ಬುಧವಾರ, ಸೆಪ್ಟೆಂಬರ್ 18, 2019
26 °C
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ

‘ದೇಶದ ಪ್ರಗತಿಯಲ್ಲಿ ಶಿಕ್ಷಣ ಪ್ರಮುಖವಾದದ್ದು’

Published:
Updated:
Prajavani

ದೇವನಹಳ್ಳಿ: ದೇಶದ ಒಟ್ಟಾರೆ ಪ್ರಗತಿಯಲ್ಲಿ ಶಿಕ್ಷಣ ಅತ್ಯಂತ ಪ್ರಮುಖವಾಗಿದೆ ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ 132ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಶೇಕಡಾವಾರು ಸಾಕ್ಷರತೆಯು ಅತಿಮುಖ್ಯವಾಗಿದೆ. ಪ್ರಾಥಮಿಕ ಶಿಕ್ಷಣದ ಅಡಿಗಲ್ಲು ಭವಿಷ್ಯದ ಅದರ್ಶ ನಾಯಕರು ಬೆಳಕಿಗೆ ಬರಲು ಕಾರಣ. ಬಾಲ್ಯದಲ್ಲಿ ಗುರುಗಳ ಕಲಿಕೆಯ ಒಂದೊಂದು ಹಂತದ ನೆನಪು ವ್ಯಕ್ತಿ ಸಾಯುವರೆಗೆ ಉಳಿಯುತ್ತದೆ ಎಂದು ಹೇಳಿದರು.

ಬದುಕಿನ ಬುತ್ತಿಯನ್ನು ಕಟ್ಟಿಕೊಡುವುದರ ಜೊತೆಗೆ ಸಮಾಜದಲ್ಲಿ ಗೌರವಯುತ ನಾಗರಿಕರನ್ನಾಗಿ ಮಾಡುವ ಶಿಕ್ಷಕರು, ಶಿಕ್ಷಕರಾಗಿ ನಿವೃತ್ತಿಯಾಗುತ್ತಾರೆ. ಶಿಕ್ಷಕರು ಬೋಧಿಸಿದ ಪಾಠ ಕಲಿತ ವಿದ್ಯಾರ್ಥಿಗಳು ಅದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್ ಮತ್ತು ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಕಳೆದ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ 10ನೇ ತರಗತಿ ಫಲಿತಾಂಶ ರಾಜ್ಯ ಮಟ್ಟದಲ್ಲಿ ಜಿಲ್ಲೆ 3ನೇ ಸ್ಥಾನ ಪಡೆಯಲು ಶಿಕ್ಷಕರ ಶ್ರಮ ಮುಖ್ಯಕಾರಣವಾಗಿದೆ ಎಂದರು.

ಶಿಕ್ಷಕರು ತಮ್ಮ ಕರ್ತವ್ಯವನ್ನು ವೃತ್ತಿಯನ್ನಾಗಿ ಸ್ವಿಕರಿಸದೇ ಸಾಮಾಜಿಕ ಸೇವೆ ಎಂದು ಕೆಲಸ ಮಾಡಬೇಕು, ಶಿಕ್ಷಕರ ವೃತ್ತಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇಗೌಡ ಮಾತನಾಡಿ, ಗ್ರಾಮಾಂತರ ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಯಲ್ಲಿ 1055 ಶಾಲೆಗಳಿದ್ದು 3300 ಶಿಕ್ಷಕರಿದ್ದಾರೆ.

255 ಪ್ರೌಢ ಶಾಲೆ ವ್ಯಾಪ್ತಿಯಲ್ಲಿ 800 ಶಿಕ್ಷಕರಿದ್ದಾರೆ ಒಟ್ಟು 1.52 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ಶಿಕ್ಷಕರ ಜವಾಬ್ದಾರಿ ಎಷ್ಟಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಧಾಕೃಷ್ಣನ್ ಅವರು ವಿದ್ವಾಂಸರಾಗಿ, ತತ್ವಜ್ಞಾನಿಯಾಗಿ ವಿಶ್ವಕ್ಕೆ ಮಾದರಿ ಶಿಕ್ಷಕರಾಗಿದ್ದರು ಎಂದು ಹೇಳಿದರು. ಪಾಶ್ಚಿಮಾತ್ಯ ಮತ್ತು ಹಿಂದು ಸಂಸ್ಕೃತಿಯನ್ನು ಸಮ್ಮಿಲನಗೊಳಿಸಿ ಶಿಕ್ಷಕರ ಮಹತ್ವವನ್ನು ಜಗತ್ತಿಗೆ ಸಾರಿದ್ದರು. ಸ್ವಾಮಿ ವಿವೇಕಾನಂದ ಅವರು ಭಾರತದ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಅನಾವರಣಗೊಳಿಸಿದವರು. ಮುಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಸಿದ್ಧತೆಯಲ್ಲಿದೆ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಶಿಕ್ಷಕರು ಮಕ್ಕಳ ಭವಿಷ್ಯದ ಭದ್ರ ಬುನಾದಿ ಹಾಕುವ ಶಿಲ್ಪಿಗಳು. ಯಾವುದೇ ಕ್ಷೇತ್ರ ಪ್ರಗತಿಯತ್ತ ಸಾಗಬೇಕಾದರೆ ಅದರ ಹಿಂದಿನ ಶಕ್ತಿಗಳು ಶಿಕ್ಷಕರು. ಗುರುಗಳನ್ನು ನಿಂದಿಸುವ ಕೆಲಸ ಯಾರು ಮಾಡಬಾರದು, ಗುರುಗಳ ಆಶಿರ್ವಾದದಿಂದ ನಾವು ಬೆಳೆದು ಈ ಮಟ್ಟದ ವೇದಿಕೆ ಮೇಲೆ ಇದ್ದೇವೆ. ಜೀವನದುದ್ದಕ್ಕೂ ಗುರುಗಳನ್ನು ಸ್ಮರಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು’ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಆನೇಕ ಶಾಲೆಗಳು ಹೈಟೆಕ್ ಆಗಿ ಪರಿವರ್ತನೆಯಾಗುತ್ತಿದ್ದರು ಇನ್ನು ಕೆಲ ಶಾಲೆಗಳಲ್ಲಿ ಮೂಲ ಸೌಲಭ್ಯದ ಕೊರತೆ ಇದೆ. ಪಟ್ಟಿ ಮಾಡಿ ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ತಪಸಿಹಳ್ಳಿ ಗುರುಕುಲ ಪೀಠದ ದಿವ್ಯಾನಂದ ಸ್ವಾಮೀಜಿ ಮಾತನಾಡಿದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಆರ್. ಮುನೇಗೌಡ, ಪುರಸಭೆ ಸದಸ್ಯ ನಾಗೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರ ದೇವಿ ಇದ್ದರು.

Post Comments (+)