ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯೋಗಿಕ ಮಾರುಕಟ್ಟೆಯಿಂದ ಆರ್ಥಿಕ ಸಬಲತೆ

ಬೆಂಗಳೂರು ಪದ್ಮನಾಭನಗರದಲ್ಲಿ ರೈತರ ತರಕಾರಿ ಮಾರಾಟಕ್ಕೆ ವ್ಯವಸ್ಥೆ
Last Updated 21 ಏಪ್ರಿಲ್ 2020, 15:25 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರು ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಬೆಂಗಳೂರು ಪದ್ಮನಾಭನಗರದಲ್ಲಿ ಆರಂಭಿಸಿರುವ ಪ್ರಾಯೋಗಿಕ ಮಾರುಕಟ್ಟೆ ಹೊಸ ಭರವಸೆ ಮೂಡಿಸಿದೆ.

ಕೊರೊನಾ ವೈರಾಣು ಸೋಂಕು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‌ಡೌನ್ ಆದೇಶ ಜಾರಿಗೊಳಿಸಿದ ಸಂದರ್ಭದ ಆರಂಭದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು.

ಕೃಷಿ ಚಟುವಟಿಕೆ ಸೇರಿದಂತೆ ರೈತರು ಬೆಳೆದ ಉತ್ಪನ್ನ ಮಾರಾಟ ಮತ್ತು ಸರಬರಾಜುಗೆ ಸಂಬಂಧಪಟ್ಟ ನಿಯಮಗಳನ್ನು ಸಡಿಲಿಸುವ ಮೂಲಕ ಸರ್ಕಾರ ರೈತರ ಸಹಾಯಕ್ಕೆ ನೆರವಾಗುತ್ತಿದೆ. ರೈತರ ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ರಾಯೋಗಿಕ ಸೂಕ್ತ ಮಾರುಕಟ್ಟೆ ಕಲ್ಪಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಅವರು ಈಚೆಗೆ ಸೂಚನೆ ನೀಡಿದ್ದರು.

ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಸಿದ ಸಭೆ ಬೆನ್ನಲ್ಲೇ ಅವರ ಸೂಚನೆ ಮೇರೆಗೆ ಮರುದಿನ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜು ಮತ್ತು ದೊಡ್ಡಬಳ್ಳಾಪುರ ಶಾಸಕರಾದ ಟಿ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲ್ಲೂಕಿನ ಪ್ರಮುಖ ರೈತರ ಸಭೆ ಪ್ರತಿಫಲವಾಗಿ ಪ್ರಾಯೋಗಿಕ ಮಾರುಕಟ್ಟೆ ಸ್ಥಾಪನೆಗೊಂಡಿದೆ.

ಜಿಲ್ಲೆ ರೈತರು ಆರಂಭದಲ್ಲಿ ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಬೆಂಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಮಾರಾಟ ಮಾಡಿದರು. ಬಳಿಕ ನಂತರದ ದಿನಗಳಲ್ಲಿ ಆ ಕ್ಷೇತ್ರದಲ್ಲಿರುವ ಕೆಲವು ಅಪಾರ್ಟ್‌ ಮೆಂಟ್‌ಗಳ ವಿಳಾಸ ಮತ್ತು ಸಂಪರ್ಕ ಪಡೆದು ಅಲ್ಲೂ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ತಾಜಾ ಮತ್ತು ಗುಣಮಟ್ಟದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿದ ತೃಪ್ತಿ ಗ್ರಾಹಕರಿಗೂ ಇದೆ.

ಬೆಂಗಳೂರಿನ ಮಾರತಹಳ್ಳಿಯಲ್ಲಿ ಇರುವ ಅರ್ಪಾಮೆಂಟ್‌ವೊಂದರಲ್ಲೂ ಮಾರಾಟಕ್ಕೆ ಅವಕಾಶ ಸಿಕ್ಕಿದೆ.ಈ ಪರ್ಯಾಯ ಪ್ರಾಯೋಗಿಕ ಮಾರುಕಟ್ಟೆ ರೈತರ ಜೀವನ ಆರ್ಥಿಕವಾಗಿ ಸಬಲಗೊಳ್ಳಲು ನೆರವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ರೈತರ ಸಹಕಾರದಿಂದ ಪ್ರಾಯೋಗಿಕ ಮಾರುಕಟ್ಟೆಯ ಪ್ರಯೋಜನೆ ಪಡೆಯಲು ಸಾಧ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆ ಗ್ರಾಮಾಂತರ ಜಿಲ್ಲೆ ಉಪನಿರ್ದೇಶಕ ಮಹಾಂತೇಶ್ ಮುರಗೋಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT