಲಮೂಲ ಸಂರಕ್ಷಣೆಗೆ ಚೆಕ್ ಡ್ಯಾಂ: ಶಾಸಕ

ಶನಿವಾರ, ಜೂಲೈ 20, 2019
26 °C

ಜಲಮೂಲ ಸಂರಕ್ಷಣೆಗೆ ಚೆಕ್ ಡ್ಯಾಂ: ಶಾಸಕ

Published:
Updated:
Prajavani

ದೇವನಹಳ್ಳಿ: ಸರ್ಕಾರ ಜಲಾಮೃತ ವರ್ಷ ಘೋಷಣೆ ಮಾಡಿ ಜಲಮೂಲ ಸಂರಕ್ಷಣೆಗೆ ನೂತನವಾಗಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಅನುದಾನ ನೀಡಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ರಬ್ಬನಹಳ್ಳಿ ಗ್ರಾಮದ ಬಳಿ ಚೆಕ್ ಡ್ಯಾಂ ನಿರ್ಮಾಣ ಸಂಬಂಧ ಭೂಮಿಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಣ ಮತ್ತು ತೂಬುಗೆರೆ ಹೋಬಳಿ ವ್ಯಾಪ್ತಿಯಲ್ಲಿ ಎಸ್.ಸಿ.ಪಿ ಮತ್ತು ಪಿ.ಎಸ್.ಪಿ ಯೋಜನೆಯಡಿ ಚೆಕ್ ಡ್ಯಾಂ ಮತ್ತು ರಸ್ತೆ ಅಭಿವೃದ್ಧಿಗೆ ಒಟ್ಟು ₹5 ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರಸ್ತುತ ರಬ್ಬನಹಳ್ಳಿ ಗ್ರಾಮದ ಬಳಿ ₹ 50 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. 25 ಗ್ರಾಮಗಳಲ್ಲಿ ಚೆಕ್ ಡ್ಯಾಂ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವ ತಾಲ್ಲೂಕುಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ನೀರಿನ ಸಮಸ್ಯೆ ತಲೆದೋರಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದರಿಂದ ಕೋಟ್ಯಂತರ ರೂಪಾಯಿ ಮೊತ್ತ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಹಂತಹಂತವಾಗಿ ಚೆಕ್ ಡ್ಯಾಂ ಮತ್ತು ಇಂಗುಗುಂಡಿ, ಕೆರೆ ಅಭಿವೃದ್ಧಿಯಾದರೆ ಅಂತರ್ಜಲ ವೃದ್ಧಿಯಾಗಿ ಜೀವಜಲದ ಸೆಲೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಇದೊಂದು ಉತ್ತಮ ಯೋಜನೆ ಜಾರಿಮಾಡಿದ್ದಾರೆ’ ಎಂದರು.

‘ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ಹರಿಸುವ ಯೋಜನೆ ಪೂರ್ಣಗೊಂಡಿದೆ. ಶೀಘ್ರವಾಗಿ ಕೆರೆಗಳಿಗೆ ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಎಷ್ಟು ವರ್ಷಕ್ಕೆ ಪೂರ್ಣಗೊಳ್ಳಲಿದೆ ಎಂಬುವುದಕ್ಕೆ ಸದ್ಯ ಮಾಹಿತಿ ಇಲ್ಲ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅರಿವಿದೆ. ಜಲಮೂಲ ಹಿಡಿದಿಟ್ಟುಕೊಳ್ಳುವ ಇಂತಹ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ಮಳೆಗಾಲದಲ್ಲಿ ನೀರು ತುಂಬಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣ, ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಹಾಪ್‌ಕಾಮ್ಸ್‌ ನಿರ್ದೇಶಕ ಶ್ರೀನಿವಾಸ್, ಕುಂದಾಣ ಹೋಬಳಿ ಜೆಡಿಎಸ್ ಘಟಕ ಅಧ್ಯಕ್ಷ ಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ಮುಖಂಡರಾದ ಪ್ರಭಾಕರ್, ನಂಜೇಗೌಡ, ಸುಧಾಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !