ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ನಗರ ವ್ಯಾಪ್ತಿಗೆ ಗ್ರಾಮಾಂತರ ಠಾಣೆ ಸೇರ್ಪಡೆ ?

ಮಾಹಿತಿ ನೀಡುವಂತೆ ಠಾಣೆ ಮುಖ್ಯಸ್ಥರಿಗೆ ಮಾಹಿತಿ ಪತ್ರ
ಸಂದೀಪ್‌
Published 27 ಮಾರ್ಚ್ 2024, 4:12 IST
Last Updated 27 ಮಾರ್ಚ್ 2024, 4:12 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿವಿಧ ಪೊಲೀಸ್‌ ಠಾಣೆಗಳನ್ನು ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ಗೆ ಸೇರ್ಪಡೆ ಮಾಡುವ ಸಲುವಾಗಿ ಮಂಗಳವಾರ ಪೊಲೀಸ್ ಅಧೀಕ್ಷಕರ ಕಚೇರಿ ಸಂಬಂಧಪಟ್ಟ ಠಾಣೆ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ.

ದೇವನಹಳ್ಳಿ ವ್ಯಾಪ್ತಿಯ ಚನ್ನರಾಯಪಟ್ಟಣ ಪೊಲೀಸ್‌ ಠಾಣೆ, ವಿಶ್ವನಾಥಪುರ ಪೊಲೀಸ್‌ ಠಾಣೆ, ಸಮೀಪದ ರಾಜಾನುಕುಂಟೆ ಪೊಲೀಸ್ ಠಾಣೆ ಮಾಹಿತಿ ತಲುಪಿಸುವಂತೆ ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ಪತ್ರ ರವಾನೆಯಾಗಿದೆ.

ಹೊಸಕೋಟೆ ಭಾಗದ ಅವಲಹಳ್ಳಿ ಪೊಲೀಸ್ ಠಾಣೆ, ಆನೇಕಲ್‌ ವಿಭಾಗದ ಹೆಬ್ಬಗೋಡಿ, ಸೂರ್ಯನಗರ ಪೊಲೀಸ್‌ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಗೆ ತರುವ ಪ್ರಸ್ತಾಪ ಇದಾಗಿದೆ.

ನೆಲಮಂಗಲ ವ್ಯಾಪ್ತಿಯ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯನ್ನು ನಗರ ಪೊಲೀಸರ ವ್ಯಾಪ್ತಿಗೆ ತರುವ ಬಗ್ಗೆ ಉಲ್ಲೇಖವಿದೆ. ಈ ಠಾಣೆಗಳಲ್ಲಿ 2021ರಿಂದ ನಡೆದಿರುವ ಅಪರಾಧ ಪ್ರಕರಣ ಕುರಿತಾದ ಮಾಹಿತಿ, ಠಾಣೆಯ ವ್ಯಾಪ್ತಿ ಹಾಗೂ ಜನಸಂಖ್ಯೆ ಕುರಿತು ಮಾಹಿತಿಯನ್ನು ಕೇಳಲಾಗಿದೆ.

ದೇವನಹಳ್ಳಿ ಟೌನ್‌ ಪೊಲೀಸ್‌ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಕಠಿಣ ಕಾನೂನು ಹೇರಿಕೆಯಿಂದ ಬೇಸತ್ತು ಮತ್ತೆ ಈ ಠಾಣೆಯನ್ನು ಜಿಲ್ಲಾ ಎಸ್‌.ಪಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಈ ಕುರಿತು ಇಲಾಖೆ ವರದಿ ಸಿದ್ಧವಾಗಿ ಪೊಲೀಸ್‌ ಮಹಾ ನಿರ್ದೇಶಕರಿಗೆ ಸಲ್ಲಿಕೆಯಾಗಿ ಸರ್ಕಾರದ ಹಂತದಲ್ಲಿ ಬಾಕಿ ಇತ್ತು. ಈಗ ಒಮ್ಮೆಲೆಗೆ ಜಿಲ್ಲಾ ಎಸ್‌.ಪಿ ವ್ಯಾಪ್ತಿಗೆ 7 ಪೊಲೀಸ್‌ ಠಾಣೆಯನ್ನು ಬೆಂಗಳೂರು ನಗರಕ್ಕೆ ಸೇರ್ಪಡೆ ಮಾಡಲು ಇಲಾಖೆ ಸಜ್ಜಾಗುತ್ತಿದೆ.

 ವೇತನದಲ್ಲಿ ತಾರತಮ್ಯ: ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ನೇಮಕವಾಗಿರುವ ಪೊಲೀಸರಿಗೆ ಈಗಾಗಲೇ ವೇತನದಲ್ಲಿ ತಾರತಮ್ಯ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿ ಹೊರತಾಗಿ ಇರುವ ಇತರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗೆ ಗೃಹ ಭತ್ಯೆಯಲ್ಲಿ ಕಡಿತವಾಗಿ ಎರಡು ವರ್ಷವೇ ಕಳೆದಿದೆ.

ಶಾಂತಿ ಸುವ್ಯವಸ್ಥೆ ಕಾಪಾಡುವ ಇಲಾಖೆ ಸಿಬ್ಬಂದಿಗೆ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆಯಾದರೆ ಅವರ ಸಂಬಳದಲ್ಲಿ ಕಡಿತವಾಗಲಿದೆ. ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ ಎಂಬ ಮಾತುಗಳು ಕೇಳಿ ಬಂದಿದೆ. ಪುನಃ 7 ಗ್ರಾಮಾಂತರ ಪೊಲೀಸ್ ಠಾಣೆಯನ್ನು ನಗರ ವ್ಯಾಪ್ತಿಗೆ ತಂದರೆ ಅಲ್ಲಿಗೆ ವರ್ಗಾವಣೆಯಾಗುವವರಿಗೂ ವೇತನ ತಾರತಮ್ಯ ಆಗುವ ಸಾಧ್ಯತೆ ಇದೆ ಎನ್ನುವ ಆರೋಪವೂ ಇದೆ.

ಬೆಂಗಳೂರು ನಗರ ವ್ಯಾಪ್ತಿಗೆ ಬರಲಿರುವ ಠಾಣೆಗಳು

ದೊಡ್ಡಬಳ್ಳಾಪುರ ಉಪ ವಿಭಾಗ

1. ರಾಜಾನುಕುಂಟೆ ಪೊಲೀಸ್‌ ಠಾಣೆ

2. ವಿಶ್ವನಾಥಪುರ ಪೊಲೀಸ್ ಠಾಣೆ

3. ಚನ್ನರಾಯಪಟ್ಟಣ ಪೊಲೀಸ್‌ ಠಾಣೆ

ಹೊಸಕೋಟೆ ಉಪ ವಿಭಾಗ

1. ಅವಲಹಳ್ಳಿ ಪೊಲೀಸ್‌ ಠಾಣೆ

ಆನೇಕಲ್‌ ಉಪ ವಿಭಾಗ

1. ಹೆಬ್ಬಗೋಡಿ ಪೊಲೀಸ್‌ ಠಾಣೆ

2. ಸೂರ್ಯ ನಗರ ಪೊಲೀಸ್ ಠಾಣೆ

ನೆಲಮಂಗಲ ಉಪ ವಿಭಾಗ

1. ಮಾದನಾಯಕನಹಳ್ಳಿ ಪೊಲೀಸ್ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT