ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಜಾಗೃತಿಯಿಂದ ಭ್ರಷ್ಟಾಚಾರ ನಿರ್ಮೂಲನೆ

ಅತ್ತಿಬೆಲೆಯಲ್ಲಿ ಕುವೆಂಪು ಜಯಂತ್ಯುತ್ಸವ, ಸ್ನೇಹ ಬಂಧನ ಕಾದಂಬರಿ ಬಿಡುಗಡೆ
Last Updated 28 ಡಿಸೆಂಬರ್ 2019, 14:46 IST
ಅಕ್ಷರ ಗಾತ್ರ

ಆನೇಕಲ್: ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ, ಕಾನೂನುಗಳಿಂದ ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಉಂಟು ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಅತ್ತಿಬೆಲೆ ಪಬ್ಲಿಕ್‌ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಜಯಂತ್ಯುತ್ಸವ ಮತ್ತು ಸ್ನೇಹ ಬಂಧನ ಕಾದಂಬರಿ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲವಾರು ಕಾನೂನುಗಳನ್ನು ತಂದರೂ ಭ್ರಷ್ಟಾಚಾರ ತಡೆಯಲು ಸಾಧ್ಯವಾಗಲಿಲ್ಲ. ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚಾಗುತ್ತಲೇ ಇದೆ. 1950ರಲ್ಲಿ ₹51 ಸಾವಿರದ ಭ್ರಷ್ಟಾಚಾರ ಪ್ರಕರಣ ಬಯಲಿಗೆ ಬಂದಿತ್ತು. 1994ರಲ್ಲಿ ₹64 ಕೋಟಿಯ ಹಗರಣ ಬೆಳಕಿಗೆ ಬಂತು. ಇತ್ತೀಚೆಗೆ 1.76 ಲಕ್ಷ ಕೋಟಿಯ ಹಗರಣ ಬಯಲಿಗೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಖಜಾನೆಯ ಹಣ ನಿರಂತವಾಗಿ ಸೋರಿಕೆಯಾಗುತ್ತಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಒಂದು ರೂಪಾಯಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದರೆ ಕೇವಲ 15 ಪೈಸೆ ಫಲಾನುಭವಿಗಳಿಗೆ ತಲುಪುತ್ತದೆ. 85 ಪೈಸೆ ಸೋರಿಕೆಯಾಗುತ್ತದೆ ಎಂದು ರಾಜೀವ್‌ ಗಾಂಧಿ ಹೇಳಿದ್ದರು. ಪ್ರಸ್ತುತ ಈ ಪ್ರಮಾಣ ಇನ್ನು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದರು.

ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಅತೃಪ್ತಿ ಕಾಡುತ್ತಿದೆ. ಎಷ್ಟು ಬಂದರೂ ಸಾಲದು ಎಂಬ ಮನೋಭಾವನೆಗೆ ಒಳಗಾಗಿದ್ದಾರೆ. ಹಣ ಗಳಿಕೆಯಲ್ಲಿ ಪ್ರಾಮಾಣಿಕತೆಯಿರಬೇಕು. ಕಾನೂನು ಬದ್ಧವಾಗಿರಬೇಕು ಎಂಬುದು ಪ್ರತಿಯೊಬ್ಬರ ಸಂಕಲ್ಪವಾಗಬೇಕು ಎಂದರು.

ಮಾನವೀಯತೆಯನ್ನು ಸಾರಿದ ಮಹಾನ್‌ ಚೇತನ ಕುವೆಂಪು ಅವರು ವಿಶ್ವ ಮಾನವ ಕಲ್ಪನೆಯನ್ನು ಜನರಿಗೆ ನೀಡಿದರು. ನಾಡುನುಡಿಯ ಏಳ್ಗೆಗೆ ಅವರು ಸಲ್ಲಿಸಿದ ಕೊಡುಗೆ ಅಪಾರವಾದದ್ದು. ಹಾಗಾಗಿ ವಿಶ್ವಕವಿಯ ಜಯಂತ್ಯುತ್ಸವದ ಸಂದರ್ಭದಲ್ಲಿ ಮಾನವೀಯತೆ ಪ್ರತಿಯೊಬ್ಬರ ಮೂಲಮಂತ್ರವಾಗಬೇಕು ಎಂದರು.

ಸಾಹಿತಿ ತಾ.ಸಿ.ತಿಮ್ಮಯ್ಯ ‘ಸ್ನೇಹ ಬಂಧನ’ ಕಾದಂಬರಿಯ ಬಗ್ಗೆ ಮಾತನಾಡಿ ಸ್ನೇಹ ಸಂಬಂಧಗಳು ದೂರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕಾದಂಬರಿಯು ಸ್ನೇಹ, ವಿಶ್ವಾಸ, ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದರು.

ಮಂಜುನಾಥ್‌ ಬನಸೀಹಳ್ಳಿ ವಿರಚಿತ ಕಾದಂಬರಿಯನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಸಿ.ಕೆ.ರಾಮೇಗೌಡ ಅವರು ಕುವೆಂಪು ಅವರ ಜೀವನ ಸಾಧನೆ ಬಗ್ಗೆ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್‌.ರಾಮಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್‌ ಪಟಾಪಟ್‌, ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಿ.ಮುನಿರಾಜು, ಹೆಬ್ಬಗೋಡಿ ನಗರಸಭಾ ಸದಸ್ಯ ರಾಜೇಂದ್ರಪ್ಪ, ಚಂದಾಪುರ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಮಂಜುನಾಥ್‌ಗೌಡ, ಜ್ಯೋತಿ ಗಾಯನಸಭಾ ನಿರ್ದೇಶಕ ಭಾಗಪ್ಪ ಗೊರನಾಳ, ನಿವೃತ್ತ ಉಪನ್ಯಾಸಕ ಪ್ರಭಾಕರರೆಡ್ಡಿ, ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್‌.ವೀರಭದ್ರಪ್ಪ, ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಮಹೇಶ್‌ ಊಗಿನಹಳ್ಳಿ ಹಾಜರಿದ್ದರು. ಕವಿಗೋಷ್ಠಿ, ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT