ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕಾಲುವೆಯ ಹೂಳು ತೆಗೆಯಲು ಒತ್ತಾಯ

ಎಚ್.ಎನ್.ವ್ಯಾಲಿ ಯೋಜನೆ ನೀರು
Last Updated 23 ಜುಲೈ 2020, 14:33 IST
ಅಕ್ಷರ ಗಾತ್ರ

ವಿಜಯಪುರ: ‘ತೀವ್ರ ಬರಗಾಲಕ್ಕೆ ತುತ್ತಾಗಿ ನೀರಿನ ಬವಣೆ ಅನುಭವಿಸುತ್ತಿರುವ ಬಯಲು ಸೀಮೆ ಭಾಗಗಳಿಗೆ ಸರ್ಕಾರ, ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಜಾರಿಗೆ ತಂದಿರುವ ಎಚ್.ಎನ್.ವ್ಯಾಲಿ ಯೋಜನೆಯಡಿ ಈ ಭಾಗಕ್ಕೆ ಹರಿಯುತ್ತಿರುವ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹರಿಸುವುದಾಗಿ ಹೇಳಿದ್ದ ಅಧಿಕಾರಿಗಳು ಇದುವರೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಹೋಬಳಿಯ ವೆಂಕಟಗಿರಿಕೋಟೆಯಲ್ಲಿ ಮಾತನಾಡಿದ ಅವರು, ‘ಎಚ್.ಎನ್.ವ್ಯಾಲಿ ಯೋಜನೆಯಡಿ ಇಲ್ಲಿನ ಕೆರೆಗಳಿಗೆ ನೀರು ಹರಿಸುತ್ತಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ನೀರು ಹರಿಯುತ್ತಿರುವ ಕಾಲುವೆಯಲ್ಲಿನ ಹೂಳು ತೆಗೆಯದ ಕಾರಣದಿಂದಾಗಿ ನೀರಿನೊಂದಿಗೆ ಮಳೆಯ ನೀರೂ ಸೇರಿಕೊಂಡು ಕಾಲುವೆಯಲ್ಲಿ ಸರಾಗವಾಗಿ ಹರಿಯದೇ ಸುತ್ತಮುತ್ತಲಿನ ತೋಟಗಳಿಗೆ ನುಗ್ಗುತ್ತಿವೆ’ ಎಂದರು.

ಈಗಾಗಲೇ ಎಚ್.ಎನ್.ವ್ಯಾಲಿ ಯೋಜನೆಯಡಿ ಆವತಿ ಕೆರೆಗೆ ನೀರು ತುಂಬಿಸಲಾಗಿದೆ. ಅಲ್ಲಿಂದ ಕೋಡಿ ಹರಿದುಕೊಂಡು ವೆಂಕಟಗಿರಿಕೋಟೆ ಕೆರೆಗೆ ನೀರು ಕಾಲುವೆಯ ಮೂಲಕ ಹರಿದು ಬರುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿಕೊಂಡಿರುವುದರ ಜೊತೆಗೆ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದರು.

ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯರೊಬ್ಬರು ಜೆಸಿಬಿ ಸಹಾಯದಿಂದ ನೀರು ಪೋಲಾಗುವುದನ್ನು ತಡೆದಿದ್ದಾರೆ. ಇಲ್ಲಿನ ಕೆರೆಗೆ ಹರಿಯುತ್ತಿರುವ ನೀರು ಸಣ್ಣದಾಗಿ ಹರಿಯುತ್ತಿದ್ದು, ಎರಡು ವರ್ಷಗಳಾದರೂ ತುಂಬಲು ಸಾಧ್ಯವಾಗುವುದಿಲ್ಲ. ಪೈಪ್ ಲೈನ್ ಮೂಲಕ ಹರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT