ಬುಧವಾರ, ನವೆಂಬರ್ 20, 2019
27 °C

ಪರಿಸರ ಸಂರಕ್ಷಣೆ ಜಾಗೃತಿಗೆ ಗುಡ್ಡಗಾಡು ಓಟ

Published:
Updated:
Prajavani

ಆನೇಕಲ್: ‘ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ಮುಕ್ತ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ’ ಎಂದು ಬೃಂದಾವನ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್‌.ಶೇಖರ್‌ ಹೇಳಿದರು.

ಅವರ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಬೃಂದಾವನ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಅಂತರ್‌ಶಾಲಾ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಪ್ರಚಲಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಬೃಂದಾವನ ಶಾಲೆಯು ಪರಿಸರ ಸಂರಕ್ಷಣೆ, ಗಿಡ ಮರಗಳನ್ನು ಬೆಳೆಸುವುದು, ಪ್ಲಾಸ್ಟಿಕ್‌ ಬಳಕೆಯ ನಿಷೇಧ, ಆರೋಗ್ಯ ಮತ್ತಿತರ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಗುಡ್ಡಗಾಡು ಓಟ ಆಯೋಜಿಸಲಾಗಿದೆ. 9 ಕಿ.ಮೀ. ಓಟದಲ್ಲಿ 1,400 ವಿದ್ಯಾರ್ಥಿಗಳು ಭಾಗಿಗಳಾಗಿದ್ದರು. ತಮ್ಮನಾಯಕನಹಳ್ಳಿ, ಇಂಡ್ಲವಾಡಿ, ಚಿಕ್ಕನಹಳ್ಳಿ, ನೊಸೇನೂರು, ಸಿದ್ಧನಪಾಳ್ಯ ಗ್ರಾಮಗಳಲ್ಲಿ ಓಟ ನಡೆಯಿತು. ಈ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ’ ಎಂದರು.

ಸಂಸ್ಥೆಯ ನಿರ್ದೇಶಕ ಧನುಷ್‌ ಮಾತನಾಡಿ, ‘ಪ್ಲಾಸ್ಟಿಕ್‌ನಿಂದ ಹಲವಾರು ಕಾಯಿಲೆಗಳು ಬರುತ್ತವೆ. ಭೂಮಿಯಲ್ಲಿ ಪ್ಲಾಸ್ಟಿಕ್ ಕೊಳೆಯದೇ ಹಾಗೇ ಉಳಿಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಪ್ರಾಣಿ ಪಕ್ಷಿಗಳು ಪ್ಲಾಸ್ಟಿಕ್‌ನ್ನು ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿವೆ. ಮನುಷ್ಯನ ಆರೋಗ್ಯಕ್ಕೂ ಬಾಧಕವಾಗಿರುವ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಮನೆ ಮನೆಗಳಲ್ಲೂ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಗುರಿ ನಿರ್ಧರಿಸಿಕೊಂಡು ಗುರಿಯತ್ತ ಸಾಗಲು ಸತತ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ಹೆಚ್ಚಿನ ಪ್ರೋತ್ಸಾಹವನ್ನು ಕಲ್ಪಿಸಲಾಗಿದೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಪುಷ್ಪಲತಾ, ಪ್ರಾಚಾರ್ಯರಾದ ಮಂಜುನಾಥ್‌, ಪ್ಯಾಟ್ರಿಕ್‌, ರಾಜಣ್ಣ, ಕಮಲಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)