ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ದರ ಏರಿಕೆ: ನೇಕಾರರಿಗೆ ಗಾಯದ ಮೇಲೆ ಬರೆ

ಶುಲ್ಕ ಕಡಿಮೆಯಾಗದಿದ್ದರೆ ಹೋರಾಟದ ಎಚ್ಚರಿಕೆ
Published 14 ಜೂನ್ 2023, 11:47 IST
Last Updated 14 ಜೂನ್ 2023, 11:47 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಂಕಷ್ಟದಲ್ಲಿರುವ ನೇಕಾರರಿಗೆ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ಇನ್ನೂ 15 ದಿನಗಳಲ್ಲಿ ವಿದ್ಯುತ್‌ ದರ ಕಡಿಮೆ ಮಾಡದಿದ್ದರೆ ನೇಕಾರರ ಸಂಘಟನೆಗಳು ಹೋರಾಟ ನಡೆಸುತ್ತವೆ ಎಂದು ಎಚ್ಚರಿಕೆ ನೀಡಿವೆ.

ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ನೇಕಾರರ ಸಮಸ್ಯೆಗಳ ಕುರಿತಂತೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ ಎಂದರು.  

ನೇಯ್ಗೆ ಉದ್ಯಮ ಎರಡು ವರ್ಷಗಳಿಂದ ಬಿಕ್ಕಟ್ಟಿನಲ್ಲಿದೆ. ನೇಕಾರರು ನೇಯ್ದ ಸೀರೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೋವಿಡ್-19, ಜಿಎಸ್‍ಟಿ ಗಳಿಂದ ತತ್ತರಿಸಿರುವ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೇ ವಿದ್ಯುತ್‌ ದರ ಏರಿಕೆ ಮಾಡಿದೆ. ಇದರೊಂದಿಗೆ ಪಿಎಫ್ ದಂಡ, ಬಡ್ಡಿ, ಇತರೆ ಶುಲ್ಕಗಳು ಸೇರಿದಂತೆ ನೂರಾರು ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.

ನೇಕಾರರಿಗೆ ನೀಡುತ್ತಿದ್ದ ಸಹಾಯಧನ ಇಲ್ಲದಿದ್ದರೆ ನೇಕಾರರು ಮಗ್ಗಗಳನ್ನು ನಿಲ್ಲಿಸಿ, ಅನ್ಯ ಮಾರ್ಗ ಹಿಡಿಯುವ ಪರಿಸ್ಥತಿ ನಿರ್ಮಾಣವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚುನಾವಣೆಗೂ ಮುನ್ನ ನೇಕಾರರಿಗೆ 20 ಎಚ್‌ಪಿವರೆಗೆ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ನೀಡಿದ್ದರು ಎಂದರು.

ಹಕ್ಕೋತ್ತಾಯಗಳು: ಸರ್ಕಾರ ಈ ಕೂಡಲೇ ವಿದ್ಯುತ್ ಶುಲ್ಕ ಕಡಿಮೆ ಮಾಡಬೇಕು. ನೋಂದಾಯಿಸಿಕೊಂಡಿರುವ ನೇಕಾರರಿಗೆ ಗುರುತಿನ ಚೀಟಿ ನೀಡಬೇಕು. ಎಲೆಕ್ಟ್ರಾನಿಕ್ ಜಾಕಾರ್ಡ್ ಹಾಗೂ ಮಗ್ಗಗಳ ಸಹಾಯಧನಕ್ಕೆ ಅರ್ಜಿ ಸಲ್ಲಿಸಿರುವ ನೇಕಾರರರಿಗೆ ಸಹಾಯಧನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಆರ್.ಎಚ್.ಶ್ರೀನಿವಾಸ್, ಸಿ.ಸುರೇಶ್, ಖಜಾಂಚಿ ಕೆ.ಮಲ್ಲೇಶ್, ಸಹ ಕಾರ್ಯದರ್ಶಿ ಎಂ.ಚೌಡಯ್ಯ, ಮುನಿರಾಜು, ರಘುಕುಮಾರ್, ಮುಖಂಡರಾದ ರಾಜಶೇಖರ್, ಶಿವಶಂಕರ್, ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT