ಮಂಗಳವಾರ, ಸೆಪ್ಟೆಂಬರ್ 21, 2021
20 °C
ವಾಡಿಕೆಗಿಂತ ಹೆಚ್ಚು ಮಳೆ

ಉತ್ತಮ ಮಳೆ: ರಾಗಿ ಇಳುವರಿ ಹೆಚ್ಚಳ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ರಾಗಿ ಕಣಜವೆಂದು ಖ್ಯಾತಿಗಳಿಸಿರುವ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಗಿ ಬೆಳೆಯು ಉತ್ತಮವಾಗಿ ಬೆಳೆದಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.

ವಾಡಿಕೆಯಂತೆ ಇಲ್ಲಿಯವರೆಗೆ 453 ಮಿ.ಮೀ ಮಳೆ ಬೀಳುತ್ತಿತ್ತು. ಆದರೆ, ಈ ವರ್ಷ 502.85 ಮಿ.ಮೀ ಮಳೆಯಾಗಿದೆ. ಮಳೆಯನ್ನೇ ನಂಬಿ

ಕೃಷಿ ನಡೆಸುತ್ತಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಆನೇಕಲ್‌ ತಾಲ್ಲೂಕಿನ 7,300 ಹೆಕ್ಟೇರ್‌ ಪ್ರದೇಶದಲ್ಲಿ ಮಳೆಯಾಧಾರಿತ ಕೃಷಿ ನಡೆಯುತ್ತಿದ್ದು ಈ ಪೈಕಿ 6,060 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ. ತಾಲ್ಲೂಕಿನ ಕಸಬಾ ಹೋಬಳಿಯು ರಾಗಿ ಕೃಷಿಗೆ ಪ್ರಸಿದ್ಧಿ. ಚಿಕ್ಕಹೊಸಹಳ್ಳಿ, ಇಂಡ್ಲವಾಡಿ, ತಮ್ಮನಾಯಕನಹಳ್ಳಿ, ಚೂಡಹಳ್ಳಿ ಭಾಗದಲ್ಲಿ ರಾಗಿ ಬೆಳೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ತೋಟಗಾರಿಕೆ ಬೆಳೆಗಳಿಗಿಂತ ಮಳೆಯಾಶ್ರಿತ ಕೃಷಿಯನ್ನೇ ನಂಬಿದ್ದಾರೆ.

ರಾಗಿಯಲ್ಲಿ ಸ್ಥಳೀಯ ತಳಿಯ(ಸಣ್ಣ ಕಡ್ಡಿ ರಾಗಿ) ಆಹಾರ ಆರೋಗ್ಯಕ್ಕೆ ಒಳ್ಳೆಯದ್ದು ಎಂಬ ಭಾವನೆ ಜನರಲ್ಲಿದೆ. ಹಿಂದಿನ ವರ್ಷಗಳಲ್ಲಿ ಬಹುತೇಕ ಹೊಲಗಳಲ್ಲಿ ಸಣ್ಣ ಕಡ್ಡಿ ರಾಗಿಯನ್ನೇ ಬೆಳೆಯುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಉತ್ತಮ ಮೇವು ಎಂದು ಗುರುತಿಸಲಾಗಿರುವ ಎಂಆರ್‌ 1, ಎಂಆರ್‌ 6, ಎಂಎಲ್‌ 365 ತಳಿಗಳಿಗೆ ರೈತರು ಹೆಚ್ಚು ಒತ್ತು ನೀಡಿದ್ದಾರೆ. ರಾಗಿ ಫಸಲಿನ ಜೊತೆಗೆ ದನ, ಕರುಗಳಿಗೆ ಉತ್ತಮ ಮೇವು ಆಗಿರುವುದರಿಂದ ಬಹುತೇಕ ರೈತರು ಈ ತಳಿಗಳ ಒಲವು
ತೋರಿದ್ದಾರೆ.

ಕಳೆದ ವರ್ಷ ಒಂದು ಹೆಕ್ಟೇರ್‌ಗೆ 22-23 ಕ್ವಿಂಟಲ್‌ ರಾಗಿ ಫಸಲು ಬಂದಿದೆ. ತಾಲ್ಲೂಕಿನ ಮಣ್ಣು ರಾಗಿ ಬೆಳೆಗೆ ಹೇಳಿಮಾಡಿಸಿದಂತಿದೆ. ಹಾಗಾಗಿ ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ತೆಗೆಯಲು ಸಾಧ್ಯ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಹೇಳುತ್ತಾರೆ.

ಚಿಕ್ಕಹೊಸಹಳ್ಳಿಯ ಪ್ರಗತಿಪರ ರೈತ ನಾಗರಾಜು ಮಾತನಾಡಿ, ರಾಗಿ ತಿಂದವನು ನಿರೋಗಿ ಎಂಬ ಗಾದೆಯಿದೆ. ಹಾಗಾಗಿ ರಾಗಿಯ ಮುದ್ದೆ, ಗಂಜಿ, ಪೌಷ್ಟಿಕ ಆಹಾರವಾಗಿದೆ. ಹಾಗಾಗಿ ಈ ಭಾಗದಲ್ಲಿ ರಾಗಿ ಬೆಳೆಗೆ ಹೆಚ್ಚಿನ ಬೇಡಿಕೆಯಿದೆ. ಕಡ್ಡಿ ರಾಗಿ ಹಿಂದೆ ಬೆಳೆಯಲಾಗುತ್ತಿತ್ತು. ಈ ಬೆಳೆಯ ಇಳುವರಿ ಕಡಿಮೆ ಆದರೆ ಆರೋಗ್ಯಕ್ಕೆ ಅತ್ಯುತ್ತಮವಾಗಿತ್ತು. ಇತ್ತೀಚಿನ ದಿನಗಳಲ್ಲಿ ಹೊಸ ತಳಿಗಳನ್ನು ಬಳಕೆ ಮಾಡಲಾಗುತ್ತಿದೆ. ಜಿಪಿ 28 ರಾಗಿ ತಳಿ ಹೆಚ್ಚು ಇಳುವರಿ ನೀಡುತ್ತದೆ. ಹಾಗಾಗಿ ಹೆಚ್ಚಿನ ರೈತರು ಇದೇ ತಳಿಯನ್ನು ಬಿತ್ತನೆ ಮಾಡಿದ್ದಾರೆ ಎಂದು ತಿಳಿಸಿದರು.

ಚಿಕ್ಕಹೊಸಹಳ್ಳಿಯ ಚಂದ್ರಶೇಖರ್‌ ಮಾತನಾಡಿ, ರಾಗಿ ಬೆಳೆಗೆ ಈ ಭಾಗದ ಭೂಮಿ ಹೇಳಿ ಮಾಡಿಸಿದಂತಿದೆ. ಕಡಿಮೆ ಮಳೆಯಲ್ಲೂ ರಾಗಿ ಬೆಳೆ ಬೆಳೆಯಲು ಸಾಧ್ಯ. ಹಾಗಾಗಿ ಪೂರ್ವಿಕರ ಕಾಲದಿಂದಲೂ ರಾಗಿ ಬೆಳೆಯನ್ನು ನೆಚ್ಚಿಕೊಂಡು ಈ ಭಾಗದ ರೈತರು ಜೀವನ ಸಾಗಿಸುತ್ತಿದ್ದಾರೆ. ರಾಗಿ ಬೆಳೆಯಲು ಒಂದು ಎಕರೆಗೆ ₹ 15-20 ಸಾವಿರ ವೆಚ್ಚವಾಗುತ್ತದೆ. ಈ ವರ್ಷ ಉತ್ತಮ ಮಳೆಯಾಗಿದ್ದು ಉತ್ತಮ ಫಸಲು ಬರುವ ನಿರೀಕ್ಷೆಯಿದೆ
ಎಂದರು.

ಆನೇಕಲ್‌ ತಾಲ್ಲೂಕು ರಾಗಿ ಕಣಜವೆಂದು ಖ್ಯಾತಿಗಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಡಾವಣೆಗಳು, ಕೈಗಾರೀಕರಣದ ಪ್ರಭಾವದಿಂದಾಗಿ ಕೃಷಿ ಜಮೀನು ಕಡಿಮೆಯಾಗಿದೆ. ಆದರೂ ತಾಲ್ಲೂಕಿನ ವಿವಿಧೆಡೆ ರಾಗಿ ಬೆಳೆ ಬೆಳೆಯಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.