ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ವಿಚಾರ ನಿರ್ಲಕ್ಷ್ಯ ಸಲ್ಲದು

ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವ
Last Updated 20 ಜನವರಿ 2019, 13:14 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು, ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಶಿಡ್ಲಘಟ್ಟ ಬಿ.ಜಿ.ಎಸ್. ಶಾಲೆಯ ಪ್ರಾಂಶುಪಾಲ ಕೆ.ಮಹದೇವ್ ಹೇಳಿದರು.

ಓಂಕಾರೇಶ್ವರಸ್ವಾಮಿ ಒಕ್ಕಲಿಗರ ಟ್ರಸ್ಟ್ ನ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮಕ್ಕಳಿಗೆ ಹುಟ್ಟಿನಿಂದಲೇ ಸಂಸ್ಕಾರ ನೀಡಬೇಕು. ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರುವುದು ಬೇಡ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಂಸ್ಕಾರ ಗರ್ಭದಿಂದ ಬರಬೇಕು. ಮಕ್ಕಳಿಗೆ ವಿದ್ಯೆ ಗರ್ಭಾವಸ್ಥೆಯಲ್ಲಿ ಅಂಕುರವಾಗುತ್ತದೆ. ಪೋಷಕರು ಅವರ ಕಲಿಕೆಯ ಬಗ್ಗೆ ಚಿಂತನೆ ಮಾಡಬೇಕು. ಶಿಕ್ಷಕರೊಟ್ಟಿಗೆ ಸಹಕಾರ ಕೊಡಿ, ಪೋಷಕರು, ಶಿಕ್ಷಕರು ಇಬ್ಬರೂ ಸೇರಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.

ನಿವೃತ್ತ ಪ್ರಾಂಶುಪಾಲ ಟಿ.ಕೃಷ್ಞಪ್ಪ ಮಾತನಾಡಿ, ‘ಮುಂದುವರಿದ ದೇಶಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ದೇಶವು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದರೆ ಮಾತ್ರ ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯ. ದೇಶದಲ್ಲಿ ಕೇರಳ ಬಿಟ್ಟರೆ, ಬೇರೆ ಯಾವುದೇ ರಾಜ್ಯಗಳಲ್ಲಿ ಶೈಕ್ಷಣಿಕ ಬೆಳವಣಿಗೆಯಾಗಲಿಲ್ಲ. ವಿವೇಕವುಳ್ಳ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾಗಿದೆ. ದೇಶವನ್ನು ಕಟ್ಟುವಂತಹವರಾಗಬೇಕು’ ಎಂದರು.

ಸಾಹಿತಿ ಎಚ್.ಎಸ್. ರುದ್ರೇಶ್ ಮೂರ್ತಿ ಮಾತನಾಡಿ, ‘ಮೊಬೈಲ್‌ಗಳು, ಕಂಪ್ಯೂಟರ್‌ಗಳು ಮಕ್ಕಳ ಕಲಿಕೆಗೆ ಮಾರಕವಾಗುತ್ತಿವೆ. ಉಪಯೋಗವಾಗುಷ್ಟರ ಮಟ್ಟಿಗೆ ಬಳಕೆಯಾಗುತ್ತಿಲ್ಲ. ಗುರುಹಿರಿಯರನ್ನು ಗೌರವಿಸುವಂತಹ ಸಂಸ್ಕಾರ ಕಾಣೆಯಾಗುತ್ತಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಮಾತನಾಡಿ, ‘ಶೈಕ್ಷಣಿಕ ಪ್ರಗತಿಯಾಗಬೇಕಾದರೆ ಪಠ್ಯ, ಪಠ್ಯೇತರ ಚಟುವಟಿಕೆಗಳು ಎರಡೂ ಇರಬೇಕು. ಅವರ ಮಾಪನವಾಗಬೇಕು. ಅವರ ಪ್ರತಿಭೆಗೆ ಪೂರ್ಣ ಅವಕಾಶವನ್ನು ನೀಡಬೇಕು’ ಎಂದರು.

‘ಮಾಧ್ಯಮದ ಪರಿಣಾಮ ವಿದ್ಯಾರ್ಥಿಗಳು ಸಾಕಷ್ಟು ಕೌಶಲಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರಿಗೆ ಉತ್ತಮ ಮೌಲ್ಯಗಳನ್ನು ತುಂಬಿಸಬೇಕು. ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಕಡೆಗೆ ವಿಶೇಷ ಗಮನಕೊಡಿ, ಆಹಾರದ ಬಗ್ಗೆ ಎಚ್ಚರಿಕೆ ಇಡಬೇಕು. ಟಿ.ವಿ.ಗಳ ವೀಕ್ಷಣೆ ತಪ್ಪಿಸಬೇಕು. ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಬೇಕು’ ಎಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ವೀರಣ್ಣ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ಮುಕ್ತವಾಗಿ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಬೇಕು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಸಂಸ್ಥೆಯ ಕಾರ್ಯದರ್ಶಿ ಎ.ವಿ.ಎಂ.ನಾಗರಾಜು, ಖಜಾಂಚಿ ಸಿ.ನಾರಾಯಣಸ್ವಾಮಿ, ನಿರ್ದೇಶಕರಾದ ವಿ.ಎಂ.ನಾಗರಾಜು, ಕೆ.ಕೇಶವಪ್ಪ, ವಿ.ವೆಂಕಟೇಶ್, ಎನ್.ಗೋಪಾಲ್, ಎಚ್.ಜಿ.ಹನುಮಂತಪ್ಪ, ಎನ್.ತೋಟದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT