ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ತೋಟದಲ್ಲೇ ಕೊಳೆಯುತ್ತಿದೆ ಟೊಮೆಟೊ

ಕುಸಿದ ಬೆಲೆ: ಕೈ ಸೇರದ ಹಾಕಿದ ಬಂಡವಾಳ– ರೈತರ ಅಳಲು
Last Updated 18 ಏಪ್ರಿಲ್ 2023, 4:17 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿತದಿಂದ ಬೇಸರಗೊಂಡಿರುವ ರೈತರು ಕಟಾವು ಮಾಡದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ತೋಟಗಳಲ್ಲಿ ಟೊಮೆಟೊ ಕೊಳೆಯುತ್ತಿದೆ. ಹಾಕಿದ ಬಂಡವಾಳವು ಕೈ ಸೇರಲಿಲ್ಲವೆಂದು ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ 60 ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮೆಟೊ ಬೆಳೆ ಬೆಳೆದಿದ್ದಾರೆ. ಬಹುತೇಕ ರೈತರು, ಚಿಂತಾಮಣಿ, ಚಿಕ್ಕಬಳ್ಳಾಪುರ, ಹಾಗೂ ಯಶವಂತಪುರ ಹಾಗೂ ಕೋಲಾರದ ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಂಡು ಬರುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ 22 ಕೆ.ಜಿಯ ಒಂದು ಬಾಕ್ಸ್ ಟೊಮೆಟೊ ಬೆಲೆ ₹450–500ಯಿಂದ ಕೇವಲ 120 ರೂಪಾಯಿಗೆ ಕುಸಿದಿದೆ. ಇದರಿಂದ ರೈತರಿಗೆ ಹಾಕಿದ ಬಂಡವಾಳವು ಸಿಗದಂತಾಗಿದೆ.

ಹಣ್ಣು ಬಿಡಿಸುವ ಕಾರ್ಮಿಕರಿಗೆ ಕೂಲಿ ಕೊಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ, ಒಂದು ಬಾಕ್ಸ್ ಕೆಳಗೆ ಇಳಿಸಲು ಹಾಗೂ ಸುಂಕವಾಗಿ ತಲಾ ₹5 ಕೊಡಬೇಕು. ಸಾಗಾಣಿಕೆಗೆ ₹1500 ತಗುಲುತ್ತದೆ. ಇಷ್ಟು ವೆಚ್ಚ ಮಾಡಿ ಬೆಳೆಯನ್ನು ಮಾರುಕಟ್ಟೆ ತಲುಪಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ತೋಟಗಳಲ್ಲಿ ಹಣ್ಣು ಕೀಳುವುದನ್ನು ಬಿಟ್ಟುಬಿಟ್ಟಿದ್ದೇವೆ ಎಂದು ಇಲ್ಲಿನ ರೈತರು ಅಳಲು ತೋಡಿಕೊಂಡರು.

ಉತ್ತಮ ಗುಣಮಟ್ಟದಲ್ಲಿರುವ ಹಣ್ಣು ಮಾತ್ರ ಒಂದು ಬಾಕ್ಸ್ ₹250 ಗೆ ಮಾರಾಟವಾಗುತ್ತಿದೆ ಎಂದು ರೈತ ಅವಿನಾಶ್ ಹೇಳುತ್ತಾರೆ.

ಟೊಮೆಟೊ ಬೆಳೆಯಿಂದ ರೈತರಿಗೆ ನಷ್ಟ ಆಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಹಾಗೂ ಎ.ಪಿ.ಎಂ.ಸಿ. ಮಾರುಕಟ್ಟೆಗಳಿಗೆ ಹೋಗುವ ರೈತರಿಂದ ಖರೀದಿ ಮಾಡಲು ಬೆಂಬಲ ಬೆಲೆ ನಿಗದಿ ಪಡಿಸಿಬೇಕು ಎಂದು ರೈತರು ಒತ್ತಾಯಿಸಿದರು.

ಮನೆ ಮಂದಿಯಲ್ಲ ದುಡಿದರೂ ಸಿಗದ ಫಲ: ‘ಅಂತರ್ಜಲದ ಮಟ್ಟ ತೀವ್ರ ಕುಸಿದಿದ್ದರೂ ರೈತರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಕೊಳವೆಬಾವಿಗಳಿಂದ ನೀರು ತೆಗೆದು ತೋಟಗಳಲ್ಲಿ ಬೆಳೆ ನಾಟಿ ಮಾಡಿದ್ದೇವೆ. ಹಾಕಿದ ಬಂಡವಾಳ ಕೂಡಾ ಸಿಗುತ್ತಿಲ್ಲ. ದಿಢೀರ್‌ ಆಗಿ ಬೆಲೆ ಕುಸಿದಿದೆ. ಕಾರ್ಮಿಕರಿಗೆ ಕೂಲಿ ಕೊಡಬೇಕು ಎಂದು ಮನೆ ಮಂದಿಯೆಲ್ಲಾ ಎರಡು ತಿಂಗಳ ಕಾಲ ತೋಟದಲ್ಲಿ ದುಡಿದಿದ್ದೇವೆ. ಅದರ ಫಲ ಮಾತ್ರ ಮಾತ್ರ ಶೂನ್ಯವಾಗಿದೆ’ ಎನ್ನುತ್ತಾರೆ ರೈತ ರವಿಕುಮಾರ್‌.

ಒಂದು ಬಾಕ್ಸ್ ಕನಿಷ್ಠ ₹300-400 ರೂಪಾಯಿ ಬೆಲೆ ಸಿಕ್ಕಿದರೆ ವು ಹಾಕಿದ ಬಂಡವಾಳವಾದರೂ ಸಿಗುತ್ತಿತು. ಇದರಿಂದ ಕಟಾವು ಮಾಡಲು ಬೇಸರ ಆಗುತ್ತಿದೆ. ಇದರಿಂದ ಹಾಗೇ ಬಿಟ್ಟಿದ್ದೇವೆ. ಹಣ್ಣುಗಳು ಕೊಳೆಯುತ್ತಿವೆ. ಕೆಲವು ರೈತರು ತೋಟಗಳನ್ನು ಹಣ್ಣುಗಳ ಸಮೇತ ಕಿತ್ತುಹಾಕಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT