ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಣ ತೆತ್ತರೂ ಭೂಮಿ ಕೊಡಲ್ಲ’

ಹುಲಿಕುಂಟೆ ವ್ಯಾಪ್ತಿಯ 600 ಎಕರೆ ಕೃಷಿಭೂಮಿ ಸ್ವಾಧೀನ: ಪಕ್ಷಾತೀತ ಹೋರಾಟ ಸಮಿತಿ ಅಸ್ತಿತ್ವಕ್ಕೆ
Last Updated 23 ನವೆಂಬರ್ 2020, 4:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹುಲಿಕುಂಟೆ ವ್ಯಾಪ್ತಿಯ 600 ಎಕರೆ ಪ್ರದೇಶದಲ್ಲಿ ‘ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌’ (ಎಂಎಂಎಲ್‌ಪಿ) ಸ್ಥಾಪನೆ ಮಾಡಲು ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ. ಈ ಕುರಿತಂತೆ ಪಕ್ಷಾತೀತವಾಗಿ ಸಮಿತಿ ರಚಿಸಿಕೊಂಡು ಹೋರಾಟ ತೀವ್ರಗೊಳಿಸಲು ಗ್ರಾಮದಲ್ಲಿ ಭಾನುವಾರ ನಡೆದ ರೈತರ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆ ಅಧ್ಯಕ್ಷೆ ವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೈಗಾರಿಕೆ ಸ್ಥಾಪನೆಗೆ ನಮ್ಮದು ವಿರೋಧ ಇಲ್ಲ. ಆದರೆ, ಈಗಾಗಲೇ ತಾಲ್ಲೂಕಿನಲ್ಲಿ ಬಾಶೆಟ್ಟಿಹಳ್ಳಿ ಹಾಗೂ ಹುಲಿಕುಂಟೆ ಗಡಿಭಾಗದ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಕಾರ್ಖಾನೆಗಳು ಸ್ಥಾಪನೆಯಾಗದೆ ಸಾವಿರಾರು ಎಕರೆ ಭೂಮಿ ಪಾಳುಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಕೈಗಾರಿಕೆ ಸ್ಥಾಪನೆ ನೆಪದಲ್ಲಿ ನೂರಾರು ಎಕರೆ ಕೃಷಿ ಭೂಮಿ ವಶಪಡಿಸಿಕೊಂಡು ರೈತರನ್ನು ಬೀದಿಪಾಲು ಮಾಡುವುದು ಅವೈಜ್ಞಾನಿಕ ಕ್ರಮ ಎಂದರು.

ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಮಾತನಾಡಿ, ‘ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಾವುಗಳು ಕೈಗಾರಿಕೆಗಳಿಗೆ ಭೂಮಿ ನೀಡಿದ್ದರ ಫಲವಾಗಿ ನಮ್ಮೂರಿನಲ್ಲಿ ಕುಡಿಯಲು ನೀರು ಯೋಗ್ಯವಿಲ್ಲದಷ್ಟು ಅಂತರ್ಜಲ ಕಲುಷಿತವಾಗಿದೆ. ಕೈಗಾರಿಕೆ
ಗಳಿಗೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಸ್ಥಳೀಯರಿಗೆ ಹಾಗೂ ಭೂಮಿ ಕಳೆದುಕೊಳ್ಳುವ ಕುಟುಂಬ
ದವರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕೈಗಾರಿಕೆಗಳಲ್ಲಿನ ಬಾಗಿಲು ಕಾವಲು, ಕಸ ಗುಡಿಸುವ ಕೆಲಸಗಳು ಮಾತ್ರ ಸ್ಥಳೀಯರಿಗೆ ನೀಡಲಾಗುತ್ತಿದೆ. ಉತ್ತರ ಭಾರತದ ಜನರೇ ಬಾಶೆಟ್ಟಿಹಳ್ಳಿಯಲ್ಲಿನ ಕೈಗಾರಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ. ಅರ್ಹತೆ ಇದ್ದರೂ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ದೂರಿದರು.

ಕೈಗಾರಿಕಾ ಪ್ರದೇಶದ ಸುತ್ತಲಿನ ಗ್ರಾಮಗಳಲ್ಲಿ ಹಗಲಿನ ವೇಳೆಯಲ್ಲೇ ಮಹಿಳೆಯರು ರಸ್ತೆಗಳಲ್ಲಿ ನಡೆದಾಡಲು ಭಯಪಡುವ ವಾತಾವರಣ ಉಂಟಾಗಿದೆ. ಕಳವು ಪ್ರಕರಣಗಳು ಮಿತಿ ಮೀರಿವೆ. ಇಷ್ಟೆಲ್ಲಾ ಹಾವಳಿಗೆ ಕಾರಣ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಬಂದಿರುವ ಹೊರಗಿನ ಜನರು. ಹಣದ ವ್ಯಾಮೋಹಕ್ಕೆ ಒಳಗಾಗಿ ಒಮ್ಮೆ ಕೃಷಿ ಭೂಮಿ ಕಳೆದುಕೊಂಡರೆ ಮತ್ತೆ ಸಂಪಾದನೆ ಮಾಡುವುದು ಕಷ್ಟವಾಗಲಿದೆ. ಹೀಗಾಗಿ ತಾಲ್ಲೂಕಿನಲ್ಲಿ ಈಗಾಗಲೇ ಇರುವ ಕೈಗಾರಿಕೆಗಳ ಸಂಖ್ಯೆಯೇ ಹೆಚ್ಚಾಗಿದೆ. ಕೈಗಾರಿಕೆಗಳೇ ಇಲ್ಲದ ತಾಲ್ಲೂಕುಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಮಾಡಲಿ ಎಂದು ಅವರು ಹೇಳಿದರು.

ಕೈಗಾರಿಕೋದ್ಯಮಿ ವಿಶ್ವನಾಥ್‌ ಮಾತನಾಡಿ, ಕೈಗಾರಿಕೆಗಳಷ್ಟೇ ಕೃಷಿ ಭೂಮಿ ಇರಬೇಕು. ಹಿರಿಯರ ನೆಲೆ ಉಳಿಸಿಕೊಳ್ಳಲು ಸದ್ಯಕ್ಕೆ ಹೋರಾಟವೇ ಇರುವ ಏಕೈಕ ಮಾರ್ಗವಾಗಿದೆಎಂದರು.

ಭೇಟೆ ರಂಗನಾಥಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಸೋಮಶೇಖರ್‌ ಮಾತನಾಡಿ, ’ನಮ್ಮ ಭೂಮಿ ಕಳೆದುಕೊಂಡರೆ ಬಸ್‌ ನಿಲ್ದಾಣಗಳಲ್ಲಿ ಸೌತೆಕಾಯಿ, ಕಳ್ಳೆಕಾಯಿ ಮಾರುವ ಸ್ಥಿತಿ ಬರಲಿದೆ. ನಮ್ಮ ಮಕ್ಕಳು ಕೈಗಾರಿಕೆಗಳ ಮುಂದೆ ಕೆಲಸಕ್ಕಾಗಿ ಕೈಕಟ್ಟಿ ನಿಲ್ಲುವ ಸ್ಥಿತಿ ಬರಲಿದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗಬೇಕಾಗಿದೆ‘ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್‌, ಅಪ್ಪಕಾರನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ರಾಮಣ್ಣ,ಹುಲಿಕುಂಟೆ ಸೃಷ್ಟಿ ತಂಡದ ಕುಮಾರಸ್ವಾಮಿ, ದೇವರಾಜ್‌, ಹುಲಿಕುಂಟೆಮೂರ್ತಿ, ರಘು ಸೇರಿದಂತೆ ರೈತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT