ದೇವನಹಳ್ಳಿ: ‘ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾದರೆ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಯಾಗುತ್ತವೆ. ಪ್ರತಿ ಗ್ರಾಮದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಹಿಂದೆ ಶಾಸಕರು ಗ್ರಾಮಗಳಲ್ಲಿ ₹ 5 ಲಕ್ಷದಿಂದ ₹ 10 ಲಕ್ಷ ಮೊತ್ತದ ಕಾಮಗಾರಿ ಮಾಡುತ್ತಿದ್ದರು. ಇದೀಗ ಒಂದು ಗ್ರಾಮಕ್ಕೆ ₹ 50 ಲಕ್ಷದಿಂದ ₹ 1 ಕೋಟಿ ವೆಚ್ಚದಡಿ ಕಾಂಕ್ರೀಟ್ ರಸ್ತೆ ಮಾಡಿಸಲಾಗುತ್ತಿದೆ ಎಂದರು.
‘ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ. ಗುಣಮಟ್ಟದ ರಸ್ತೆಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಚುನಾವಣಾ ನೀತಿಸಂಹಿತೆ ಜಾರಿಯಾಗುವುದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯಲಿ. ಬಿದಲೂರು, ಪಂಡಿತಪುರ, ಸುಣ್ಣಘಟ್ಟ, ಆಲೂರು, ಕೊಯಿರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಆಲೂರು ಗ್ರಾಮದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ. ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದರು.
ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ರಾಮಣ್ಣ, ಉಪಾಧ್ಯಕ್ಷೆ ಕಾಂತ ಮುನಿರಾಜು, ಸದಸ್ಯರಾದ ರಘು, ಅಂಬಿಕಾ, ಜಯಲಕ್ಷ್ಮಮ್ಮ ಮುನಿರಾಜು, ಮಾಜಿ ಅಧ್ಯಕ್ಷರಾದ ಮುನೇಗೌಡ, ರಾಜಣ್ಣ, ಮಾಜಿ ಸದಸ್ಯ ಕದಿರಪ್ಪ, ಮುನಿಆಂಜಿನಪ್ಪ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.