ವಾಲ್ಮೀಕಿ ಜಯಂತಿ: ಪ್ರತ್ಯೇಕ ಆಚರಣೆಗೆ ಮುಖಂಡರ ಪಟ್ಟು

6
ಕಾರ್ಯಕ್ರಮಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ: ಅಸಮಾಧಾನ

ವಾಲ್ಮೀಕಿ ಜಯಂತಿ: ಪ್ರತ್ಯೇಕ ಆಚರಣೆಗೆ ಮುಖಂಡರ ಪಟ್ಟು

Published:
Updated:
Deccan Herald

ದೇವನಹಳ್ಳಿ: ಸರ್ಕಾರದ ವತಿಯಿಂದ ಪ್ರತಿವರ್ಷ ನಡೆಸುವ ವಾಲ್ಮೀಕಿ ಜಯಂತಿಗೆ ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಜಯಂತಿ ಅಂಗವಾಗಿ ಗುರುವಾರ ನಡೆದ ವಾಲ್ಮೀಕಿ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿದರು.

ಪೂರ್ವಭಾವಿ ಸಭೆ ನಡೆಸಲು ಎರಡು ಬಾರಿ ದಿನಾಂಕ ನಿಗದಿ ಮಾಡಿದ್ದರೂ ತಹಶೀಲ್ದಾರ್ ಗೈರಾದರೆ ಹೇಗೆ? ಶಾಸಕರಿಗೆ ಮಾಹಿತಿ ನೀಡದೆ ಸಭೆ ದಿನಾಂಕ ನಿಗದಿ ಮಾಡಲಾಗಿದೆ. ಸಭೆಗೆ ಕೆಲವು ಮುಖಂಡರಿಗೆ ಮಾತ್ರ ಮಾಹಿತಿ ನೀಡಲಾಗಿದೆ. ಉಳಿದಂತೆ ಎಲ್ಲರಿಗೂ ವ್ಯಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಲಾಗಿದೆ. ಈ ಸಂದೇಶ ಎಲ್ಲರಿಗೂ ತಲುಪಿಲ್ಲ. ಎಲ್ಲರೂ ವ್ಯಾಟ್ಸ್‌ಆ್ಯಪ್‌ ನೋಡಿಕೊಂಡೇ ಇರುತ್ತಾರೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೂರ್ಯಕಲಾ ಮಾತನಾಡಿ, ಸರ್ಕಾರದ ಪ್ರತಿಯೊಂದು ಜಯಂತಿಗೂ ಮಹಿಳೆಯರನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ ಮಾತನಾಡಿ, ಸರ್ಕಾರದ ಇಲಾಖೆ ವತಿಯಿಂದ ಅಧಿಕಾರಿಗಳು ಆಚರಣೆ ಮಾಡಲಿ. ವಾಲ್ಮೀಕಿ ಸಮುದಾಯ ಪ್ರತ್ಯೇಕವಾಗಿ ಆಚರಣೆ ಮಾಡಿಕೊಳ್ಳಲಿದೆ ಎಂದು ಪಟ್ಟುಹಿಡಿದರು. ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಸರಿಯಾದ ಸಂವಹನ ಸಾಧ್ಯವಾಗದೆ ಇರುವುದರಿಂದ ಈ ಗೊಂದಲವಾಗಿದೆ ಎಂದು ಸಮಜಾಯಿಷಿ ನೀಡಿದರು.

‘ಇಲಾಖೆ ಮತ್ತು ವಾಲ್ಮೀಕಿ ಸಮುದಾಯ ಪ್ರತ್ಯೇಕವಾಗಿ ಆಚರಣೆ ಮಾಡಲು ಶಾಸಕನಾಗಿ ನಾನು ಬಿಡುವುದಿಲ್ಲ. ಅದು ಸಮಂಜಸವೂ ಅಲ್ಲ. ಸಮುದಾಯದಲ್ಲೇ ಪ್ರತ್ಯೇಕತೆ ಬೇಡ. ಒಗ್ಗಟ್ಟಿನಿಂದ ಆಚರಿಸಬೇಕು’ ಎಂದು ಮನವಿ ಮಾಡಿದರು.

‘ಅ.13ರಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಜಾನಪದ ಕಲಾ ತಂಡಗಳು ಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿ ವತಿಯಿಂದ ಹೂವಿನ ಪಲ್ಲಕ್ಕಿ ಬರಬೇಕು. ಎಲ್ಲ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಣೆ ಮಾಡಬೇಕು. ಇದಕ್ಕೆ ನನ್ನ ಸಹಕಾರ ಇದೆ’ ಎಂದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಬಮೂಲ್ ಉಪಾಧ್ಯಕ್ಷ ಬಿ.ಶ್ರೀನಿವಾಸ್, ಜೆಡಿಎಸ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ, ವಾಲ್ಮೀಕಿ ಸಂಘ ವಿವಿಧ ಘಟಕ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !