ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು

ಬಸವ ಕಲ್ಯಾಣಮಠದ ಅಧ್ಯಕ್ಷ ಮಹದೇವಸ್ವಾಮೀಜಿ
Last Updated 25 ನವೆಂಬರ್ 2019, 14:09 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬರಬೇಕಾದರೆ ಧಾರ್ಮಿಕ ಕಾರ್ಯಗಳತ್ತ ಅವರನ್ನು ಮುನ್ನಡೆಸಬೇಕು ಎಂದು ಬಸವ ಕಲ್ಯಾಣಮಠದ ಅಧ್ಯಕ್ಷ ಮಹದೇವಸ್ವಾಮೀಜಿ ಹೇಳಿದರು.

ಇಲ್ಲಿನ ಚಂದೇನಹಳ್ಳಿ ಗೇಟ್‌ನಲ್ಲಿರುವ ಬಸವ ಕಲ್ಯಾಣಮಠದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಆಯೋಜಿಸಿದ್ದ ಕಡಲೇಕಾಯಿ ಪರಿಷೆ ಹಾಗೂ ಶಿವ ಪಂಚಾಕ್ಷರಿ ಮಹಾಮಂತ್ರ ಅಖಂಡ ಭಜನೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಾಪಂಚಿಕ ವಿಚಾರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದೆ, ಅಧ್ಯಾತ್ಮದತ್ತ ಮುನ್ನಡೆದಾಗ ಸನ್ಮಾರ್ಗದ ಹಾದಿ ಕಾಣಿಸುತ್ತದೆ. ಸೃಷ್ಟಿಯಲ್ಲಿನ ಎಲ್ಲ ಜೀವಿಗಳಿಗಿಂತಲೂ ಭಗವಂತನ ದೃಷ್ಟಿಯಲ್ಲಿ ಮಾನವ ಹೆಚ್ಚು ಶ್ರೇಷ್ಠವಾದ ವ್ಯಕ್ತಿಯಾಗಿದ್ದಾನೆ. ಅವನಿಗೆ ಯೋಚನೆ ಮಾಡುವ ಜ್ಞಾನ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೀಗೆ ಎಲ್ಲವನ್ನೂ ನೀಡಿದ್ದಾನೆ. ಸನ್ಮಾರ್ಗದಲ್ಲಿ ಮುನ್ನಡೆದಾಗ ಮುಕ್ತಿ ಕಾಣಲಿಕ್ಕೆ ಸಾಧ್ಯವಿದೆ. ಆದರೆ ಲೌಕಿಕವಾದ ಜಂಜಾಟಗಳಿಂದ ಹೊರಬಂದಾಗ ಮಾತ್ರವೇ ಇದು ಸಾಧ್ಯವಾಗುತ್ತದೆ ಎಂದರು.

ಕೋಡಗುರ್ಕಿ ಗೌತಮ ಆಶ್ರಮದ ಸುಬ್ರಮಣ್ಯ ಸ್ವಾಮೀಜಿ ಮಾತನಾಡಿ, ಅಜ್ಞಾನದ ಅಂಧಕಾರದಿಂದ ಹೊರಬಂದು ನಿಜವಾದ ಬೆಳಕಿನ ಕಡೆಗೆ ಸಾಗಬೇಕಾಗಿರುವುದು ಮಾನವ ಧರ್ಮ. ಧರ್ಮಪಾಲನೆಯಲ್ಲಿ ಪ್ರತಿಯೊಬ್ಬರೂ ಬದ್ಧತೆ ತೋರಿಸಬೇಕು ಎಂದರು.

ಸಮಾಜದಲ್ಲಿನ ಅಲ್ಪ ಭೋಗಗಳಿಗೆ ಸಿಲುಕಿಕೊಳ್ಳುತ್ತಿರುವ ಯುವಜನರು ಮೋಹದ ಬಲೆಗೆ ಸಿಕ್ಕಿ ಸತ್ಯದ ಮಾರ್ಗವನ್ನು ಮರೆಯುತ್ತಿದ್ದಾರೆ. ಅಂತಹವರಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಸದ್ಬೋಧನೆಯಾಗಬೇಕು. ಮಾನವನ ಹುಟ್ಟು, ಸಾವಿನ ನಡುವಿನ ಕಾಲವನ್ನು ಉತ್ತಮವಾಗಿ ಮುನ್ನಡೆಸಬೇಕು. ಗುರುಗಳ ಮಾರ್ಗದರ್ಶನ ಪಡೆದಂತಹ ಯಾರೂ ಸಮಾಜದಲ್ಲಿ ಸೋಲನ್ನು ಕಂಡಿಲ್ಲ ಎಂದರು.

ಪುರಸಭಾ ಎಂಜಿನಿಯರ್ ಸುಪ್ರಿಯಾರಾಣಿ ಮಾತನಾಡಿ, ‘ಇಹಪರದ ನಡುವಿನ ಹೋರಾಟದಲ್ಲಿ ನಾವು ಸತ್ಯದ ಹಾದಿಯಲ್ಲಿ ನಡೆದು ಜಯ ಗಳಿಸಿಕೊಳ್ಳಬೇಕಾಗಿದೆ. ನ್ಯಾಯ, ನೀತಿ, ಧರ್ಮ, ಸತ್ಯ, ಪ್ರೀತಿಯೆಂಬ ಅಸ್ತ್ರಗಳನ್ನು ನಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡು ಹೋರಾಟ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಈ ಸತ್ಯವನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸಬೇಕಾಗಿದೆ’ ಎಂದರು.

ಪರಿಷೆಯ ಅಂಗವಾಗಿ ಕಡಲೆಕಾಯಿ ವಿತರಣೆ ಮಾಡಿದರು. ಕಾರ್ತಿಕ ಮಾಸದ ಅಂಗವಾಗಿ ಮಠದಲ್ಲಿ ಒಂದು ವಾರದಿಂದ ಅಖಂಡ ಭಜನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT