ಸೋಮವಾರ, ಜನವರಿ 17, 2022
21 °C
ಕೋವಿಡ್‌ ಸೋಂಕು ತಡೆಗೆ ಸಹಕರಿಸಲು ಮನವಿ

ದೊಡ್ಡಬಳ್ಳಾಪುರ: ಮುನ್ನೆಚ್ಚರಿಕೆ ಡೋಸ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಕೋವಿಡ್ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವಲ್ಲಿ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಆರೋಗ್ಯ ಇಲಾಖೆಯು ಲಸಿಕೆ ಹಾಕಲು ಹೆಚ್ಚಿನ ಕ್ರಮಕೈಗೊಳ್ಳಬೇಕು’ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆರೋಗ್ಯ ಇಲಾಖೆ, ಮುಂಚೂಣಿ ಕಾರ್ಯಕರ್ತರು, ಸಹ ಅಸ್ವಸ್ಥತೆ ಹೊಂದಿರುವ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ತಡೆಗಟ್ಟುವಲ್ಲಿ ಲಸಿಕೆ ಪ್ರಮುಖ ಪಾತ್ರವಹಿಸಲಿದೆ. ಇನ್ನೂ ಮೊದಲನೇ ಹಾಗೂ ಎರಡನೇ ಡೋಸ್ ಪಡೆಯದೇ ಇರುವವರು ಲಸಿಕೆ ಹಾಕಿಸಿಕೊಳ್ಳಬೇಕಿದೆ. ಅಗತ್ಯವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರದಷ್ಟೇ ಅಲ್ಲದೇ ವಾರ್ಡ್‍ವಾರು ಲಸಿಕಾ ಕೇಂದ್ರಗಳನ್ನು ವ್ಯವಸ್ಥೆ ಮಾಡುವ ಮೂಲಕ ಲಸಿಕೆ ಕಾರ್ಯವನ್ನು ಚುರುಕುಗೊಳಿಸಬೇಕಿದೆ. ಕೋವಿಡ್ ಹಾಗೂ ಲಸಿಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.

ತಾಲ್ಲೂಕಿನಲ್ಲಿ ಕೋವಿಡ್ ಎರಡನೇ ಅಲೆ ತೀವ್ರತೆ ಇರುವಾಗ ಆರಂಭದಲ್ಲಿ ಆಮ್ಲಜನಕ, ಬೆಡ್‍ಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಅವೆಲ್ಲವನ್ನೂ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಮರ್ಪಕ ವಾಗಿ ಎದುರಿಸಿದೆ. ಈಗ ಮೂರನೇ ಅಲೆ ತಡೆಗೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಆದರೆ, ಸಮಸ್ಯೆ ತೀವ್ರ ಗೊಳ್ಳುವುದಕ್ಕೆ ಮುನ್ನ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.

ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಕೋವಿಡ್ ಎರಡನೇ ಡೋಸ್ ಶೇ 85ರಷ್ಟು ಮಾತ್ರ ಗುರಿ ಮುಟ್ಟಿದೆ. ಲಸಿಕೆ ಪಡೆಯದೇ ಇರುವವರು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಲಾಗಿದ್ದು, ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ಗ್ರಾಮ ಪಂಚಾಯಿತಿ ಪಿಡಿಒ ಅವರೊಂದಿಗೆ ಟಾಸ್ಕ್‌ಪೋರ್ಸ್‌ ಸಭೆ ಕರೆಯುವುದು, ಜನಪ್ರತಿನಿಧಿಗಳ ಸಭೆ ಕರೆದು ಶೇ 100ರಷ್ಟು ಕೋವಿಡ್ ಲಸಿಕೆ ಪ್ರಗತಿ ಸಾಧಿಸಲು ಸೂಚಿಸಲಾಗಿದೆ ಎಂದರು.

ಇದೇ ವೇಳೆ ಶಾಸಕ ವೆಂಕಟರಮಣಯ್ಯ ಸೇರಿದಂತೆ ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಬಿ. ನವೀನ್‌ಕುಮಾರ್, ಉದ್ಯಮಿ ಟಿ.ಎಸ್. ಮಹದೇವಯ್ಯ ಸೇರಿದಂತೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಮೇಶ್, ಡಾ.ಹರಿಪ್ರಸಾದ್, ಡಾ.ಅರುಣ್‌ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.